ಖಾವಂದರಿಗೆ ಧರ್ಮಚಕ್ರವರ್ತಿ ಬಿರುದು
0
ಫೆಬ್ರವರಿ 24, 2019
ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ಸೋಮಯಾಗದ ಐದನೇ ದಿನವಾದ ಶುಕ್ರವಾರ ರಾತ್ರಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಧರ್ಮ ಚಕ್ರವರ್ತಿ ಬಿರುದನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಮಾನ ಸನ್ಮಾನಗಳು ಅಂತರಂಗದಲ್ಲಿ ಅಹಂಕಾರವಾಗಿ ಮೂಡದೆ, ಆರ್ತರ ಸೇವೆಮಾಡುವ, ಬದುಕನ್ನು ಸಾರ್ಥಕ್ಯಗೊಳಿಸುವ ಉತ್ತಮ ಕರ್ತವ್ಯಕ್ಕೆಳಸಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು. ಗೌರವ, ಅಭಿನಂದನೆಗಳು ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಿ ಮುನ್ನಡೆಯಲು ಪ್ರೇರಣೆ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ., ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರು ಹಾಗೂ ಬಾರ್ಕೂರು ಮಹಾಸಂಸ್ಥಾನದ ವಿಶ್ವಸಂತೋಷ್ ಗುರೂಜಿ ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
ಗುರುವಾಯೂರು ದೇವಾಲಯದ ತಂತ್ರಿವರ್ಯ ಬ್ರಹ್ಮಶ್ರೀ ಚೇನಾಸ್ ದಿನೇಶನ್ ನಂಬೂದಿರಿಪ್ಪಾಡ್ ಅವರು ಮಾತನಾಡಿ, ಇಂದಿನ ಗೊಂದಲಮಯವಾದ ಪ್ರಪಂಚ, ನೋವುಗಳ ಮಧ್ಯೆ ಇಂತಹ ವೇದೋಕ್ತ ವಿಧಿವಿಧಾನಗಳಿಂದ ಸುಭಿಕ್ಷ ನೆಲೆಗೊಳ್ಳಲಿ. ಕೊಂಡೆವೂರು ಪ್ರದೇಶವು ಧನಾತ್ಮ ಶಕ್ತಿ ಕೇಂದ್ರವಾಗಿ ಬೆಳವಣಿಗೆಗೊಂಡಿದ್ದು, ಇಲ್ಲಿಯ ವಾತಾವರಣ ಸಂಕಷ್ಟವನ್ನು ದೂರಗೊಳಿಸಿ ಸಂತೃಪ್ತಿ ನೀಡುವ ತಾಣವಾಗಿ ರೂಪುಗೊಂಡಿದೆ ಎಂದು ತಿಳಿಸಿದರು.
ಕಟೀಲು ಶ್ರೀಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಉಪಸ್ಥಿತರಿದ್ದು ಮಾತನಾಡಿದರು.
ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಸದಾಶಿವ ಶೆಟ್ಟಿ, ಕುಳೂರು ಕನ್ಯಾನ, ಮಧೂರು ಶ್ರೀಕ್ಷೇತ್ರದ ಪುನರ್ ನವೀಕರಣ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಎಂ.ಬಿ.ಪುರಾಣಿಕ್ ಸ್ವಾಗತಿಸಿ, ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ನಾವರ ವಂದಿಸಿದರು. ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

