ಕುಂಬಳೆ: ಹಸಿರು ಇಂದು ನಮ್ಮ ಪರಿಸರದಿಂದ ಮಾಯವಾಗುತ್ತಿದೆ. ಕಾಂಕ್ರೀಟೀಕರಣಕ್ಕೆ ನಾವು ಮಾರುಹೋಗುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹರಿತ ಕೇರಳ ಮಿಶನ್ ಹಸಿರು ತಾಣ ಎಂಬ ಹಸಿರು ಬೆಳೆಸಿ ಉಳಿಸುವ ಯೋಜನೆಯೊಂದಕ್ಕೆ ರೂಪು ನೀಡಿದೆ. ಇಂದು ಅದು ಕುಂಬಳೆ ಗ್ರಾಮ ಪಂಚಾಯತಿನ ಕಿದೂರು ಕುಂಟಂಗೇರಡ್ಕದಲ್ಲಿ ಸಾರ್ಥಕವಾಗಿದೆ ಎಂದು ಹಸಿರು ತಾಣವನ್ನು ಉದ್ಘಾಟಿಸಿ ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರಿಕಾಕ್ಷ ಕೆ.ಎಲ್. ಅವರು ತಿಳಿಸಿದರು.
ಕಿದೂರು ಪಕ್ಷಿ ಪ್ರೇಮಿ ತಂಡವು ಪಾಳು ಬಿದ್ದ ಸರಕಾರಿ ಭೂಮಿಯನ್ನು ಕಳೆದ ಮೂರು ವರ್ಷದಿಂದ ಜೈವ ಬೇಲಿ ನಿರ್ಮಿಸಿ ಅಲ್ಲಿ ಸ್ಥಳೀಯ ಸಸ್ಯ ಸಂಪತ್ತನ್ನು ಸಂರಕ್ಷಿಸಿ ಬರುತ್ತಿತ್ತು. ಇದೀಗ ಅದೇ ಜಾಗವನ್ನೇ ಹಸಿರು ತಾಣವನ್ನಾಗಿ ಘೋಷಿಸಲಾಯಿತು. ಅಲ್ಲದೆ ಹೆಚ್ಚಿನ ಸಸ್ಯ ಪ್ರಭೇದಗಳನ್ನು ನೆಟ್ಟು ಬೆಳೆಸುವಲ್ಲಿ ಗ್ರಾಮೀಣ ಉದ್ಯೋಗ ಖಾತರಿಯ ಸದಸ್ಯರಿಗೆ ಜವಾಬ್ದಾರಿ ನೀಡಲಾಯಿತು.
ಗ್ರಾಮ ಪಂಚಾಯತಿ ಸದಸ್ಯರಾದ ಅರುಣಾ ಮಂಜುನಾಥ ಆಳ್ವ ಅಧ್ಯಕ್ಷತೆ ವಹಿಸಿದರು. ಹರಿತ ಕೇರಳ ಮಿಶನಿನ ಜಿಲ್ಲಾ ಸಂಯೋಜಕ ಅಭಿರಾಜ್, ಕುಂಬಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಜಯನ್, ಸಾಮಾಜಿಕ ಮುಂದಾಳು ಚಂದ್ರ ಕಾಜೂರು, ಚಂದ್ರಾವತಿ ಮಡ್ವ, ಕಿದೂರು ಪಕ್ಷಿ ಪ್ರೇಮಿ ತಂಡದ ಸದಸ್ಯರಾದ ರಾಜು ಕಿದೂರು, ಪ್ರದೀಪ್ ಕಿದೂರು, ರವಿಚಂದ್ರ ಕುಂಟಂಗೇರಡ್ಕ, ಸುಂದರ ಕೊಲ್ಲೂರು, ಜೋಯೆಲ್ ಕಿದೂರು ಮೊದಲಾದವರು ಉಪಸ್ಥಿತರಿದ್ದರು.


