ಕಾಸರಗೋಡು: ಬಿರುಸಿನ ಗಾಳಿಮಳೆಯ ಪರಿಣಾಮ ಜಿಲ್ಲೆಯಲ್ಲಿ ರೆಡ್ ಅಲೆರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ಪ್ರೊಫೆಷನಲ್ ಕಾಲೇಜುಗಳ ಸಹಿತ ಎಲ್ಲ ಶಿಕ್ಷಣಸಂಸ್ಥೆಗಳಿಗೆ ನಾಳೆ(ಜು.23) ರಜೆ ಸಾರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ಅಂಗನವಾಡಿಗಳಿಗೂ ಈ ರಜೆ ಅನ್ವಯವಾಗಿದೆ ಎಂದವರು ಹೇಳಿರುವರು.
ಜಿಲ್ಲೆಯಲ್ಲಿ ಸುರಿದುದು 1401.765 ಮಿಮೀ ಮಳೆ:
ಮಳೆಗಾಲ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಈ ವರೆಗೆ 1401.765 ಮಿಮೀ ಮಳೆ ಲಭಿಸಿದೆ. ಜು.21ರಂದು ಬೆಳಗ್ಗೆ 10 ಗಂಟೆಯಿಂದ ಜು.22 ಬೆಳಗ್ಗೆ 10 ಗಂಟೆ ವರೆಗೆ 115.075 ಮಿಮೀ ಮಳೆ ಸುರಿದಿದೆ. ಮಳೆ ಸಂಬಂಧ ಜಿಲ್ಲೆಯಲ್ಲಿ ಈ ವರೆಗೆ 5 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ತಾಸುಗಳ ಅವಧಿಯಲ್ಲಿ 2 ಮನೆಗಳು ಪೂರ್ಣ ರೂಪದಲ್ಲಿ, 30 ಮನೆಗಳು ಭಾಗಶಃ ಹಾನಿಗೀಡಾಗಿವೆ. ಮಳೆಗಾಲ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಈ ವರೆಗೆ 4 ಮನೆಗಳು ಪೂರ್ಣ ರೂಪದಲ್ಲಿ, 122 ಮನೆಗಳು ಭಾಗಶಃ ಹಾನಿಗೊಂಡಿವೆ. 163 ವಿದ್ಯುತ್ ಕಮಭಗಳು ಧರೆಗುರುಳಿವೆ.
ಎತ್ತರದ ತೆರೆ ಸಾಧ್ಯತೆ:
ನಾಳೆ(ಜು.23) ರಾತ್ರಿ 11.30ವರೆಗೆ ಪೋಳಿಯೂರಿನಿಂದ ಕಾಸರಗೋಡು ವರೆಗಿನ ಕಡಲತೀರದಲ್ಲಿ 3.5 ರಿಂದ 4.1 ಮೀಟರ್ ವರೆಗೆ ಎತ್ತರದ ತೆರೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸಮುದ್ರ ಸ್ಥಿತಿ ಅಧ್ಯಯನ ಕೇಂದ್ರ ತಿಳಿಸಿದೆ.
ಬಿರುಸಿನಗಾಳಿ ಸಾಧ್ಯತೆ:
ಕೇರಳದ ಕರಾವಳಿಯಲ್ಲಿ ಪಶ್ಚಿಮ ದಿಕ್ಕಿನಿಂದ ತಾಸಿಗೆ 40ರಿಂದ 50 ಕಿಮೀ ವರೆಗಿನ ವೇಗದಲ್ಲಿ ಬಿರುಸಿನ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಕೇಂದ್ರ ತಿಳಿಸಿದೆ. ಇದರಿಂದ ಕಡಲುಬ್ಬರ ಕಾಣಿಸಿಕೊಳ್ಳುವ ಸಾಧ್ಯತೆಯಿರುವುದರಿಂದ ಮೀನುಗಾರರು ಕಡಲಿಗೆ ತೆರಳಕೂಡದು ಎಂದು ಸೂಚಿಸಲಾಗಿದೆ. ಜು.23ರಿಂದ 26 ವರೆಗೆ ಇದೇ ಸ್ಥಿತಿಯಿರುವುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.


