ತಿರುವನಂತಪುರಂ: ಕೇರಳ ವಿಶ್ವವಿದ್ಯಾಲಯದಲ್ಲಿ ಕುಲಪತಿಯೂ ಆಗಿರುವ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ವಿರುದ್ಧ ಎಸ್.ಎಫ್.ಐ. ನಡೆಸಿದ ಹಿಂಸಾತ್ಮಕ ಪ್ರತಿಭಟನೆಗೆ ಸಂಬಂಧಿಸಿದಂತೆ ಪೋಲೀಸರು 27 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಲ್ಲಿ ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿ ಪಿ.ಎಸ್. ಸಂಜೀವ್ ಸೇರಿದ್ದಾರೆ.
ಎಲ್ಲಾ 27 ಜನರ ವಿರುದ್ಧ ಜಾಮೀನು ರಹಿತ ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಯ ಸಮಯದಲ್ಲಿ 10,000 ರೂ. ಮೌಲ್ಯದ ಹಾನಿ ಸಂಭವಿಸಿದೆ. ಐವರು ಪೋಲೀಸ್ ಅಧಿಕಾರಿಗಳು ಸಹ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರ ಪೋಲೀಸ್ ಆಯುಕ್ತರ ಸೂಚನೆಯ ಮೇರೆಗೆ ಜಾಮೀನು ರಹಿತ ಆರೋಪಗಳನ್ನು ದಾಖಲಿಸಲಾಗಿದೆ. ಆರೋಪಿಗಳಿಗೆ ಜಾಮೀನು ನೀಡುವಂತೆ ಪೋಲೀಸರ ಮೇಲೆ ಸಾಕಷ್ಟು ಒತ್ತಡವಿತ್ತು.
ಆರೋಪಿಗಳಲ್ಲಿ ಒಬ್ಬರಾದ ಮಹಿಳಾ ಕಾರ್ಯಕರ್ತೆಯನ್ನು ನೋಟಿಸ್ ಮೇಲೆ ಬಿಡುಗಡೆ ಮಾಡಲಾಗಿದೆ. ಕಾರ್ಯಕರ್ತರು ಪೋಲೀಸ್ ಬ್ಯಾರಿಕೇಡ್ ಅನ್ನು ಭೇದಿಸಿ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಗೆ ನುಗ್ಗಿ ಸೆನೆಟ್ ಹಾಲ್ ಮತ್ತು ಕುಲಪತಿ ಕೊಠಡಿಯ ಬಳಿ ಪ್ರತಿಭಟನೆ ನಡೆಸಿದರು.
ಪೋಲೀಸರ ಸಹಾಯದಿಂದ ಎಸ್.ಎಫ್.ಐ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆ ನಡೆಸಲು ಸಾಧ್ಯವಾಯಿತು. ಪ್ರತಿಭಟನಾಕಾರರ ಬಗ್ಗೆ ಪೆÇಲೀಸರು ತೋರಿದ ಮೃದು ಧೋರಣೆ ವ್ಯಾಪಕವಾಗಿ ಟೀಕೆಗೆ ಗುರಿಯಾಯಿತು.






