ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯಿಂದ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶನಿವಾರ ದೆಹಲಿಯಲ್ಲಿ ಸರ್ವಪಕ್ಷ ಸಭೆ ಕರೆದು ಮುಂದೆ ತೆಗೆದುಕೊಳ್ಳಬೇಕಾದ ಕ್ರಮ ಬಗ್ಗೆ ಚರ್ಚೆ ನಡೆಸಿತು.
ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಮಿತಿ ಸಭೆ ಮುಗಿದ ನಂತರ ಗೃಹ ಸಚಿವ ರಾಜನಾಥ್ ಸಿಂಗ್ ಶ್ರೀನಗರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ನಂತರ ಗಾಯಾಳು ಯೋಧರ ಯೋಗಕ್ಷೇಮ ವಿಚಾರಿಸಿದ್ದರು.
ಸರ್ವಪಕ್ಷ ಸಭೆ ಮುಗಿದ ನಂತರ ಮಾಹಿತಿ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ಈ ದುರ್ಘಟನೆಗೆ ಕಾರಣರು ಯಾರೇ ಆಗಿರಲಿ, ಅವರನ್ನು ಪತ್ತೆಹಚ್ಚಿ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲು ಎಲ್ಲ ಪಕ್ಷದವರು ಒಮ್ಮತದಿಂದ ನಿರ್ಧಾರ ಮಾಡಿದ್ದೇವೆ. ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಉಗ್ರಗಾಮಿ ಚಟುವಟಿಕೆಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಮತ್ತು ಒಪ್ಪುವುದು ಕೂಡ ಇಲ್ಲ. ಹೀಗಾಗಿ ಈ ದಾಳಿ ನಡೆದಿದೆ ಎಂದರು.
ದೇಶಕ್ಕೆ ಶಾಂತಿ ಬೇಕು ಎಂದು ಬಯಸುವವರು ನಮ್ಮ ಜೊತೆ ಇದ್ದಾರೆ. ಗಡಿಯಲ್ಲಿರುವ ಕೆಲವು ವಿಷಯಗಳು ಮತ್ತು ಕಾರಣಗಳು ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿದ್ದು ಅವರು ಕಾಶ್ಮೀರದ ಯುವಕರ ಶತ್ರುಗಳಾಗಿದ್ದಾರೆ, ಅವರೆಂದಿಗೂ ಶಾಂತಿಯನ್ನು ಬಯಸುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ನರೇಂದ್ರ ಸಿಂಗ್ ತೊಮರ್ ಹೇಳಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ಭೀಕರ ಯುದ್ಧಗಳನ್ನು ಹೊರತುಪಡಿಸಿ ನಮ್ಮ ಅರಿವಿನಂತೆ 1947ರಿಂದ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಯೋಧರು ಹುತಾತ್ಮರಾಗಿರುವುದು ಇದೇ ಮೊದಲು ಇರಬೇಕು. ಈ ಘಟನೆಯನ್ನು ಎಲ್ಲಾ ಜಾತಿ, ಧರ್ಮ, ಪ್ರದೇಶ, ಪಕ್ಷಗಳು ಹೊರತುಪಡಿಸಿ ಎಲ್ಲರೂ ಖಂಡಿಸುತ್ತಿದ್ದಾರೆ. ಈ ಸಮಯದಲ್ಲಿ ನಮ್ಮ ಪಕ್ಷ ಭಾರತೀಯ ಸೇನೆಯ ಜೊತೆಗೆ ಮತ್ತು ಜಮ್ಮು-ಕಾಶ್ಮೀರದ ಸ್ಥಳೀಯ ಪೊಲೀಸರಿಗೆ ಸಹಕಾರ ನೀಡಲು ನಿರ್ಧರಿಸಿದೆ ಎಂದರು.

ಸರ್ಕಾರದ ಜೊತೆ ನಮಗೆ ಹಲವು ಭಿನ್ನಾಭಿಪ್ರಾಯಗಳಿರಬಹುದು ಆದರೆ ದೇಶದ ಹಿತಾಸಕ್ತಿ, ಭದ್ರತೆ ವಿಚಾರದಲ್ಲಿ ಭಯೋತ್ಪಾದನೆಯನ್ನು ಹೋಗಲಾಡಿಸಲು ಸರ್ಕಾರದ ಜೊತೆ ನಿಲ್ಲುತ್ತೇವೆ, ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದರು.
ಪ್ರಧಾನಿಯವರು ಸ್ವತಃ ಈ ವಿಷಯದಲ್ಲಿ ಎಲ್ಲಾ ರಾಷ್ಟ್ರೀಯ ಮತ್ತು ಸ್ಥಳೀಯ ಪಕ್ಷಗಳ ಅಧ್ಯಕ್ಷರನ್ನು ಭೇಟಿ ಮಾಡಿ ಚರ್ಚೆ ನಡೆಸಬೇಕು. ನಿನ್ನೆ ರಾಹುಲ್ ಗಾಂಧಿಯವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನೇ ಇಂದು ನಾವು ಸರ್ವಪಕ್ಷ ಸಭೆಯಲ್ಲಿ ಹೇಳಿದ್ದೇವೆ ಎಂದರು.
ಸಭೆಯಲ್ಲಿ ಗುಲಾಂ ನಬಿ ಆಜಾದ್, ಆನಂದ್ ಶರ್ಮ, ಜ್ಯೋತಿರಾಧಿತ್ಯ ಸಿಂಧ್ಯ, ಸುದೀಪ್ ಬಂಡೋಪಾಧ್ಯಾಯ, ಟಿಎಂಸಿಯ ದೆರೆಕ್ ಒ ಬ್ರೈನ್, ಶಿವಸೇನೆಯ ಸಂಜಯ್ ರಾವತ್, ಟಿಆರ್ ಎಸ್ ನ ಜಿತೇಂದ್ರ ರೆಡ್ಡಿ, ಸಿಪಿಐಯ ಡಿ ರಾಜಾ, ನ್ಯಾಷನಲ್ ಕಾನ್ಫರೆನ್ಸ್ ನ ಫಾರೂಕ್ ಅಬ್ದುಲ್ಲಾ, ಎಲ್ ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಇತರರು ಭಾಗವಹಿಸಿದ್ದರು.
ಸಭೆಯಲ್ಲಿ ಪುಲ್ವಾಮಾ ದಾಳಿಯ ನಂತರ ಸರ್ಕಾರ ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಗೃಹ ಸಚಿವಾಲಯ ತಿಳಿಸಿದೆ.