ಬೆತ್ತವಿಲ್ಲದ ಸಾಂಕೇತಿಕ ಕಂಬಳ- ಗೊಂದಲದ ಬಳಿಕ ಕಂಬಳಕ್ಕೆ ಕೊನೆಗೂ ಒಪ್ಪಿಗೆ
0
ಡಿಸೆಂಬರ್ 14, 2018
ಉಪ್ಪಳ: ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ಘಟಕ, ಕಾಸರಗೋಡು-ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಕಂಬಳ ಸಮಿತಿ ಸಹಿತ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಪೈವಳಿಕೆ ಸಮೀಪದ ಬೋಳಂಗಳದಲ್ಲಿ ಮೊತ್ತಮೊದಲ ಬಾರಿಗೆ ಆಯೋಜನೆಗೊಂಡಿರುವ ಇಂದು ನಡೆಯಬೇಕಿದ್ದ ಕಂಬಳ ಫೆಟಾ(ಪೀಪಲ್ ಪೋರ್ ದಿ. ಎಥಿಕಲ್ ಟ್ರೀಟ್‍ಮೆಂಟ್ ಓಫ್ ಅನಿಮಲ್ಸ್) ಸಂಘಟನೆ ನೀಡಿರುವ ತಡೆಯಾಜ್ಞೆಯ ಗೊಂದಲದ ಬಳಿಕ ಶುಕ್ರವಾರ ರಾತ್ರಿ ಕೊನೆಗೂ ಸುಖಾಂತ್ಯಗೊಂಡು ಕಂಬಳ ಪ್ರೀಯರ ಹರ್ಷಕ್ಕೆ ಕಾರಣವಾಗಿದೆ.
ಕಂಬಳ ಉತ್ಸವದ ಹಿನ್ನೆಲೆಯಲ್ಲಿ ಗುರುವಾರ ಹಾಗೂ ಶುಕ್ರವಾರ ತುಳುನಾಡ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ಈ ಮಧ್ಯೆ ಶುಕ್ರವಾರ ಫೇಟಾ(ಪೀಪಲ್ ಪೋರ್ ದಿ. ಎಥಿಕಲ್ ಟ್ರೀಟ್‍ಮೆಂಟ್ ಓಫ್ ಅನಿಮಲ್ಸ್) ಸಂಘಟನೆ ಜಿಲ್ಲಾ ಪೋಲೀಸ್ ವರಿಷ್ಠರ ಮೂಲಕ ಕಂಬಳ ನಡೆಸದಂತೆ ತಡೆಯಾಜ್ಞೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಕಂಬಳ ನಡೆಸುವ ಬಗ್ಗೆಗೊಂದಲಗಳುಂಟಾಯಿತು.
ಈ ಬಳಿಕ ಶುಕ್ರವಾರ ಸಂಜೆ ಸಂಘಟಕರು ಮಂಜೇಶ್ವರ ಪೋಲೀಸ್ ಅಧಿಕಾರಿ ಶಾಜಿ ಅವರೊಂದಿಗೆ ನಡೆಸಿದ ಸುಧೀರ್ಘ ಅವಧಿಯ ಸಂಧಾನದ ಬಳಿಕ ಕಂಬಳ ನಡೆಸಲು ಮೌಖಿಕ ಒಪ್ಪಿಗೆ ನೀಡಿರುವರೆಂದು ತಿಳಿದುಬಂದಿದೆ.ಕೋಣಗಳನ್ನು ಓಡಿಸಲು ಬೆತ್ತಗಳನ್ನು ಬಳಸದೆ ಸಾಂಕೇತಿಕ ರೀತಿಯಲ್ಲಿ ಕಂಬಳ ಮುನ್ನಡೆಸಲು ಸಂಘಟಕರು ಒಪ್ಪಿರುವುದರಿಂದ ಕಂಬಳಕ್ಕೆ ಅನುಮತಿ ನೀಡಲಾಗಿದೆಯೆಂದು ಪೋಲೀಸರು ತಿಳಿಸಿದ್ದಾರೆ.
ಕೇಂದ್ರ ಸಚಿವ ಡಿ.ಸದಾನಂದ ಗೌಡ ಉದ್ಘಾಟಿಸುವರು. ನಿನ್ನೆ ತಡರಾತ್ರಿಯ ವರೆಗೆ ನಡೆದ ಸಂಧಾನ ಮಾತುಕತೆಯಲ್ಲಿ ಪಕ್ಷ, ಸಂಘಟನೆಗಳ ಪ್ರಮುಖರಾದ ಅಬ್ದುಲ್ ರಜಾಕ್ ಚಿಪ್ಪಾರು, ಝಡ್ ಎ ಕಯ್ಯಾರು, ಭಾಸ್ಕರ ರೈ ಮಂಜಲ್ತೋಡಿ, ಕಂಬಳ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ಪೂಜಾರಿ ಲಾಲ್‍ಭಾಗ್, ಅಜಿತ್ ಎಂ.ಸಿ, ದ.ಕ-ಉಡುಪಿ-ಕಾಸರಗೋಡು ಜಿಲ್ಲೆಗಳ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಪೊಯ್ಯೆಲು, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.



