ಮಂಜೇಶ್ವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜಲ ಸಂರಕ್ಷಣೆಯ ಮಹತ್ವಾಕಾಂಕ್ಷೆಯೊಂದಿಗೆ ಕೆರೆಗಳ ಅಭಿವೃದ್ದಿ ಮತ್ತು ಸಂರಕ್ಷಣೆಯ ದೃಷ್ಟಿಯಿಂದ "ನಮ್ಮೂರು, ನಮ್ಮ ಕೆರೆ" ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಜಿಲ್ಲೆಯಲ್ಲೇ ಮೊತ್ತಮೊದಲ ಬಾರಿಗೆ ಈ ಯೋಜನೆಯಡಿ ಪುನಶ್ಚೇತನಗೊಂಡ ಅರಿಂಗುಳ ಕೆರೆಯು ಸುಮಾರು ಮೂರು ಗ್ರಾಮಗಳ ಅಂತರ್ಜಲ ಮಟ್ಟದ ಹೆಚ್ಚುವಿಕೆ ಮತ್ತು ತನ್ಮೂಲಕ ರೈತರಿಗೆ ಕೃಷಿ ಬೆಳವಣಿಗೆಗೆ ಪ್ರಯೋಜನವಾಗಲಿದೆ. ಆದರೆ ಈ ಕೆರೆ ಮಲಿನವಾಗದಂತೆ ಕಾಯ್ದುಕೊಳ್ಳುವ ಹೊಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಕೆ.ಮಹಾವೀರ ಅಜ್ರಿ ಅವರು ತಿಳಿಸಿದರು.
ಹೊಸಂಗಡಿ ಸಮೀಪದ ಮುರತ್ತಣೆ ಅರಿಂಗುಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಡಿ.ಸಿ.ಟ್ರಸ್ಟ್ ಕಾಸರಗೋಡು, ವರ್ಕಾಡಿ ಗ್ರಾ.ಪಂ. ಮತ್ತು ಕೆರೆ ಅಭಿವೃದ್ದಿ ಸಮಿತಿ ಹೊಸಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪುನಶ್ಚೇತನಗೊಳಿಸಿದ ಅರಿಂಗುಳ ಕೆರೆಗೆ ಬುಧವಾರ ಬಾಗಿನ ಅರ್ಪಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಿವರ್ಯ ರಾಜೇಶ್ ತಾಳಿತ್ತಾಯ ಅವರು ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ದೀಪ ಬೆಳಗಿಸಿ ವಿಧಿವಿಧಾನಗಳಿಂದ ಚಾಲನೆ ನೀಡಿದರು. ವರ್ಕಾಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ.ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಬ್ಲಾ.ಪಂ.ಸದಸ್ಯೆ ಆಶಾಲತಾ ಬಿ.ಎಂ. ಪೆಲಪ್ಪಾಡಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಭಾಗ್, ಧಾರ್ಮಿಕ, ಸಾಮಾಜಿಕ ಮುಂದಾಳು ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ವರ್ಕಾಡಿ ಗ್ರಾ.ಪಂ.ಸದಸ್ಯರಾದ ತುಳಸಿ ಕುಮಾರಿ, ಗೋಪಾಲಕೃಷ್ಣ ಪಜ್ವ, ವಸಂತ ಎಸ್., ಸೀತಾ, ಪೂರ್ಣಿಮಾ, ಸದಾಶಿವ ವಕಾಡಿ, ಯೋಜನೆಯ ನಿರ್ದೇಶಕ ಸತೀಶ ಶೆಟ್ಟಿ, ಒಕ್ಕೂಟದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್, ಕೆರೆ ನಿರ್ಮಾಣ ಸಮಿತಿ ಅಧ್ಯಕ್ಷ ಆನಂದ ತಚ್ಚಿರೆ, ಉಪಾಧ್ಯಕ್ಷ ಜನಾರ್ದನ ಅರಿಂಗುಳ ಮೊದಲಾದವರು ಉಪಸ್ಥಿತರಿದ್ದು ಶುಭಾಶಂಸನೆಗೈದರು.ಕೆರೆ ಅಭಿವೃದ್ದಿಗೆ ಶ್ರಮಿಸಿದ ಆನಂದ ತಚ್ಚಿರೆ, ತುಳಸಿ ಕುಮಾರಿ, ಜನಾರ್ದನ ಅರಿಂಗುಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೇಲ್ವಿಚಾರಕ ಅನಿಲ್ ವಂದಿಸಿದರು. ತಲಪಾಡಿ ವಲಯ ಮೇಲ್ವಿಚಾರಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.


