HEALTH TIPS

ಅಂತಾರಾಷ್ಟ್ರೀಯ ಯೋಗ ದಿನ 2022: ಭಾರತದ ಪ್ರಖ್ಯಾತ ಯೋಗ ಗುರುಗಳು ಇವರೇ ನೋಡಿ

 ದೇಹ, ಮನಸ್ಸು, ಉಸಿರು ಎಲ್ಲವನ್ನು ಒಂದೇ ಬಾರಿ ನಮ್ಮ ನಿಯಂತ್ರಣದಲ್ಲಿಡಲು ಸಾಧ್ಯವಾಗಿಸುವುದು ಯೋಗ ಮಾತ್ರ. ಯೋಗ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರುತ್ತದೆ.

ಯೋಗ ಮನುಷ್ಯನಿಗೆ ಉಸಿರಿನಷ್ಟೇ ಅವಶ್ಯಕ ಎಂದು ಅರಿತ ಹಲವು ಮಹಾನ್‌ ಯೋಗಿಗಳು ತಮ್ಮ ಜೀವನವನ್ನು ಯೋಗ ಕುರಿತ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದರು ಹಾಗೂ ಇಂದಿಗೂ ಅಧ್ಯಯನಗಳು ನಡೆಯುತ್ತಲೇ ಇದೆ.




ಭಾರತವನ್ನು ವಿಶ್ವಮಟ್ಟದಲ್ಲಿ ಪ್ರಖ್ಯಾತಿಗೊಳಿಸಿದ ಯೋಗ : ಭಾರತದಲ್ಲಿ ಜನ್ಮತಳೆದಿದ್ದರೂ ಇದರ ಇಂದಿನ ಉಳಿವಿಗೆ ಸಾಕಷ್ಟು ಯೋಗ ಸಾಧಕರು ಕಾರಣರಾಗಿದ್ದಾರೆ. ಇವರು ಭಾರತದ ಪ್ರಖ್ಯಾತ ಯೋಗ ಗುರುಗಳೆಂದು ಹೆಸರುವಾಸಿಯಾಗಿದ್ದಾರೆ. 2022ರ ಜೂನ್ 21ರಂದು ಆಚರಿಸಲಾಗುತ್ತಿರುವ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ಪುರಾತನ ಯೋಗವನ್ನು ಭಾರತದಲ್ಲಿ ಇನ್ನಷ್ಟು ಗಟ್ಟಿಯಾಗಿ ಬೇರೂರಲು ಕಾರಣರಾದ ಯೋಗ ಗುರುಗಳ ಬಗ್ಗೆ ಮುಂದೆ ತಿಳಿಯೋಣ:
ಸ್ವಾಮಿ ಕುವಲಯಾನಂದ:

 ಯೋಗ ಮನುಷ್ಯನಿಗೆ ವೈಜ್ಞಾನಿಕವಾಗಿ ಹೇಗೆ ಸಹಕಾರಿ ಎಂಬುದನ್ನು ಮೊದಲಿಗೆ ಸಂಶೋಧನೆ ಮಾಡಿದ ಕೀರ್ತಿ ಹಿರಿಯ ಯೋಗ ಗುರು ಸ್ವಾಮಿ ಕುವಲಯಾನಂದ ಅವರಿಗೆ ಸಲ್ಲುತ್ತದೆ. 1883 ರಿಂದ 1966ರವರೆಗೆ 82 ವರ್ಷಗಳ ಸುದೀರ್ಘ ಬದುಕನ್ನು ಯೋಗಕ್ಕೆ ಮುಡಿಪಾಗಿಟ್ಟ ಕುವಲಯಾನಂದರು, 1920ರಲ್ಲಿ ಯೋಗ ಕುರಿತು ಸಂಶೋಧನೆ ಆರಂಭಿಸಿದ ಅವರು 1924ರಲ್ಲಿ ಯೋಗ ಮೀಮಾಂಸೆಯನ್ನು ಪ್ರಕಟಿಸಿದರು. ಇವರೇ ಮುಂಬೈನ ಲೋನಾವಾಲಾದಲ್ಲಿ ಕುವಲಯಾನಂದರೇ ಸ್ಥಾಪಿಸಿದ ಕೈವಲ್ಯಧಾಮ ಯೋಗ ಮತ್ತು ಸಂಶೋಧನಾ ಸಂಸ್ಥೆಯಲ್ಲೇ ತಮ್ಮ ಬಹುತೇಕ ಸಂಶೋಧನೆಗಳನ್ನು ನಡೆಸಿದರು. ಯೋಗ ನಮ್ಮ ನಿತ್ಯ ಬದುಕಿನಲ್ಲಿ ವ್ಯಾಯಾಮವಾಗಬೇಕು ಎಂದು ಮೊದಲಿಗೆ ಹೇಳಿದವರು ಕುವಲಯಾನಂದರು.




ಶಿವಾನಂದ ಸರಸ್ವತಿ : ಯೋಗ ಪ್ರಪಂಚದಲ್ಲಿ ಪ್ರಸಿದ್ಧ ಹೆಸರು ಸ್ವಾಮಿ ಶಿವಾನಂದ ಸರಸ್ವತಿ ಅವರು ಆಧ್ಯಾತ್ಮಿಕ ಶಿಕ್ಷಕ ಮತ್ತು ಯೋಗ ಹಾಗೂ ವೇದಾಂತದ ಪ್ರತಿಪಾದಕರು. 1887ರಲ್ಲಿ ದಕ್ಷಿಣ ಭಾರತದ ತಮಿಳುನಾಡಿನ ತಿನಲ್ವೇಲಿಯಲ್ಲಿ ಜನಿಸಿದ ಶಿವಾನಂದರು 1963ರಲ್ಲಿ 76ನೇ ವಯಸ್ಸಿನಲ್ಲಿ ನಿಧನರಾದರು. ವೈದ್ಯರಾಗಿದ್ದ ಶಿವಾನಂದರು ಬ್ರಿಟೀಷ್‌ ಆಡಳಿತದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು, ನಂತರ ತಮ್ಮ 40ನೇ ವಯಸ್ಸಿನಲ್ಲಿ ಎಲ್ಲವನ್ನು ತೊರೆದು ಯೋಗವನ್ನೇ ಬದುಕಾಗಿಸಿಕೊಂಡರು. ಸಾಮಾನ್ಯ ಜನರಿಗೂ ಯೋಗ ಮತ್ತು ಆಧ್ಯಾತ್ಮದ ಮಹತ್ವ ತಿಳಿಸಬೇಕು, ಯೋಗ ಹೇಳಿಕೊಡಬೇಕು ಎಂಬ ಮಹದಾಸೆ ಹೊಂದಿದ್ದರು. ರಿಶಿಕೇಶದಲ್ಲಿ ಸ್ವಯಂ ಸಾಕ್ಷಾತ್ಕಾರವನ್ನು ಪಡೆದ ಅವರು ಯೋಗ ಮತ್ತು ಧ್ಯಾನವನ್ನು ಕಟ್ಟುನಿಟ್ಟಾಗಿ ಅಭ್ಯಾಸ ಮಾಡಿದರು. ನಂತರ 1936ರಲ್ಲಿ ಡಿವೈನ್ ಲೈಫ್ ಸೊಸೈಟಿಯನ್ನು ಸ್ಥಾಪಿಸಿದರು ಇದು ಶಿವಾನಂದ ಆಶ್ರಮ ಎಂದು ಜನಪ್ರಿಯವಾಗಿದೆ. 1948ರಲ್ಲಿ ಯೋಗ ವೇದಾಂತ ಫಾರೆಸ್ಟ್‌ ಅಕಾಡೆಮಿ ಸ್ಥಾಪಿಸಿದರು ಅಲ್ಲದೇ ಯೋಗ ಕುರಿತು ಸುಮಾರು 200ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಶಿಷ್ಯರಲ್ಲಿ ಪ್ರಮುಖರಾದವರು ಚಿದಾನಂದ ಸರಸ್ವತಿ, ಚಿನ್ಮಯ ಮಿಷನ್‌ ಸ್ಥಾಪಕ ಚಿನ್ಮಯಾನಂದ ಸರಸ್ವತಿ, ಸಚ್ಚಿದಾನಂದ ಸರಸ್ವತಿ, ಸತ್ಯಾನಂದ ಸರಸ್ವತಿ ಹಾಗೂ ಹಲವರು.



ತಿರುಮಲೈ ಕೃಷ್ಣಮಾಚಾರ್ಯ: ಆಧುನಿಕ ಯೋಗದ ಪಿತಾಮಹ ಎಂದೇ ಪ್ರಖ್ಯಾತಿ ಪಡೆದ ಯೋಗ ಗುರು ತಿರುಮಲೈ ಕೃಷ್ಣಮಾಚಾರ್ಯರು ಹಠಯೋಗಿಗಳಾಗಿಯೇ ಹೆಸರಾದವರು. ದೇಹವ್ಯಾಯಾಮ ಸಂಸ್ಕೃತಿಯಲ್ಲಿ ಪ್ರಸಿದ್ಧರಾದ ಯೋಗೇಂದ್ರ, ಕುವಲಯಾನಂದರಿಂದ ಪ್ರೇರಿತರಾದ ಕೃಷ್ಣಮಾಚಾರ್ಯರು ಹಠಯೋಗವನ್ನು ಪುನರುಜ್ಜೀವನಗೊಳಿಸಿದರು. ಅವರು ಸಂಸ್ಕೃತ ವಿದ್ವಾಂಸರಾಗಿಯೂ, ಮಹಾನ್ ಆಯುರ್ವೇದ ಶಾಸ್ತ್ರಜ್ಞರಾಗಿಯೂ ಹೆಸರಾಗಿದ್ದರು. 1888ರಲ್ಲಿ ಚಿತ್ರದುರ್ಗದ ಮುಚುಕುಂದಪುರದಲ್ಲಿ ಜನಿಸಿದ ಕೃಷ್ಣಮಾಚಾರ್ಯರು 1989ರಲ್ಲಿ ತಮ್ಮ 101ನೇ ವಯಸ್ಸಿನಲ್ಲಿ ನಿಧನರಾದರು. ಕೃಷ್ಣಮಾಚಾರ್ಯರು ಯೋಗ ಮಕರಂದ, ಯೋಗಾಸನಗಳು, ಯೋಗ ರಹಸ್ಯ ಮತ್ತು ಯೋಗವಲ್ಲಿ ಎಂಬ ಮಹತ್ವದ ನಾಲ್ಕು ಕೃತಿಗಳನ್ನು ಕನ್ನಡದಲ್ಲಿ ರಚಿಸಿದ್ದು, ಇದು ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ತರ್ಜುಮೆಗೊಂಡು ಪ್ರಸಿದ್ಧಿ ಪಡೆದಿವೆ. ಕೃಷ್ಣಮಾಚಾರ್ಯರ ಪುತ್ರ ಟಿ.ಕೆ.ವಿ ದೇಶಿಕಾಚಾರ್ಯರು ಚೆನ್ನೈನಲ್ಲಿ 'ಕೃಷ್ಣಮಾಚಾರ್ಯ ಯೋಗ ಮಂದಿರಂ' ಎಂಬ ಸಂಸ್ಥೆಯ ಮೂಲಕ ತಂದೆಯ ಯೋಗ ಪದ್ಧತಿಯನ್ನು ಮುಂದುವರೆಸಿದರು. ಅವರ ಶಿಷ್ಯರಾದ ಬಿ. ಕೆ. ಎಸ್. ಅಯ್ಯಂಗಾರ್, ಪಟ್ಟಾಭಿ ಜೋಯಿಸ್ ಮತ್ತು ಪುತ್ರ ದೇಶಿಕಾಚಾರ್ ಯೋಗಗುರುಗಳಾಗಿ ವಿಶ್ವಪ್ರಸಿದ್ಧರು.



ಕೆ. ಪಟ್ಟಾಭಿ ಜೋಯಿಸ್ : ಭಾರತದಲ್ಲಿ ಅಷ್ಟಾಂಗ ಯೋಗ ಎಂದೇ ಖ್ಯಾತಿ ಗಳಿಸಿರುವ ವಿನ್ಯಾಸ ಶೈಲಿಯ ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದು ಕೆ. ಪಟ್ಟಾಭಿ ಜೋಯಿಸ್. ಕರ್ನಾಟಕದ ಹಾಸದಲ್ಲಿ 1915ರಲ್ಲಿ ಜನಿಸಿದ ಜೋಯಿಸರು 2009ರಲ್ಲಿ ನಿಧನರಾದರು. ಸಂಸ್ಕೃತ ವಿದ್ವಾಂಸರು ಆದ ಜೋಯಿಸ್ ಅವರು, ಸರ್ಕಾರಿ ಕಾಲೇಜಿನಲ್ಲಿ ಯೋಗದ ಪ್ರಾಧ್ಯಾಪಕರು ಮತ್ತು ಯೋಗ ಶಿಕ್ಷಕರಾಗಿದ್ದರು. ಕೃಷ್ಣಮಾಚಾರ್ಯರ ಬಳಿ ಅಧ್ಯಯನ ಮಾಡಿದರು. ಪ್ರಭಾವಿ ಯೋಗಿಯಾಗಿದ್ದ ಅವರ ನಂತರ ಪತ್ನಿ ಮತ್ತು ಮೂವರು ಮಕ್ಕಳು ಸಹ ಪ್ರಪಂಚದಾದ್ಯಂತ ಯೋಗವನ್ನು ಕಲಿಸಿದರು. ಈಗ ಅವರ ಮೊಮ್ಮಗ ಶರತ್‌ ಜೋಯಿಸ್ ಸಹ ದೇಶ-ವಿದೇಶಗಳಲ್ಲಿ ಯೋಗ ತರಬೇತಿ ನೀಡುತ್ತಿದ್ದಾರೆ.

ಬಿ.ಕೆ.ಎಸ್. ಅಯ್ಯಂಗಾರ್: ಬಿ.ಕೆ.ಎಸ್. ಅಯ್ಯಂಗಾರ್ ಎಂದೇ ಪ್ರಸಿದ್ಧಿ ಪಡೆದ ಬೆಳ್ಳೂರು ಕೃಷ್ಣಮಾಚಾರ್ ಸುಂದರರಾಜ ಅಯ್ಯಂಗಾರ್ ಅವರು ಅಯ್ಯಂಗಾರ್ ಯೋಗದ ಸ್ಥಾಪಕರು. ಯೋಗವನ್ನು ಅತಿ ಗಹನವಾಗಿ ಅಭ್ಯಸಿಸಿ, ಅತ್ಯಂತ ಸಮರ್ಥವಾಗಿ ಬರೆದು ಪ್ರಚುರಪಡಿಸಿದ ಜೀವಂತ ವ್ಯಕ್ತಿಗಳಲ್ಲೊಬ್ಬರು ಎಂದೇ ಅಯ್ಯಂಗಾರ್‌ ಹೆಚ್ಚು ಖ್ಯಾತಿ ಪಡೆದಿದ್ದರು. 1918ರಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ಬೆಳ್ಳೂರಿನಲ್ಲಿ ಅಯ್ಯಂಗಾರರು 2014ರಲ್ಲಿ ತಮ್ಮ 96ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು. ಕೇಂದ್ರ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಶ್ರಿ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪಡೆದ ಅಯ್ಯಂಗಾರರು ಹಠ ಯೋಗವನ್ನು ಹರಡುವ ಮತ್ತು ಜನಪ್ರಿಯಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ತಮ್ಮ ಸೋದರ ಮಾವ ತಿರುಮಲೈ ಕೃಷ್ಣಮಾಚಾರ್ಯರಿಂದ ಪ್ರೇರಿತರಾದ ಇವರು ಆರೋಗ್ಯಕ್ಕಾಗಿ ಯೋಗವನ್ನು ಪ್ರಾರಂಭಿಸಿದರು. ತದನಂತರದಲ್ಲಿ ಅವರು ಯೋಗ ಶಿಕ್ಷಕರಾದರು. 1966ರಲ್ಲಿ ರಲ್ಲೇ ಅವರ ಪ್ರಥಮ ಪುಸ್ತಕ ಲೈಟ್‌ ಆಫ್‌ ಯೋಗ 17 ಭಾಷೆಗಳಲ್ಲಿ ತರ್ಜುಮೆಗೊಂಡಿತ್ತು. ನಂತರ ಲೈಟ್‌ ಆನ್‌ ಲೈಫ್‌ ಸೇರಿದಂತೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಅಯ್ಯಂಗಾರರು ಸ್ಥಾಪಿಸಿದ್ದ ಯೋಗ ಇನ್ಸ್ಟಿಟ್ಯೂಟ್ ಮತ್ತು ಟ್ರಸ್ಟ್ ಅನ್ನು ಸ್ಥಾಪಿಸಿದ್ದ ಅವರ ಮಕ್ಕಳು ಯೋಗ ಪರಂಪರೆಯನ್ನು ಮುಂದುವರಿಸಿದರು.


ಮಹರ್ಷಿ ಮಹೇಶ್ ಯೋಗಿ: ಮಹರ್ಷಿ ಮಹೇಶ್ ಯೋಗಿ ಭಾರತದಲ್ಲಿ ಹೆಸರು ಮಾಡಿರುವ ಯೋಗಿ. ಅವರು 60 ದಶಕದಲ್ಲಿ ಅತೀಂದ್ರಿಯ ಧ್ಯಾನವನ್ನು ಅಭಿವೃದ್ಧಿಪಡಿಸಿದರು. ಹಲವಾರು ವಿದೇಶಿ ಗಣ್ಯರಿಗೆ ಮಹೇಶ್‌ ಅವರು ಯೋಗ ಹೇಳಿಕೊಟ್ಟ ಪ್ರಸಿದ್ಧ ಗುರು. 1918ರಲ್ಲಿ ಭಾರತದಲ್ಲಿ ಜನಿಸಿದ ಮಹೇಶ್‌ ಅವರು 2008ರಲ್ಲಿ ನೆದರ್‌ಲ್ಯಾಂಡ್‌ನಲ್ಲಿ ನಿಧನರಾದರು. ಸ್ವಾಮಿ ಬ್ರಹ್ಮಾನಂದ ಸರಸ್ವತಿಯ ಶಿಷ್ಯರಾಗಿದ್ದ ಇವರು 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಯೋಗ ಮತ್ತು ಧ್ಯಾನ ಎರಡರಲ್ಲೂ ಅತ್ಯಂತ ಪ್ರಸಿದ್ಧರಾದವರಲ್ಲಿ ಮಹೇಶ್‌ ಅವರೂ ಒಬ್ಬರು. ಯೋಗ, ಧ್ಯಾನ ಮತ್ತು ಯೋಗ ಪಠಣಗಳ ಪ್ರಯೋಜನಗಳ ವೈಜ್ಞಾನಿಕ ಅಧ್ಯಯನಗಳನ್ನು ಇವರು ಪ್ರೋತ್ಸಾಹಿಸಿದವರು.


ಮಾತಾಜಿ ನಿರ್ಮಲಾ ದೇವಿ: ಸಹಜ ಯೋಗದ ಸ್ಥಾಪಕಿ ಮಾತಾಜಿ ನಿರ್ಮಲಾ ಶ್ರೀವಾಸ್ತವ ಅವರು 1923ರಲ್ಲಿ ಮಧ್ಯಪ್ರದೇಶದ ಚಿಂದ್ವಾರದಲ್ಲಿ ಜನಿಸಿದರು. ಜನರ ದಾರಿ ತಪ್ಪಿಸುವಂಥ ಯೋಗ ಗುರುಗು ಹಾಗೂ ಸುಳ್ಳು ಗುರುಗಳಿಂದ ಜನರಿಗೆ ಮತ್ತು ಸಮಾಜಕ್ಕೆ ಆಗುತ್ತಿರುವ ಹಾನಿಯನ್ನು ಸರಿಪಡಿಸಲು ಹೆಜ್ಜೆಯನ್ನು ಇಟ್ಟರು. ಸಹಜ ಯೋಗ ಜತೆಗೆ ಹೆಚ್ಚು ಧ್ಯಾನವನ್ನು ಮಾಡಿದರು, ಹಾಗೆಯೇ ಜನಸಾಮಾನ್ಯರನ್ನು ಪ್ರೇರೇಪಿಸಲು ಸ್ವಯಂ-ಅರಿವಿನ ಅನುಭವವನ್ನು ಅವರೊಂದಿಗೆ ಹಂಚಿಕೊಂಡರು. ವಿದೇಶದಲ್ಲೂ ಸಹಜ ಯೋಗ ಪರಿಚರಿಸಿ ಖ್ಯಾತರಾದವರು ನಿರ್ಮಲಾ ದೇವಿ.


ಸದ್ಗುರು ಜಗ್ಗಿ ವಾಸುದೇವ್ : ಪ್ರಖ್ಯಾತ ಇಶಾ ಫೌಂಡೇಶನ್‌ನ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮೂಲ ಹೆಸರು ಜಗದೀಶ್‌ ವಾಸುದೇವ್‌. ದಕ್ಷಿಣ ಭಾರತದಲ್ಲಿ ಯೋಗ ಹಾಗೂ ಲೇಖಕನಾಗಿ ಹೆಸರು ಮಾಡಿರುವ ಸದ್ಗುರು ಜ್ಞಾನ, ಯೋಗ ಮತ್ತು ಆಧ್ಯಾತ್ಮಿಕತೆಯಲ್ಲಿ ಹೆಚ್ಚು ತೊಡಗಿಕೊಂಡವರು. 1957ರಲ್ಲಿ ಮೈಸೂರಿನಲ್ಲಿ ಜನಿಸಿದ ಸದ್ಗುರು 13ನೇ ವಯಸ್ಸಿಗೆ ಯೋಗ ಅಭ್ಯಾಸ ಆರಂಭಿಸಿದರು. 1982ರಿಂದ ಯೋಗ ತರಬೇತಿ ನೀಡಲು ಆರಂಭಿಸಿದರು. ಹಲವಾರು ಪುಸ್ತಕಗಳನ್ನು ಸಹ ಬರದಿರುವ ಇವರ ಯೋಗ ಸಾಧನೆಗೆ ಕೇಂದ್ರ ಸರ್ಕಾರ ಪದ್ಮ ವಿಭೂಷಣ ನೀಡಿ ಗೌರವಿಸಿದೆ. ಇಂದಿಗೂ ಇವರು ಇಶಾ ಫೌಂಡೇಶನ್‌ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.




ಶ್ವಾಸ ಗುರು ವಚನಾನಂದ ಶ್ವಾಸ ಗುರು ಎಂದೇ ಹೆಸರಾದ ಸ್ವಾಮಿ ವಚನಾನಂದ ಅವರು ಯೋಗಿ, ಸಾಮಾಜಿಕ ಕಾರ್ಯಕರ್ತ. ಬಹಳ ಚಿಕ್ಕ ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆದ ವಚನಾನಂದ ಅವರು 2012ರಲ್ಲಿ ಶ್ವಾಸ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಭಾರತವಲ್ಲದೆ ವಿಶ್ವಾದ್ಯಂತ ಶ್ವಾಸ ಯೋಗ ತರಬೇತಿ ನೀಡುತ್ತಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ವಚನಾನಂದ ಅವರು 8ನೇ ವಯಸ್ಸಿನಲ್ಲಿ ಆಧ್ಯಾತ್ಮಿಕತೆ ಮತ್ತು ಯೋಗದ ಜ್ಞಾನವನ್ನು ಪಡೆದುಕೊಂಡು ಮನೆಯನ್ನು ತೊರೆದರು. ಹಿಮಾಲಯದಲ್ಲಿ ಹಲವು ವರ್ಷ ಸಾಧನೆ ಮಾಡಿ ನಂತರ ಪತಂಜಲಿಯ ಅಷ್ಠಾಂಗ ಯೋಗ ಪರಿಪಾಲಕರಾದರು. ಅದರಲ್ಲಿ ದೇಹ ಮತ್ತು ಮೆದುಳಿನ ಜತೆಗೆ ಶ್ವಾಸಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಇಂದಿಗೂ ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries