HEALTH TIPS

ಶೇಣಿ, ವೈ.ಡಿ ನಾಯಕ್ ಸ್ಮರಣೆ: ಬದಿಯಡ್ಕದಲ್ಲಿ ದ್ವಿದಿನ ತಾಳಮದ್ದಳೆ ಸಂವಾದ


      ಬದಿಯಡ್ಕ:  ಮಾತಿನ ಅರ್ಥತಲ್ಪಗಳನ್ನು ವಿಸ್ತರಿಸಿ, ಎತ್ತರಿಸಿದ ತಾಳಮದ್ದಳೆಯ ಶಕಪುರುಷ ದಿ.ಶೇಣಿ ಗೋಪಾಲಕೃಷ್ಣ ಭಟ್ ಮತ್ತು ಕಾಸರಗೋಡು ತಾಲೂಕಿಗೆ ತೆಂಕು-ಬಡಗಿನ ಶ್ರೇಷ್ಟ ಕಲಾವಿದರನ್ನು ಪರಿಚಯಿಸಿ, ಯಕ್ಷಕಲಾಸ್ವಾದನೆಯ ಮಿತಿ ವಿಸ್ತರಿಸಿ, ಅಭಿರುಚಿ ಬೆಳೆಸಿದ ಶ್ರೇಷ್ಠ ಕಲಾಸಂಘಟಕ ದಿ. ವೈ.ಡಿ.ನಾಯಕ್ ಬದಿಯಡ್ಕ ಇವರ ಜಂಟಿ ಸಂಸ್ಮರಣೆ ಮತ್ತು ಉಭಯ ತಾಳಮದ್ದಳೆ ಬದಿಯಡ್ಕದಲ್ಲಿ ಸಂಪನ್ನಗೊಂಡಿತು.
       ಶೇಣಿ ರಂಗಜಂಗಮ ಟ್ರಸ್ಟ್ ಮತ್ತು ಯಕ್ಷಸ್ನೇಹಿ ಬಳಗ ಪೆರ್ಲ ಇದರ ಸಂಯುಕ್ತ ಸಾರಥ್ಯದಲ್ಲಿ ಇಲ್ಲಿನ ಶಿವಳ್ಳಿ ಸಂಪದ ಕಟ್ಟಡದಲ್ಲಿ ಸೆ.28,29ರಂದು ನಡೆದ ತಾಳಮದ್ದಳೆಗಳ ಸಮಾರೋಪದಲ್ಲಿ ಉಭಯ ಸಾಧಕರ ಸಂಸ್ಮರಣೆ ನಡೆಯಿತು.
       ಸಮಾರಂಭವನ್ನು ಖ್ಯಾತ ವೈದ್ಯ, ಸಾಹಿತಿ ಡಾ. ಶ್ರೀನಿಧಿ ಸರಳಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಶೇಣಿ ಮತ್ತು ವೈ.ಡಿ.ನಾಯಕರ ಕುರಿತಾಗಿ 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಸಂಸ್ಮರಣಾ ಭಾಷಣ ಮಾಡಿ "ಶೇಣಿ ಮತ್ತು ವೈ.ಡಿ.ನಾಯಕರು ನಮ್ಮ ನೆಲದ ಸಾಂಸ್ಕøತಿಕ ಆಸ್ತಿ. ಅವರ ಮೆಲುಕಿನಿಂದ ಉತ್ತೇಜಿತರಾಗಿ ಪರಂಪರೆಯನ್ನು ಕೈದಾಟಿಸುವ ಕೆಲಸ ನಮ್ಮದಾಗಬೇಕು. ಶೇಣಿಯವರು ಬೌದ್ಧಿಕವಾಗಿ ಕಲೆಯನ್ನೂ ಪ್ರೇಕ್ಷಕರನ್ನೂ ಎತ್ತರಿಸಿದರೆ, ವೈ.ಡಿ.ನಾಯಕರು ಸಂಘಟನಾ ಸಾಮಥ್ರ್ಯದಿಂದ ಗಡಿನಾಡಿನ ಜನತೆಗೆ ತೆಂಕು-ಬಡಗಿನ ಅತಿಸಮರ್ಥ ಕಲಾವಿದರ ಪ್ರಸ್ತುತಿಯ ದರ್ಶನ ಇತ್ತವರು. ಇವರಿಬ್ಬರಿಂದಾಗಿ ಕಲೆ, ಅಭಿರುಚಿ, ಬೌದ್ಧಿಕತೆ ಈ ನೆಲದಲ್ಲಿ ಬೆಳೆದಿದೆ. ಅದನ್ನು ಮರೆತರೆ ಇತಿಹಾಸ ಕ್ಷಮಿಸದು" ಎಂದು ನುಡಿದರು.
     ನಿವೃತ್ತ ಉಪನೋಂದಾವಣಾಧಿಕಾರಿ ಮಹಮ್ಮದಾಲಿ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ವೈ.ಡಿ.ನಾಯಕರ ಪುತ್ರ ವೈ.ರಾಘವೇಂದ್ರ ನಾಯಕ್, ಕೋಟೆ ಗಣಪತಿ ಭಟ್ ಉಪಸ್ಥಿತರಿದ್ದರು. ಶೇಣಿ ವೇಣುಗೋಪಾಲ ಭಟ್ ಸ್ವಾಗತಿಸಿ, ಮೂಲಡ್ಕ ನಾರಾಯಣ ವಂದಿಸಿದರು.
      ದ್ವಿದಿನ ತಾಳಮದ್ದಳೆಯನ್ನು ಅರವಿಂದ ಕುಮಾರ್ ಅಲೆವೂರಾಯ ಉದ್ಘಾಟಿಸಿದರು. ಬಳಿಕ ಮೊದಲದಿನ 'ಕನ್ಯಾಂತರಂಗ' ಮತ್ತು ಎರಡನೇ ದಿನ ತರಣಿಸೇನ ಕಾಳಗ' ತಾಲಮದ್ದಳೆ ಪ್ರಸ್ತುತವಾಯಿತು. ಅರ್ಥಧಾರಿಗಳಾಗಿ ಮೂಲಡ್ಕ ನಾರಾಯಣ, ಶೇಣಿ ವೇಣುಗೋಪಾಲ ಭಟ್, ಕೆಕ್ಕಾರು ಆನಂದ ಭಟ್, ಡಾ.ಬೇ.ಸಿ ಗೋಪಾಲಕೃಷ್ಣ ಭಟ್, ಈಶ್ವರ ನಲ್ಕ ಪಾಲ್ಗೊಂಡರು. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ಪುಣಿಚಿತ್ತಾಯ ಪೆರ್ಲ, ಗೋವಿಂದ ಭಟ್ ಬೇಂದ್ರೋಡು, ಮನೋಹರ ಬಲ್ಲಾಳ್ ಅಡ್ವಳ ಹಾಗೂ ಚೆಂಡೆ,ಮದ್ದಳೆಯಲ್ಲಿ ಸುಧೀಶ್ ಪಾಣಾಜೆ, ನಾರಾಯಣ ಶರ್ಮ, ಸಮೃದ್ದ ಪುಣಿಚಿತ್ತಾಯ ಪಾಲ್ಗೊಂಡರು.
         ತಾಳಮದ್ದಳೆ ಸಂವಾದ:
    ತಾಳಮದ್ದಳೆಯ ಪ್ರಸ್ತುತಿಯ ಗುಣಮಟ್ಟವನ್ನು ಪ್ರೇಕ್ಷಕ ಮತ್ತು ಕಲಾವಿದರ ಸಮ್ಮುಖದಲ್ಲಿಯೇ ಅವಲೋಕನಗೈಯ್ಯುವ ಈ ಹಿಂದೆ ತಾಳಮದ್ದಳೆಗಳಲ್ಲಿದ್ದ ಸಂವಾದ ಪರಂಪರೆಯನ್ನು ಬದಿಯಡ್ಕದಲ್ಲಿ ಮತ್ತೆ ಆರಂಭಿಸಲಾಯಿತು. ತಾಳಮದ್ದಳೆಗಳು ಸೊರಗುವುದನ್ನು ತಪ್ಪಿಸಿ, ಪ್ರೇಕ್ಷಕರನ್ನು ಮತ್ತು ಕಲಾವಿದರನ್ನು ರೂಪಿಸಿಲು ಆರೋಗ್ಯಪೂರ್ಣ ವಿಮರ್ಶೆಗಳ ಸಂವಾದ ತಾಳಮದ್ದಳೆಗಳಿಗೆ ಅಗತ್ಯವಾಗಿದೆ. ಈ ಪ್ರಯೋಗವನ್ನು ಪ್ರೇಕ್ಷಕರು ಪ್ರಶಂಶಿಸಿ ಅಭಿಪ್ರಾಯ ಪ್ರಕಟಿಸಿದರು. ತಾಳಮದ್ದಳೆ ಮುಗಿದ ಬಳಿಕ ಇಡೀ ಪ್ರದರ್ಶನವನ್ನು ವೀಕ್ಷಿಸಿದ ಪ್ರೇಕ್ಷಕರು ಮುಕ್ತವಾಗಿ ಕಲಾವಿದರನ್ನು ಪ್ರಶ್ನಿಸುವುದು, ತಮ್ಮ ಅಭಿಪ್ರಾಯಗಳನ್ನು ಮಂಡಿಸುವುದು ಮತ್ತು ಅವಲೋಕನ ನಡೆಸುವುದು ಸಂವಾದದ ಉದ್ದೇಶವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries