HEALTH TIPS

ವಿಶ್ವದ ಅತೀ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಆರ್‌ಸಿಇಪಿಗೆ 15 ರಾಷ್ಟ್ರಗಳ ಸಹಿ

             ಬೀಜಿಂಗ್:  ವಿಶ್ವದ ಅತೀ ದೊಡ್ಡ ಮುಕ್ತ ವ್ಯಾಪಾರ ಒಪ್ಪಂದ ಎಂದು ಹೇಳಲಾಗಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ(ಆರ್‌ಸಿಇಪಿ)ಗೆ ಏಶ್ಯಾ ಪೆಸಿಫಿಕ್ ದೇಶಗಳಾದ ಚೀನಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 15 ದೇಶಗಳು ರವಿವಾರ ಸಹಿ ಹಾಕಿವೆ. ವಿಶ್ವದ ಒಟ್ಟು ಆರ್ಥಿಕ ಚಟುವಟಿಕೆಯ ಮೂರನೇ ಒಂದು ಅಂಶದಷ್ಟು ವಹಿವಾಟಿಗೆ ಸಂಬಂಧಿಸಿದ ಒಪ್ಪಂದ ಇದಾಗಿದೆ ಎಂದು ಮೂಲಗಳು ಹೇಳಿವೆ.

        ಈ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಕಳೆದ ವರ್ಷ ಭಾರತ ಘೋಷಿಸಿತ್ತು. ಆರ್‌ಸಿಇಪಿಗೆ ಅಂತಿಮ ರೂಪು ನೀಡುವ ಬಗ್ಗೆ ಸುಮಾರು 10 ವರ್ಷದಿಂದ ಮಾತುಕತೆ ಮುಂದುವರಿದಿತ್ತು. ಅಮೆರಿಕವನ್ನು ಹೊರಗಿಟ್ಟು ರೂಪಿಸಿರುವ ಬೃಹತ್ ವ್ಯಾಪಾರ ವ್ಯವಸ್ಥೆ ಇದಾಗಿದ್ದು ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಪ್ರಾಬಲ್ಯಕ್ಕೆ ಭಾರೀ ಸವಾಲು ಎದುರಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವಿಯೆಟ್ನಾಮ್‌ನಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ 37ನೇ ಆಸಿಯಾನ್ ಶೃಂಗಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಬಿದ್ದಿದೆ. ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್ ದೇಶಗಳು, ಅಸೋಸಿಯೇಷನ್ ಆಫ್ ಸೌತ್‌ಈಸ್ಟ್ ಏಶಿಯನ್ ನೇಷನ್ಸ್(ಆಸಿಯಾನ್)ನ 10 ದೇಶಗಳಾದ - ಬ್ರೂನೈ, ಕಾಂಬೋಡಿಯ, ಇಂಡೊನೇಶ್ಯ, ಲಾವೋಸ್, ಮಲೇಶ್ಯಾ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸಿಂಗಾಪುರ, ಥೈಲ್ಯಾಂಡ್, ವಿಯೆಟ್ನಾಮ್, ಆಸಿಯಾನ್‌ನ ಪೂರ್ವ ಏಶ್ಯಾ ವಲಯದ ಮೂರು ಸದಸ್ಯ ದೇಶಗಳಾದ ಚೀನಾ, ಜಪಾನ್, ದಕ್ಷಿಣ ಕೊರಿಯಾ ಸಹಿ ಹಾಕಿರುವ ದೇಶಗಳಾಗಿವೆ.

        ಮಾತುಕತೆ ಪೂರ್ಣಗೊಂಡಿರುವುದು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ಆಸಿಯಾನ್‌ನ ಪಾತ್ರವನ್ನು ದೃಢೀಕರಿಸಿದೆ. ಕೊರೋನ ಸೋಂಕಿನಿಂದ ಕೊಂಡಿ ತಪ್ಪಿರುವ ಸರಬರಾಜು ಸರಪಳಿಯನ್ನು ಸರಿಪಡಿಸಲು ಮತ್ತು ಆರ್ಥಿಕ ಚೇತರಿಕೆಯ ಪ್ರಯತ್ನಗಳಿಗೆ ಈ ಒಪ್ಪಂದ ಪೂರಕವಾಗಿದೆ ಎಂದು ವಿಯೆಟ್ನಾಮ್ ಪ್ರಧಾನಿ ಗುಯೆನ್ ಜುವಾನ್ ಫೂಕ್ ಹೇಳಿದ್ದಾರೆ. ಈ ಒಪ್ಪಂದ ಜಾರಿಗೆ ಬರಬೇಕಿದ್ದರೆ ಕನಿಷ್ಟ 6 ಆಸಿಯಾನ್ ಸದಸ್ಯ ದೇಶಗಳ ಮತ್ತು 3 ಆಸಿಯಾನ್ ಸದಸ್ಯರಲ್ಲದ ದೇಶಗಳ ಅನುಮೋದನೆ ಅಗತ್ಯವಿದೆ. ಮುಂದಿನ ಕೆಲ ತಿಂಗಳಲ್ಲಿ ಈ ಒಪ್ಪಂದಕ್ಕೆ ಅನುಮೋದನೆ ಪಡೆದುಕೊಳ್ಳುವುದಾಗಿ ಸಿಂಗಾಪುರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಚಾನ್‌ಚುನ್ ಹೇಳಿದ್ದಾರೆ.

2.2 ಬಿಲಿಯನ್ ಜನತೆ ಹಾಗೂ ಒಟ್ಟು 26.2 ಟ್ರಿಲಿಯನ್ ಡಾಲರ್ ಸಂಯೋಜಿತ ಜಿಡಿಪಿಯ ವ್ಯಾಪ್ತಿ ಹೊಂದಿರುವ ಆರ್‌ಸಿಇಪಿ ಒಪ್ಪಂದವು ಕೊರೋನ ಸೋಂಕಿನಿಂದ ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡಲಿದೆ ಎಂದು ವಿಯೆಟ್ನಾಮ್ ಪ್ರಧಾನಿ ಹೇಳಿದ್ದಾರೆ. ಆರ್‌ಸಿಇಪಿ ಒಪ್ಪಂದ ಭಾರತೀಯರ, ಅದರಲ್ಲೂ ಪ್ರಮುಖವಾಗಿ ದುರ್ಬಲ ವರ್ಗದವರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಳೆದ ವರ್ಷ ಆತಂಕ ವ್ಯಕ್ತಪಡಿಸಿದ್ದ ಪ್ರಧಾನಿ ಮೋದಿ, ಒಪ್ಪಂದದಿಂದ ಹೊರಬರುವುದಾಗಿ ಘೋಷಿಸಿದ್ದರು. ಆದರೆ ಭಾರತಕ್ಕೆ ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳಲು ಅವಕಾಶ ನೀಡಲಾಗಿದೆ. ಭಾರತದ ಕಳವಳವನ್ನು ನಾವು ಅರ್ಥೈಸಿಕೊಂಡಿದ್ದೇವೆ. ಮುಂದಿನ ದಿನದಲ್ಲಿ ಭಾರತವೂ ನಮ್ಮೆಂದಿಗೆ ಸೇರುವ ವಿಶ್ವಾಸವಿದೆ ಎಂದು ಮಲೇಶ್ಯಾದ ಪ್ರಧಾನಿ ಮುಹಿದ್ದೀನ್ ಯಾಸಿನ್ ಹೇಳಿದ್ದಾರೆ.

      ಒಪ್ಪಂದದ ಅನುಕೂಲಗಳು:

ಸದಸ್ಯ ರಾಷ್ಟ್ರಗಳೊಳಗೆ ನಡೆಯುವ ವ್ಯಾಪಾರದ ಸರಕುಗಳ ಮೇಲೆ ಕನಿಷ್ಟ 92%ದಷ್ಟು ಸುಂಕ ರದ್ದು. ಆನ್‌ಲೈನ್ ಗ್ರಾಹಕ ಮತ್ತು ವೈಯಕ್ತಿಕ ಮಾಹಿತಿ ರಕ್ಷಣೆ ಕ್ಷೇತ್ರಗಳ ಸುಧಾರಣೆಗೆ ಕ್ರಮ. ಪಾರದರ್ಶಕ ಮತ್ತು ಕಾಗದರಹಿತ ವ್ಯವಹಾರ. ಸರಳೀಕೃತ ಕಸ್ಟಮ್ಸ್ ವಿಧಾನ

ಭಾರತಕ್ಕೆ ಇನ್ನೂ ಇದೆ ಅವಕಾಶ

     ಮುಂದಿನ ದಿನಗಳಲ್ಲಿ ಭಾರತವೂ ಒಪ್ಪಂದದಲ್ಲಿ ಸೇರ್ಪಡೆಯಾಗಲು ಅವಕಾಶ ನೀಡುವ ಉಪನಿಯಮವನ್ನು ರೂಪಿಸಲಾಗಿದೆ. ಈ ಪ್ರಕ್ರಿಯೆ ಏಶ್ಯಾ ವಲಯದ ಮೂರನೇ ಬೃಹತ್ ದೇಶ(ಭಾರತ)ದ ಜೊತೆ ಆರ್ಥಿಕ ಸಂಪರ್ಕ ಸಾಧಿಸುವ ಚೀನಾದ ಬಯಕೆಯನ್ನು ಸಂಕೇತಿಸುತ್ತದೆ ಎಂದು ಆರ್ಥಿಕತಜ್ಞ ಶಾನ್ ರೋಶ್ ಅಭಿಪ್ರಾಯಪಟ್ಟಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries