HEALTH TIPS

ಸ್ಮಾರ್ಟ್ ಫೋನ್‌ನಲ್ಲಿ ಜಾಗ ಸಾಲುತ್ತಿಲ್ಲವೇ? ಒಂದಿಷ್ಟು ಟ್ರಿಕ್ಸ್ ಇಲ್ಲಿವೆ!

 ಸ್ಮಾರ್ಟ್ ಫೋನ್ ಕೈಗೆ ಬಂದ ಬಳಿಕ ಎಲ್ಲರೂ ಫೋಟೋಗ್ರಾಫರ್ ಅಥವಾ ವೀಡಿಯೋಗ್ರಾಫರ್‌ಗಳಾಗಿದ್ದೇವೆ. ಫೋನ್ ಕೊಳ್ಳುವಾಗಲೂ ಕ್ಯಾಮೆರಾಕ್ಕೇ ಹೆಚ್ಚು ಪ್ರಾಧಾನ್ಯತೆ. ಹೋದಲ್ಲಿ ಬಂದಲ್ಲಿ, ಯಾವುದೇ ಶುಭ ಸಮಾರಂಭ, ಅಪರೂಪದ ಭೇಟಿಯನ್ನು ದಾಖಲೆಯಾಗಿ ಬರೆದಿಡಲು, ಯಾವುದಾದರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಇಡೀ ಜಗತ್ತಿಗೇ ತಿಳಿಯಪಡಿಸುವ ಹಂಬಲ ನಮಗೆ. ಜೀವನದ ಪ್ರತಿಯೊಂದು ಕ್ಷಣಗಳನ್ನೂ ಜಗತ್ತಿಗೆ ಸಾರಿ ಹೇಳುವುದಕ್ಕಾಗಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟರ್‌ಗಳಿದ್ದಾವಲ್ಲ… ಹೀಗಾಗಿ ಫೋಟೋ ಹಾಗೂ ವೀಡಿಯೋಗಳು ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಇಷ್ಟೇ ಅಲ್ಲದೆ, ಸ್ಮಾರ್ಟ್‌ಫೋನುಗಳು ಈಗ ಬಿಡುವಿನ ಸಂಗಾತಿಯಾಗುತ್ತಾ, ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳುವ ಅಭ್ಯಾಸವಿರುವವರು ಪಿಡಿಎಫ್ ರೂಪದಲ್ಲಿರುವ ಪುಸ್ತಕಗಳನ್ನೋ, ಹಲವಾರು ಬುಕ್ ರೀಡರ್ ಆ್ಯಪ್‌ಗಳ ಮೂಲಕ ಲಭ್ಯವಾಗುವ ಡಿಜಿಟಲ್ ಪುಸ್ತಕಗಳನ್ನೋ ಡೌನ್‌ಲೋಡ್ ಮಾಡಿಟ್ಟುಕೊಂಡು, ಪ್ರಯಾಣದ ವೇಳೆ ಅಥವಾ ಯಾವುದೇ ಬಿಡುವಿನ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುವ ತುಡಿತ ಹೊಂದಿರುತ್ತಾರೆ. ಇಂತಹವರಿಗೆಲ್ಲರಿಗೂ ದೊಡ್ಡ ತೊಡಕು ಎಂದರೆ ಫೋನ್‌ನ ಸ್ಟೋರೇಜ್ ಸಾಲುತ್ತಿಲ್ಲ.

ಅನುಕೂಲಗಳು ಹೆಚ್ಚಾದಂತೆಯೇ ನಮ್ಮ ಅಗತ್ಯಗಳೂ ಹೆಚ್ಚಾಗುತ್ತಿವೆ ಎಂಬುದಕ್ಕೆ ಈ ಸ್ಮಾರ್ಟ್ ಫೋನ್ ಕ್ರಾಂತಿಯೇ ಉತ್ತಮ ಉದಾಹರಣೆ. ಕೆಲ ಕಾಲದ ಹಿಂದೆ, 512 ಎಂಬಿ RAM ಹಾಗೂ 2 ಜಿಬಿ ಇಂಟರ್ನಲ್ ಮೆಮೊರಿಯ ಫೋನುಗಳು ಬರುತ್ತಿದ್ದವು. ಮನುಷ್ಯನ ಅಗತ್ಯ ಹೆಚ್ಚಾದಂತೆ ಈಗ 8 ಜಿಬಿ RAM ಇರುವ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೇಜ್ ಇರುವ ಸ್ಮಾರ್ಟ್‌ಫೋನ್‌ಗಳೂ ಬಂದಿವೆ. ಅದಕ್ಕೆ ತಕ್ಕಂತೆ ಬೆಲೆಯೂ ಇರುತ್ತದೆಂಬ ವಿಷಯ ಬದಿಗಿಟ್ಟರೆ, ಮನುಷ್ಯನ ಅಗತ್ಯಗಳು ಬದಲಾಗಿವೆ ಎಂಬುದಂತೂ ಈ ಬೆಳವಣಿಗೆಯನ್ನು ಗಮನಿಸಿಯೂ ನಿರ್ಧರಿಸಬಹುದು. ಇಂತಿರುವಾಗ, ಇರುವ ಫೋನನ್ನೇ ಭರ್ಜರಿ ಸಂಪನ್ಮೂಲಗಳ, ಅಂದರೆ ನಮ್ಮಿಷ್ಟದ ವೀಡಿಯೋ, ಆಡಿಯೋ, ಫೋಟೋ, ಡಾಕ್ಯುಮೆಂಟ್ ಫೈಲುಗಳು, ಡಿಜಿಟಲ್ ಪುಸ್ತಕಗಳುಳ್ಳ ಆಗರವಾಗಿ ಪರಿವರ್ತಿಸಿಕೊಳ್ಳುವುದು ಹೇಗೆ? ಕೈಯಲ್ಲಿರುವ ಮೊಬೈಲ್ ಫೋನ್‌ನಲ್ಲೇ ಸ್ಟೋರೇಜನ್ನು ವ್ಯವಸ್ಥಿತವಾಗಿಟ್ಟುಕೊಳ್ಳುವ ಮೂಲಕ ಹೇಗೆ ಸದುಪಯೋಗ ಮಾಡಿಕೊಳ್ಳಬಹುದೆಂದು ಹಿಂದೊಮ್ಮೆ ಬರೆದಿದ್ದೆ. ಈಗ ಅವುಗಳನ್ನು ಮತ್ತೊಮ್ಮೆ ನೆನಪಿಸುತ್ತಾ, ಮತ್ತಷ್ಟು ಆಧುನಿಕ ವಿಧಾನಗಳ ಮೇಲೆ ಬೆಳಕು ಚೆಲ್ಲುತ್ತೇನೆ.

ಅನಗತ್ಯ ಆ್ಯಪ್‌ಗಳು:
ಇಂಟರ್ನಲ್ ಮೆಮೊರಿಯಲ್ಲಿ ಫೈಲುಗಳ ಸಂಖ್ಯೆ ಕಡಿಮೆಯಾದಷ್ಟೂ ಮೊಬೈಲ್ ಸಾಧನವು ಹೆಚ್ಚು ಸುಲಲಿತವಾಗಿ ಕೆಲಸ ಮಾಡುತ್ತದೆ. ಹೊಸ ಮೊಬೈಲ್ ಫೋನ್‌ಗಳಲ್ಲಿ ಕಂಪನಿಯವರೇ ಕೆಲವೊಂದು ಆ್ಯಪ್‌ಗಳನ್ನು ಅಳವಡಿಸಿರುತ್ತಾರೆ. ಇವುಗಳನ್ನು ಸ್ಟಾಕ್ ಆ್ಯಪ್ಸ್ ಅಥವಾ ಇನ್‌ಬಿಲ್ಟ್ ಆ್ಯಪ್ಸ್ ಎನ್ನಲಾಗುತ್ತದೆ. ಅವುಗಳಲ್ಲಿ ನಿಮಗೆ ಉಪಯೋಗಕ್ಕಿಲ್ಲ ಎಂದು ಕಂಡುಬಂದವನ್ನು ಸಾಧ್ಯವಾದರೆ (ಹೆಚ್ಚಿನ ಸಂದರ್ಭಗಳಲ್ಲಿ ಅಸಾಧ್ಯ) ಅನ್‌ಇನ್‌ಸ್ಟಾಲ್ ಮಾಡಿಬಿಡಿ. ಇಲ್ಲವೇ, ಸೆಟ್ಟಿಂಗ್ಸ್‌ನಲ್ಲಿ ಆ್ಯಪ್ಸ್ ಎಂಬಲ್ಲಿಗೆ ಹೋಗಿ, ನಿಮಗೆ ಬೇಡವೆಂದಾದ ಆ್ಯಪ್ ಕ್ಲಿಕ್ ಮಾಡಿ, ಡಿಸೇಬಲ್ ಮಾಡಿಬಿಡಿ. ಕೊಂಚವಾದರೂ ಜಾಗ ಉಳಿತಾಯವಾಗುತ್ತದೆ. ಆ್ಯಪ್‌ಗಳ ಸಂಖ್ಯೆ ಕಡಿಮೆಯಿದ್ದಷ್ಟೂ ಸ್ಟೋರೇಜ್ ಸ್ಪೇಸ್ ಉಳಿತಾಯವಾಗುತ್ತದೆ.

ಒಟಿಜಿ:
ಮುಖ್ಯವಾಗಿ ಒಂದು ಫೋನ್‌ನಲ್ಲಿ, ಅದರ ಕಾರ್ಯಾಚರಣೆಗೆ ನೆರವಾಗುವ RAM, ಜತೆಗೆ ನಿಗದಿತ ಇಂಟರ್ನಲ್ ಮೆಮೊರಿ ಇರುತ್ತದೆ. ಇದರೊಂದಿಗೆ ಸ್ಟೋರೇಜನ್ನು (ಸ್ಥಳಾವಕಾಶವನ್ನು) ಮೆಮೊರಿ ಕಾರ್ಡ್ (ಮೈಕ್ರೋ ಎಸ್‌ಡಿ ಕಾರ್ಡ್) ಹಾಕುವ ಮೂಲಕ ವಿಸ್ತರಿಸಬಹುದಾಗಿದೆ. ಇದಲ್ಲದೆ ಯುಎಸ್‌ಬಿ ಪೆನ್ ಡ್ರೈವ್‌ನಂತೆಯೇ, ಮೊಬೈಲ್ ಫೋನ್‌ನಿಂದ ಫೈಲುಗಳನ್ನು ಕಾಪಿ ಮಾಡಿಕೊಳ್ಳಲು ಅಥವಾ ಅದಕ್ಕೆ ಸೇರಿಸಲು ಅನುಕೂಲ ಮಾಡಿಕೊಡುವ ಒಟಿಜಿ (ಆನ್ ದ ಗೋ) ಡ್ರೈವ್ ತಂತ್ರಜ್ಞಾನವು ಈಗಿನ ಬಹುತೇಕ ಫೋನುಗಳಲ್ಲಿರುತ್ತವೆ. ಅಂದರೆ, ಫೈಲ್ ಶೇರ್ ಮಾಡಿಕೊಳ್ಳುವ ಶೇರ್‌ಇಟ್, ಈಸೀಶೇರ್ ಮುಂತಾದ ಆ್ಯಪ್‌ಗಳ ನೆರವಿಲ್ಲದೆ, ಕಂಪ್ಯೂಟರಿನ ನೆರವೂ ಇಲ್ಲದೆ ಮೊಬೈಲ್ ಫೋನ್‌ನಿಂದ ಫೈಲುಗಳನ್ನು ನೇರವಾಗಿ ಬೇರೊಂದು ಸಾಧನಕ್ಕೆ ವರ್ಗಾಯಿಸಲು ಇರುವ ವ್ಯವಸ್ಥೆಯಿದು. ವಿವಿಧ ಸ್ಟೋರೇಜ್ ಸಾಮರ್ಥ್ಯದ ಒಟಿಜಿ ಡ್ರೈವ್‌ಗಳು ಹಾಗೂ ಯುಎಸ್‌ಬಿ/ಫ್ಲ್ಯಾಶ್ ಡ್ರೈವ್‌ಗಳು ಮಾರುಕಟ್ಟೆಯಲ್ಲಿ ಈಗ ಸಾಕಷ್ಟು ಸಿಗುತ್ತಿವೆ. ಒಟಿಜಿ ಡ್ರೈವ್‌ಗಳನ್ನು ನೇರವಾಗಿ ಮೊಬೈಲ್ ಫೋನ್‌ಗೆ ಸಂಪರ್ಕಿಸಬಹುದಾಗಿದ್ದರೆ, ಯುಎಸ್‌ಬಿ/ಫ್ಲ್ಯಾಶ್ ಡ್ರೈವ್‌ಗಳನ್ನು ಒಟಿಜಿ ಕೇಬಲ್ ಮೂಲಕ ಫೋನ್‌ಗೆ ಸಂಪರ್ಕಿಸಬಹುದು. ಬೇಕಾದಾಗಲೆಲ್ಲ ಅದರಲ್ಲಿರುವ ಫೈಲುಗಳನ್ನು ಫೋನ್ ಮೂಲಕ ಬಳಸಬಹುದು.

ಎಸ್‌ಡಿ ಕಾರ್ಡ್‌ಗೆ ಆ್ಯಪ್:
ನೀವು ಇನ್‌ಸ್ಟಾಲ್ ಮಾಡಿಕೊಳ್ಳುವ ಯಾವುದೇ ಆ್ಯಪ್‌ಗಳು ಮೊಬೈಲ್ ಫೋನ್‌ನ ಡಿವೈಸ್ ಮೆಮೊರಿಯಲ್ಲಿಯೇ ಕೂರುತ್ತವೆ. ಇವುಗಳಲ್ಲಿ ಬಹುತೇಕ ಆ್ಯಪ್‌ಗಳನ್ನು ಮೆಮೊರಿ ಕಾರ್ಡ್‌ಗೆ ವರ್ಗಾಯಿಸಬಹುದು. ಅದು ಹೇಗೆಂದರೆ, ಮೊಬೈಲ್ ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ ‘ಆ್ಯಪ್ಸ್’ ಅಂತ ಹುಡುಕಿದರೆ, ಅಲ್ಲಿ ನಿಮ್ಮ ಫೋನ್‌ನಲ್ಲಿರುವ ಎಲ್ಲ ಆ್ಯಪ್‌ಗಳು ಗೋಚರಿಸುತ್ತವೆ. ಒಂದೊಂದನ್ನೇ ಕ್ಲಿಕ್ ಮಾಡಿ. ಹಳೆಯ ಫೋನುಗಳಲ್ಲಿ Move to SD card ಎಂಬ ಆಯ್ಕೆ ಅಲ್ಲಿಯೇ ಕಾಣಿಸಿದರೆ, ಇತ್ತೀಚಿನ ಕಾರ್ಯಾಚರಣಾ ವ್ಯವಸ್ಥೆಯ ಆಂಡ್ರಾಯ್ಡ್ ಫೋನುಗಳಲ್ಲಿ ‘ಸ್ಟೋರೇಜ್’ ಎಂಬುದನ್ನು ಕ್ಲಿಕ್ ಮಾಡಿದಾಗ ಮೂವ್ ಮಾಡುವ ಆಯ್ಕೆ ಕಾಣಿಸುತ್ತದೆ. ಕೆಲವು ಆ್ಯಪ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ಮೂವ್ ಮಾಡಲಾಗದಂತೆ ರೂಪಿಸಲಾಗಿರುತ್ತದೆ. ಅಂತಹವುಗಳಿಗೆ ಈ ಆಯ್ಕೆಯು ಕಾಣಿಸುವುದಿಲ್ಲ. ಇವುಗಳಲ್ಲಿ ಹೆಚ್ಚಿನವನ್ನು ಕೆಲವೊಂದು ಆ್ಯಪ್‌ಗಳ ಮೂಲಕವೇ ವರ್ಗಾಯಿಸಬಹುದು. app to sd card ಅಂತ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸರ್ಚ್ ಮಾಡಿದರೆ ಸಾಕಷ್ಟು ಆ್ಯಪ್‌ಗಳು ಉಚಿತವಾಗಿ ಲಭ್ಯ. Link2SD ಎಂಬ ಆ್ಯಪ್ ನಾನು ಬಳಸಿದ್ದೇನೆ. ಯಾವುದಾದರೊಂದನ್ನು ಅಳವಡಿಸಿ, ಮೂವ್ ಮಾಡಬಹುದಾದ ಆ್ಯಪ್‌ಗಳನ್ನು ವರ್ಗಾಯಿಸಿಬಿಡಿ. ಆದರೆ ನೆನಪಿಡಿ, ಕೆಲವೊಂದು ಆ್ಯಪ್‌ಗಳನ್ನು ಈ ರೀತಿಯಾಗಿಯೂ ಮೂವ್ ಮಾಡಲಾಗದಂತೆ ರೂಪಿಸಲಾಗಿರುತ್ತದೆ. ಉದಾಹರಣೆಗೆ, ಅತೀ ಹೆಚ್ಚು ಜಾಗದ ಅಗತ್ಯವಿರುವ ವಾಟ್ಸ್ಆ್ಯಪ್ ಅನ್ನು ಎಸ್‌ಡಿ ಕಾರ್ಡ್‌ಗೆ ಮೂವ್ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ.

ಕ್ಲೌಡ್ ಸ್ಟೋರೇಜ್:
ಡೌನ್‌ಲೋಡ್ ಮಾಡಿಕೊಂಡ, ನಾವು ತೆಗೆದ ಫೋಟೋ, ವೀಡಿಯೋ ಹಾಗೂ ರೆಕಾರ್ಡ್ ಮಾಡಿದ ಆಡಿಯೋ ಮುಂತಾದ ಫೈಲುಗಳನ್ನು ಆಗಾಗ್ಗೆ ಕಂಪ್ಯೂಟರಿಗೆ ವರ್ಗಾಯಿಸಿ, ಅಗತ್ಯ ಬೇಕಾದುದನ್ನು ಮಾತ್ರವೇ ಫೋನ್‌ನಲ್ಲಿ ಇರಿಸಿಕೊಳ್ಳುವುದು ಸ್ಥಳ ಉಳಿತಾಯದ ಮತ್ತೊಂದು ಉತ್ತಮ ವಿಧಾನ. ಇದಲ್ಲದೆ, ಈಗ ಇಂಟರ್ನೆಟ್ ಸಂಪರ್ಕವು ಕೈಗೆಟಕುವ ದರದಲ್ಲಿ ಲಭ್ಯವಿರುವುದರಿಂದ, ಗೂಗಲ್ ಡ್ರೈವ್, ಒನ್ ಡ್ರೈವ್, ಡ್ರಾಪ್‌ಬಾಕ್ಸ್, ಬಾಕ್ಸ್ ಮುಂತಾದ ಆನ್‌ಲೈನ್ ಉಚಿತ ಕ್ಲೌಡ್ ಸ್ಟೋರೇಜ್ (ಆನ್‌ಲೈನ್‌ನಲ್ಲಿ ಸ್ಟೋರ್ ಮಾಡಿಡುವ) ತಾಣಗಳಲ್ಲಿ ರಿಜಿಸ್ಟರ್ ಮಾಡಿಕೊಂಡು, ಅವುಗಳ ಆ್ಯಪ್ ಅಳವಡಿಸಿಕೊಳ್ಳಿ. ವಿವಿಧ ಫೈಲುಗಳನ್ನು ಅದರಲ್ಲೇ ಸೇವ್ ಮಾಡಿಟ್ಟುಕೊಂಡು, ಬೇಕಾದಾಗ ಇಂಟರ್ನೆಟ್ ಸಂಪರ್ಕದ ಮೂಲಕ ಬಳಸಬಹುದು.

ನೆನಪಿಡಿ:
ಹೊಸದಾಗಿ ಸ್ಮಾರ್ಟ್ ಫೋನ್ ಖರೀದಿಸುವವರೆಲ್ಲರೂ ಕನಿಷ್ಠ 3 ಜಿಬಿ RAM ಹಾಗೂ 32 ಜಿಬಿ ಇಂಟರ್ನಲ್ ಮೆಮೊರಿ ಇರುವ ಫೋನ್‌ಗಳ ಮೇಲೆಯೇ ಗಮನ ಹರಿಸುವುದು ಒಳ್ಳೆಯದು. ಈ ಸ್ಪೆಸಿಫಿಕೇಶನ್ ಇರುವ ಫೋನುಗಳ ಬೆಲೆ 6 ಸಾವಿರ ರೂ.ನಿಂದಲೇ ಪ್ರಾರಂಭವಾಗುತ್ತಿದ್ದು, ದೊಡ್ಡ ಕಂಪನಿಗಳ ಫೋನ್‌ಗಳ ಬೆಲೆ ಸಹಜವಾಗಿ ಸ್ವಲ್ಪ ಹೆಚ್ಚಿರುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries