HEALTH TIPS

ತಮಿಳುನಾಡು ರಾಜ್ಯಪಾಲರು 3 ವರ್ಷಗಳಿಂದ ಏನು ಮಾಡುತ್ತಿದ್ದರು? - ಸುಪ್ರೀಂ ಕೋರ್ಟ್

                 ವದೆಹಲಿ: ಅಂಕಿತ ಕೋರಿ ಸಲ್ಲಿಕೆಯಾಗಿದ್ದ ಮಸೂದೆಗಳ ವಿಚಾರವಾಗಿ ತಮಿಳುನಾಡು ರಾಜ್ಯಪಾಲರು ತೋರಿದ ವಿಳಂಬ ಧೋರಣೆಯನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌, 'ಮೂರು ವರ್ಷಗಳಿಂದ ಅವರು ಏನು ಮಾಡುತ್ತಿದ್ದರು' ಎಂದು ಸೋಮವಾರ ಕೇಳಿದೆ.

                 'ಸಂಬಂಧಪಟ್ಟವರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವವರೆಗೆ ರಾಜ್ಯಪಾಲರು ಕಾಯುವುದು ಏಕೆ?

                  ರಾಜ್ಯಪಾಲರು 3 ವರ್ಷ ಏನು ಮಾಡುತ್ತಿ ದ್ದರು' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರನ್ನು ಪ್ರಶ್ನೆ ಮಾಡಿದೆ.

                  ಅರ್ಜಿಯ ವಿಚಾರವಾಗಿ ನೋಟಿಸ್‌ ಜಾರಿಗೆ ಆದೇಶಿಸಿದ ನಂತರದಲ್ಲಿ ಕೆಲವು ಮಸೂದೆಗಳಿಗೆ 'ಅಂಕಿತ ಹಾಕುವುದನ್ನು ತಡೆಹಿಡಿಯಲಾಗಿದೆ' ಎಂದು ರಾಜ್ಯ ಪಾಲರು ತಿಳಿಸಿದ್ದಾರೆ ಎನ್ನುವ ವಿಚಾರ ವನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು. ಇದಾದ ನಂತರದಲ್ಲಿ ತಮಿಳುನಾಡು ವಿಧಾನಸಭೆಯ ವಿಶೇಷ ಅಧಿವೇಶನ ನಡೆದಿದೆ, ಇದೇ 18ರಂದು ಅವೇ ಮಸೂದೆಗಳಿಗೆ ಮರು ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿಯನ್ನೂ ಪೀಠಕ್ಕೆ ನೀಡಲಾಯಿತು. ನೋಟಿಸ್ ಜಾರಿಗೆ ಕೋರ್ಟ್‌ ಆದೇಶಿಸಿದ್ದು ನವೆಂಬರ್ 10ರಂದು. ಆದರೆ ಮಸೂದೆಗಳು 2020ರ ಜನವರಿಯಿಂದಲೂ ಬಾಕಿ ಇವೆ ಎಂದು ಕೋರ್ಟ್ ಹೇಳಿತು. 'ಅಂದರೆ, ಕೋರ್ಟ್‌ ನೋಟಿಸ್ ಜಾರಿಮಾಡಿದ ನಂತರದಲ್ಲಿ ರಾಜ್ಯಪಾಲರು ಈ ವಿಷಯ ತಿಳಿಸಿದ್ದಾರೆ' ಎಂದು ಪೀಠ ಹೇಳಿತು.

ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ದಲ್ಲಿ ರಾಜ್ಯಪಾಲರ ಅಧಿಕಾರವನ್ನು ಕಸಿಯುವ ಮಸೂದೆಗಳ ವಿಚಾರದಲ್ಲಿ ಮಾತ್ರ ಸಮಸ್ಯೆ ಇದೆ. ಇದು ಗಂಭೀರ ವಿಚಾರವಾಗಿರುವ ಕಾರಣ ಒಂದಿಷ್ಟು ಮರುಪರಿಶೀಲನೆಯ ಅಗತ್ಯ ಇದೆ ಎಂದು ಅಟಾರ್ನಿ ಜನರಲ್ ಅವರು ವಿವರಿಸಿದರು.

ಈಗ ತಮಿಳುನಾಡಿನ ರಾಜ್ಯಪಾಲ ರಾಗಿರುವ ಆರ್.ಎನ್. ರವಿ ಅವರು 2021ರ ನವೆಂಬರ್‌ನಲ್ಲಿ ಅಧಿಕಾರ
                 ಸ್ವೀಕರಿಸಿದ್ದಾರೆ ಎಂದು ಅಟಾರ್ನಿ ಜನರಲ್ ತಿಳಿಸಿದರು. ಇದಕ್ಕೆ ಉತ್ತರವಾಗಿ ಪೀಠವು, 'ಯಾವುದೇ ಒಬ್ಬ ರಾಜ್ಯಪಾಲ ರಿಂದ ಮಸೂದೆಗಳಿಗೆ ಅಂಕಿತ ದೊರೆಯುವುದು ವಿಳಂಬವಾಗಿದೆಯೇ ಎಂಬುದು ಇಲ್ಲಿನ ವಿಷಯ ಅಲ್ಲ. ಬದಲಿಗೆ, ಸಾಂವಿಧಾನಿಕ ಕೆಲಸ ನಿರ್ವಹಿಸುವಲ್ಲಿ ಒಟ್ಟಾರೆಯಾಗಿ ವಿಳಂಬ ಆಗಿದೆಯೇ ಎಂಬುದು ಇಲ್ಲಿನ ಪ್ರಶ್ನೆ' ಎಂದು ಸ್ಪಷ್ಟಪಡಿಸಿತು.

ಕೇರಳ ಸರ್ಕಾರದಿಂದ ಅರ್ಜಿ

                  ಕೇರಳ ವಿಧಾನಸಭೆಯ ಅನುಮೋದನೆ ಪಡೆದಿರುವ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರದಲ್ಲಿ ರಾಜ್ಯಪಾಲರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿ ಕೇರಳ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

               ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿ ಮಾಡಲಾಗಿದೆ. ಎಂಟು ಮಸೂದೆಗಳ ಪೈಕಿ ಕೆಲವು ಏಳು ತಿಂಗಳುಗಳಿಂದ ಬಾಕಿ ಉಳಿದಿವೆ, ಇನ್ನು ಕೆಲವರು ಮೂರು ವರ್ಷಗಳಿಂದ ಬಾಕಿ ಇವೆ ಎಂದು ಕೇರಳ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಹೇಳಿದ್ದಾರೆ.

                   ಮಸೂದೆಗಳಿಗೆ ಅಂಕಿತ ಹಾಕದೆ, ಅನಿರ್ದಿಷ್ಟ ಅವಧಿಗೆ ಇಟ್ಟುಕೊಳ್ಳುವುದು ಪ್ರಜಾತಾಂತ್ರಿಕ ಮೌಲ್ಯಗಳಿಗೆ ವಿರುದ್ಧ ಎಂದು ಕೇರಳ ಸರ್ಕಾರವು ಅರ್ಜಿಯಲ್ಲಿ ಹೇಳಿದೆ. ಮಸೂದೆಗೆ ಅಂಕಿತ ಹಾಕುವುದು ಅಥವಾ ಹಾಕದೆ ಇರುವುದು ತಮಗಿರುವ ಪ್ರಶ್ನಾತೀತ ವಿವೇಚನಾ ಅಧಿಕಾರ ಎಂದು ರಾಜ್ಯಪಾಲರು ಭಾವಿಸಿರುವಂತಿದೆ. ಇದು ಸಂವಿಧಾನವನ್ನು ಬುಡ ಮೇಲು ಮಾಡುವಂತಿದೆ ಎಂದು ಕೂಡ ಅದು ಹೇಳಿದೆ.

                                                       'ಅಂಕಿತ ತಡೆಹಿಡಿಯುವುದು ಸಲ್ಲದು'

                   ತಮಿಳುನಾಡು ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಎ.ಎಂ. ಸಿಂಘ್ವಿ, ಪಿ. ವಿಲ್ಸನ್ ಮತ್ತು ಮುಕುಲ್ ರೋಹಟಗಿ ಅವರು, 'ರಾಜ್ಯಪಾಲರು ಮಸೂದೆಗಳನ್ನು ತಡೆಹಿಡಿಯಬೇಕು ಎಂದು ಸಂವಿಧಾನದ 200ನೆಯ ವಿಧಿಯು ಹೇಳುವುದಿಲ್ಲ' ಎಂದು ವಾದಿಸಿದರು. 'ನಾನು ಮಸೂದೆಗೆ ಅಂಕಿತ ಹಾಕುವುದನ್ನು ತಡೆಹಿಡಿಯುತ್ತಿದ್ದೇನೆ ಎಂದು ರಾಜ್ಯಪಾಲರು ಹೇಳಲು ಅವಕಾಶ ಇಲ್ಲ' ಎಂದು ವಿವರಿಸಿದರು.

                       200ನೆಯ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಮೂರು ಆಯ್ಕೆಗಳು ಇರುತ್ತವೆ. ಅವರು ಮಸೂದೆಗೆ ಅಂಕಿತ ಹಾಕಬಹುದು, ಮಸೂದೆಯನ್ನು ತಡೆ ಹಿಡಿಯಬಹುದು, ಮಸೂದೆಯನ್ನು ರಾಷ್ಟ್ರಪತಿಯ ಅನುಮೋದನೆಗೆ ರವಾನಿಸಬಹುದು ಎಂದು ಪೀಠವು ಹೇಳಿತು. 'ರಾಜ್ಯಪಾಲರು ಮಸೂದೆಯನ್ನು ತಡೆಹಿಡಿದ ಸಂದರ್ಭದಲ್ಲಿ ಅದನ್ನು ಅವರು ಮರುಪರಿಶೀಲನೆಗೆ ರವಾನಿಸಲೇಬೇಕೇ? ಕಾನೂನು ಈ ವಿಚಾರವಾಗಿ, ಮರುಪರಿಶೀಲನೆಗೆ ಕಳಿಸಲೂಬಹುದು ಎನ್ನುತ್ತದೆ' ಎಂದು ಪೀಠವು ವಿವರಣೆ ನೀಡಿತು.

                 ಅಂಕಿತ ಹಾಕುವುದನ್ನು ತಡೆಹಿಡಿದಾಗ, ರಾಜ್ಯಪಾಲರು ಮಸೂದೆಯನ್ನು ಆದಷ್ಟು ಬೇಗ ಸದನಕ್ಕೆ ಮರಳಿಸಬೇಕಾ ಗುತ್ತದೆ. ಅಥವಾ ಮಸೂದೆಯನ್ನು ರಾಷ್ಟ್ರಪತಿ ಒಪ್ಪಿಗೆಗೆ ಕಳುಹಿಸಬೇಕಾಗುತ್ತದೆ ಎಂದು ಸಿಂಘ್ವಿ ವಿವರಿಸಿದರು.


****

               ವಿಧಾನಸಭೆಯ ಮರು ಅನುಮೋದನೆ ಪಡೆದ ಮಸೂದೆಗಳನ್ನು ರಾಜ್ಯಪಾಲರು, ರಾಷ್ಟ್ರಪತಿ ಅನುಮೋದನೆಗೆ ರವಾನಿಸಬಹುದೇ?

                                   - ಸುಪ್ರೀಂ ಕೋರ್ಟ್‌ ನ್ಯಾಯಪೀಠ ಕೇಳಿದ ಪ್ರಶ್ನೆ

                  ವಿಧಾನಸಭೆಯ ಮರು ಅನುಮೋದನೆ ಪಡೆದ ಮಸೂದೆಗಳ ವಿಚಾರವಾಗಿ ಇಂತಹ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಅವಕಾಶ ಇಲ್ಲ

- ತಮಿಳುನಾಡು ಸರ್ಕಾರದ ಪರ ವಕೀಲರ ಉತ್ತರ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries