HEALTH TIPS

Katchatheevu: ಏನಿದು ಕಚ್ಚತೀವು ದ್ವೀಪ ವಿವಾದ? ಸುಮ್ಮನೆ ಶ್ರೀಲಂಕಾಕ್ಕೆ ಬಿಟ್ಟು ಕೊಟ್ಟಿದ್ದರಾ ನೆಹರು?

 ಲೋಕಸಭೆ ಚುನಾವಣೆ  ನಡೆಯುವ ಹೊತ್ತಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಕಚ್ಚತೀವು (Katchatheevu) ದ್ವೀಪದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಶ್ರೀಲಂಕಾಗೆ ಭಾರತವು  ಬಿಟ್ಟುಕೊಟ್ಟ ಕಚ್ಚತೀವು ದ್ವೀಪದ ಬಗ್ಗೆ ಆರ್‌ಟಿಐನಲ್ಲಿ (RTI) ಸಿಕ್ಕ ಮಾಹಿತಿ ಬಹಿರಂಗವಾಗಿದೆ. ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ  ಇದಕ್ಕೆ ಸಂಬಂಧಿಸಿದಂತೆ ಆರ್‌ಟಿಐನಿಂದ ಮಾಹಿತಿ ಪಡೆದಿದ್ದಾರೆ. ಇದು ತಮಿಳುನಾಡಿನಲ್ಲಿ  ಲೋಕಸಭೆ ಚುನಾವಣೆಯ ದಿಕ್ಸೂಚಿಯನ್ನೇ ಬದಲಿಸುವ ಸಾಧ್ಯತೆಗಳಿವೆ. ಜವಾಹರ್ ಲಾಲ್ ನೆಹರೂ  ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ  ಸ್ವಾರ್ಥಕ್ಕಾಗಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ. ಕಚ್ಚತೀವು ದ್ವೀವನ್ನು ಮತ್ತೆ ಹಿಂಪಡೆಯಲು ಉಭಯ ದೇಶಗಳು ಮಾತುಕತೆ ನಡೆಸಬೇಕೆಂದು ಪ್ರಧಾನಿ ಮೋದಿ ಆಶಿಸಿದ್ದಾರೆ.

ಕಚ್ಚತೀವು ದ್ವೀಪ ಎಲ್ಲಿದೆ? ಹೇಗಿದೆ?

ಕಚ್ಚತೀವು ದ್ವೀಪ ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿದೆ. ಭಾರತದ ಕರಾವಳಿಯಿಂದ ರಾಮೇಶ್ವರಂನ ಈಶಾನ್ಯ ದಿಕ್ಕಿನಲ್ಲಿದೆ. 285 ಎಕರೆ ವಿಸ್ತಾರವುಳ್ಳ ಈ ದ್ವೀಪವು ಕುಡಿಯಲು ನೀರಿಲ್ಲದ ಕಾರಣ ಜನ ವಸತಿಗೆ ಯೋಗ್ಯವಾಗಿಲ್ಲ.

ಕಚ್ಚತೀವು ದ್ವೀಪದ ಇತಿಹಾಸ

14ನೇ ಶತಮಾನದಲ್ಲಿ ಜ್ವಾಲಾಮುಖಿ ಸ್ಫೋಟದಿಂದ ದ್ವೀಪ ನಿರ್ಮಾಣವಾಯಿತು. ಇದು ಶ್ರೀಲಂಕಾದ ಜಾಫ್ನಾ ಸಾಮ್ರಾಜ್ಯದಿಂದ ನಿಯಂತ್ರಿಸಲ್ಪಟ್ಟಿತ್ತು. ಉಲ್ಲೇಖಗಳ ಪ್ರಕಾರ ಈ ದ್ವೀಪವು ರಾಮನಾಥಪುರದ ಸೇತುಪತಿ ರಾಜನ ಅಡಿಯಲ್ಲಿ ಶಿವಗಂಗಾ ಸಂಸ್ಥಾನದ ಭಾಗವಾಗಿತ್ತು ಎನ್ನಲಾಗಿದೆ.

ಚರ್ಚ್‌ನಲ್ಲಿ ವರ್ಷಕ್ಕೊಮ್ಮೆ ಉತ್ಸವಕ್ಕೆ ಅವಕಾಶ

ಈ ದ್ವೀಪದಲ್ಲಿ 20ನೇ ಶತಮಾನದಲ್ಲಿ ನಿರ್ಮಾಣಗೊಂಡ ಕ್ಯಾಥೋಲಿಕ್ ಸೇಂಟ್ ಆಂಥೋನಿ ಚರ್ಚ್ ಇದೆ. ಇಲ್ಲಿ ವರ್ಷಕ್ಕೊಮ್ಮೆ ಉತ್ಸವ ನಡೆಯಲಿದ್ದು, ಆ ದಿನ ಮಾತ್ರ ಭಾರತ, ಶ್ರೀಲಂಕಾ ಕ್ರಿಶ್ಚಿಯನ್ ಪಾದ್ರಿಗಳು ಸೇವೆ ಮಾಡಲು ಬರುತ್ತಾರೆ. ಶ್ರೀಲಂಕಾದಲ್ಲಿ ಎಲ್‌ಟಿಟಿಇ ಯುದ್ಧದ ಸಮಯದಲ್ಲಿ ಮೀನುಗಾರರು ಮತ್ತು ಇತರರಿಗೆ ಪ್ರವೇಶವನ್ನು ನೌಕಾಪಡೆ ನಿರ್ಬಂಧಿಸಿತು.

1974ರ ಒಪ್ಪಂದದಂತೆ ಕಚ್ಚತೀವು ದ್ವೀಪ ಶ್ರೀಲಂಕಾ ದೇಶಕ್ಕೆ ಸೇರಿತು. 1974ರಲ್ಲಿ ಇಂದಿರಾ ಗಾಂಧಿ ಅವರು ಸಮುದ್ರದ ಗಡಿಯ ವಿವಾದ ಶಾಶ್ವತವಾಗಿ ಪರಿಹರಿಸಲು ಪ್ರಯತ್ನಿಸಿದರು. ದ್ವೀಪ ಬಿಟ್ಟುಕೊಡುವುದರಿಂದ ನೆರೆ ರಾಷ್ಟ್ರದ ಜೊತೆಗೆ ಸಂಬಂಧ ವರ್ಧಿಸುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಚ್ಚತೀವು ದ್ವೀಪ ಶ್ರೀಲಂಕಾ ಪಾಲಾಯಿತು.

ಜವಾಹರ್ ಲಾಲ್ ನೆಹರೂ ನಿರುತ್ಸಾಹ

ಸಿಲೋನ್‌ನ ಹಕ್ಕು ಮತ್ತು ಭಾರತದಿಂದ ನಡೆಯುತ್ತಿರುವ ವಿರೋಧವನ್ನು ಗಮನದಲ್ಲಿಟ್ಟುಕೊಂಡು, ಮೇ 10, 1961 ರಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಒಂದು ನಿಮಿಷದಲ್ಲಿ ಈ ವಿಷಯವನ್ನು ಅಪ್ರಸ್ತುತವೆಂದು ತಳ್ಳಿಹಾಕಿದರು. ಈ ದ್ವೀಪದ ಮೇಲಿನ ಹಕ್ಕು ಬಿಟ್ಟುಕೊಡಲು ನಾನು ಯಾವುದೇ ಹಿಂಜರಿಕೆ ತೋರಿಸುವುದಿಲ್ಲ ಎಂದು ಅವರು ಬರೆದಿದ್ದಾರೆ. ನಾನು ಈ ಪುಟ್ಟ ದ್ವೀಪವನ್ನು ಗೌರವಿಸುವುದಿಲ್ಲ ಮತ್ತು ಅದರ ಮೇಲಿನ ನನ್ನ ಹಕ್ಕನ್ನು ಬಿಟ್ಟುಕೊಡಲು ಯಾವುದೇ ಹಿಂಜರಿಕೆಯಿಲ್ಲ. ಈ ವಿವಾದವು ಅನಿರ್ದಿಷ್ಟವಾಗಿ ಮುಂದುವರಿಯುವುದು ಮತ್ತು ಸಂಸತ್ತಿನಲ್ಲಿ ಮತ್ತೆ ಪ್ರಸ್ತಾಪಿಸುವುದು ನನಗೆ ಇಷ್ಟವಿಲ್ಲ ಎಂದಿದ್ದರಂತೆ!

ಕಚ್ಚತೀವು ಬಳಿ ಮೀನುಗಾರಿಕೆ ನಿಷೇಧ

ಕಚ್ಚತೀವು ದ್ವೀಪಕ್ಕೆ ಭಾರತೀಯರು ವಿಶ್ರಾಂತಿ ಪಡೆಯಲು, ಬಲೆಗಳನ್ನು ಒಗಿಸಲು ಹಾಗೂ ಚರ್ಚ್‌ಗೆ ಭೇಟಿ ನೀಡಲು ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿತ್ತು. 1976ರಲ್ಲಿನ ಒಪ್ಪಂದ ಪ್ರಕಾರ ಭಾರತದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ, ಎರಡೂ ದೇಶಗಳು ಮೀನುಗಾರಿಕೆಯನ್ನು ನಿಷೇಧಿಸಿತು.

ನೌಕಾಪಡೆ ಸರಬರಾಜು ಮಾರ್ಗಕ್ಕೆ ತಡೆ

1983ರಲ್ಲಿ ಅಂತರ್ಯುದ್ಧ ಗಡಿ ವಿವಾದಗಳನ್ನು ಉಲ್ಬಣಗೊಳಿಸಿತು. ಪ್ರತ್ಯೇಕ ತಮಿಳು ರಾಷ್ಟ್ರಕ್ಕೆ ಎಲ್‌ಟಿಟಿಇ ಹೋರಾಟ ನಡೆಸಿತು. ಆಗ ಶ್ರೀಲಂಕಾ ನೌಕಾಪಡೆ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸಿತು. ಈ ವೇಳೆಯೂ ಭಾರತೀಯ ಮೀನುಗಾರರು ಅತಿಕ್ರಮಣ ಮಾಡುತ್ತಿದ್ದರು. ಭಾರತೀಯರ ದೊಡ್ಡ ಮೀನುಗಾರಿಕೆಯಿಂದ ಶ್ರೀಲಂಕಾ ಮೀನುಗಾರಿಕೆಗೆ ಪೆಟ್ಟು ಬೀಳುತ್ತಿತ್ತು.

ಕೋರ್ಟ್ ಮೆಟ್ಟಿಲೇರಿದ್ದ ಜಯಲಲಿತಾ

2009ರಲ್ಲಿ ಎಲ್ ಟಿಟಿಇ-ಶ್ರೀಲಂಕಾ ಯುದ್ಧ ಕೊನೆಗೊಂಡಿತು. ನಂತರದ ದಿನಗಳಲ್ಲಿ ಭಾರತದ ಮೀನುಗಾರರನ್ನು ಶ್ರೀಲಂಕಾ ಬಂಧಿಸತೊಡಗಿತು. ಹಿಂಸೆ, ಸಾವಿನ ಪ್ರಕರಣ ಕೇಳಿ ಬರುತ್ತಿದ್ದಂತೆ ಕಚ್ಚತೀವು ಮೇಲೆ ಹಕ್ಕು ಪ್ರತಿಪಾದನೆ ಕೂಗು ಕೇಳಿಬಂದಿತು. ತಮಿಳುನಾಡಿನ ಅಂದಿನ ಸಿಎಂ ಜಯಲಲಿತಾ 1974ರ ಒಪ್ಪಂದದ ವಿರುದ್ಧದ ಸುಪ್ರೀಂಕೋರ್ಟ್ ಮೆಟ್ಟಿಲು ಸಹ ಏರಿದ್ದರು.

ಕೇಸರಿ ಪಾಳಯದಿಂದ ಅಭಿಯಾನ

2014ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಕಚ್ಚತೀವು ದ್ವೀಪದ ವಿವಾದ ಹಾಗೂ ತಮಿಳುನಾಡಿದ ದಕ್ಷಿಣ ತೀರದಲ್ಲಿರುವ ಮೀನುಗಾರರ ಮೇಲಿನ ದೌರ್ಜನ್ಯದ ವಿರುದ್ಧ ರಾಮೇಶ್ವರಂನಲ್ಲಿ ಕೇಸರಿ ನಾಯಕರು ಹೋರಾಟ ನಡೆಸಿದರು. ಆದರೆ ಎಷ್ಟೇ ಹೋರಾಟ ನಡೆಸಿದರೂ ಯಶಸ್ವಿಯಾಗಲಿಲ್ಲ. ಈಗ ಲೋಕಸಭೆ ಚುನಾವಣೆ ಹೊತ್ತಲ್ಲಿ ಮತ್ತೆ ವಿವಾದ ಭುಗಿಲೇಳುತ್ತಿದೆ. ಈಗ ತಾನೇ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಮಾತುಕತೆ, ಒಪ್ಪಂದಗಳಿಂದ ಸ್ನೇಹ ಬೆಳೆಸುತ್ತಿರುವಾಗ, ಈ ವಿವಾದ ಮತ್ತೆ ಕಿಡಿ ಹಚ್ಚುವ ಮುನ್ಸೂಚನೆ ನೀಡುವಂತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries