HEALTH TIPS

ವೇದ ಪರಂಪರೆಯ ಮಾರ್ಗಸೂಚಿಯಾದ ಅತಿರಾತ್ರ ಸೋಮಯಾಗ-ಇಂದು ಸಂಪನ್ನ

ಭಾರತೀಯ ಸಂಸ್ಕøತಿ ಪರಂಪರೆ ಪ್ರಕೃತಿಯೊಂದಿಗೆ ಮಿಳಿತವಾಗಿ ಬೆಳೆದುಬಂದಿರುವಂತದ್ದು. ಇಲ್ಲಿಯ ಆರಾಧನೆ, ನಂಬಿಕೆ, ಜೀವನಕ್ರಮಗಳೇ ಮೊದಲಾದವುಗಳ ಅಂತರಾತ್ಮ ಅಚೇತನ ಕೃತಿಗಳಿಂದ ನಿರ್ವಚಿಸಲ್ಪಟ್ಟು ಜೀವ ಜಗತ್ತಿಗೆ ತೆರೆದುಕೊಂಡಿರುವುದು ಕಂಡುಬರುತ್ತದೆ. ಭೂಮಿಯ ಉಗಮದ ಜೊತೆಗೆ ಸಾಗಿಬಂದ ನಿಧಾನ ಗತಿಯ ಜೀವ-ಸಸ್ಯ ರಾಶಿಗಳು ಚೋದಿಗದಿಂದ ಸುತ್ತಲಿನ ವಿದ್ಯಮಾನಗಳನ್ನು ಗುರುತಿಸಿತು. ಬೀಜದ ಚಿಗುರೊಡೆಯುವಿಕೆ, ತತ್ತಿಯಿಂದ ಜೀವದ ಕೊಸರುವಿಕೆ, ಅಗ್ನಿ, ಜಲ, ವಾಯುವಿನ ನಿರಾಡಂಬರತೆ ಮೊದಲಾದವುಗಳು ವಿಶಿಷ್ಟ ರೂಪಗಳಾಗಿ ಜೀವಜಗತ್ತಿಗೆ ಎಂದಿಗೂ ಕುತೂಹಲವೆ. ಈ ಹಿನ್ನೆಲೆಯಲ್ಲಿ ಅತಿ ಪ್ರಾಚೀನ ಭಾರತೀಯ ಆರ್ಷ ಪರಂಪರೆ ಪ್ರಕೃತಿಯೊಂದಿಗೇ ಸಮ್ಮಿಳಿತಗೊಂಡು ಅದಕ್ಕೊಂದು ಆರಾಧನೆಯ ರೂಪಕದೊಂದಿಗೆ ಸಮೀಕರಿಸಲ್ಪಟ್ಟಿತು. ಈ ಹಿನ್ನೆಲೆಯಲ್ಲಿ ಯಾಗ, ಹೋಮ-ಹವನ, ಪೂಜೆ, ಸಂಕೀರ್ತನೆ, ಕೋಲ-ಆಯನಗಳು ಆಯಾ ಕಾಲದಲ್ಲಿ ಪ್ರಾದೇಶಿಕವಾಗಿ ವಿಭಿನ್ನವಾಗಿ ಈ ಮಣ್ಣಿನಲ್ಲಿ ಹುಟ್ಟುಪಡೆದುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಕರಾವಳಿಯ ಪವಿತ್ರ ಯಾಗಭೂಮಿಯೆಂದೇ ಈಗಾಗಲೇ ಗುರುತಿಸಿಕೊಂಡಿರುವ ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಫೆಬ್ರವರಿ 18 ರಿಂದ ಆರಂಭಗೊಂಡು ಇಂದು ಮುಂಜಾನೆ ಅತಿರಾತ್ರ ಸೋಮಯಾಗ ಪೂರ್ಣಾಹುತಿಗೊಳ್ಳಲಿದ್ದು, ಪ್ರಪಂಚ ನೆಮ್ಮದಿಯ ಹೊಸ ಮನ್ವಂತರದ ಶುಭನಿರೀಕ್ಷೆ ಭಾವುಕ ಭಜಕರದ್ದು. ಯಾಗ ಮಂಟಪದ ಗಮನೀಯ ಅಂಶಗಳು: ಯಾಗದಂಗವಾಗಿ ಶುಕ್ರವಾರ ಮುಂಜಾನೆ ಯಾಗ ಮಂಟಪದ ವಿಶೇಷ ಬೃಹತ್ ಯಾಗಕುಂಡದಲ್ಲಿ ಅರುಣ ಕೇತುಕ ಚಯನ ಎಂಬ ಕ್ರಮದ ವಿಧಾನದ ಮೂಲಕ ಯಾಗ ನಿರಂತರವಾಗಿ ಮುಂದುವರಿಯಿತು. ಅರುಣ ಕೇತುಕ ಚಯನ ಎಂಬ ವಿಧಾನವು ಭಾರತೀಯ ಆಧ್ಯಾತ್ಮವು ವಿಜ್ಞಾನವನ್ನು ಕಂಡುಕೊಂಡ ಪ್ರತಿಮೆಯಾಗಿ ಬೆರಗುಗೊಳಿಸುತ್ತದೆ. ಸುಮಾರು 5.5 ಫೀಟ್ ಆಳದೀ ಅರುಣ ಕೇತುಕ ಚಯನ ಯಾಗ ಕುಂಡದಲ್ಲಿ ಭೂಮಿಯನ್ನು ಹೊತ್ತ ಆಮೆಯ ಪ್ರತೀಕವಾಗಿ ಮೊದಲು ಜೀವಂತ ಆಮೆಯೊಂದನ್ನು ನೀರಲ್ಲಿ ಇರಿಸಲಾಗಿದೆ. ಬಳಿಕ ಅದರ ಸುತ್ತಲೂ 1160 ಮಡಕೆಗಳಲ್ಲಿ ಮಳೆ, ಬಾವಿ, ಕೆರೆ, ಭಾರತದ ವಿವಿಧ ಪುಣ್ಯ ನದಿಗಳ ತೀರ್ಥಗಳು ಮೊದಲಾದವುಗಳನ್ನು ತುಂಬಿಸಿ ಇರಿಸಲಾಗುತ್ತದೆ. ಇಲ್ಲಿ 1160 ಎಂಬುದು ವಿಶೇಷ ಸಂಖ್ಯೆಯೂ ಆಗಿರುವುದು ವಿಶೇಷ. ಎಂದರೆ ವರ್ಷದ 365 ದಿನಗಳು, ನಕ್ಷತ್ರಗಳು, ರಾಶಿಗಳು, ಋತುಗಳು ಇತ್ಯಾದಿಗಳನ್ನು ಒಳಗೊಂಡಿದೆ. ಈ ನೀರಲ್ಲಿ ತಾವರೆ ಮೊಗ್ಗುಗಳನ್ನೂ, ಚಿನ್ನದ ಹುಡಿಗಳನ್ನೂ ಇರಿಸಲಾಗುತ್ತದೆ. ಇಷ್ಟು ವ್ಯವಸ್ಥೆಯ ಬಳಿಕ ವಿವಿಧ ಅಜ್ಯಗಳಿಂದ ಹವನ ಆರಂಭಿಸಲಾಗಿದೆ. ಯಾಗದ ಮೇಲ್ಬದಿ ಶ್ರೀಮಹಾವಿಷ್ಣುವಿನ ಪ್ರತಿಮೆಯನ್ನು ಇರಿಸಲಾಗಿದ್ದು, ಯಾಗಕ್ಕೆ ವಿಷ್ಣುವೇ ಪ್ರಧಾನ ದೇವನೂ ಆಗಿದ್ದಾನೆ. ಆ ಬಳಿಕ ಶನಿವಾರ ಮುಂಜಾನೆ ನಾಲ್ಕರಿಂದ ಯಾಗದ ಪ್ರಧಾನ ಘಟ್ಟ ಆರಂಭಗೊಂಡು ಇಂದು ಮುಂಜಾನೆಯ ತನಕ ನಿರಂತರವಾಗಿ ನಡೆದಿದೆ. ಕೇಂದ್ರ ಸಚಿವರ ಯಜ್ಞ ಸಂರಕ್ಷಣೆ! ಪ್ರಾಚೀನ ಕಾಲದಲ್ಲಿ ಯಾಗ-ಯಜ್ಞಾದಿಗಳ ಸಂರಕ್ಷಣೆಯ ಹೊಣೆ ರಾಜ ಮಹಾರಾಜರ ಜವಾಬ್ದಾರಿಯಾಗಿತ್ತು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜರ ಪ್ರತ್ಯಕ್ಷ ಸಾನ್ನಿಧ್ಯ ಇಲ್ಲದಿರುವುದರಿಂದ ಪ್ರಸ್ತುತ ಕೊಂಡೆವೂರಿನ ಸೋಮಯಾಗದ ಸಂರಕ್ಷಣೆಯ ರಾಜ ಜವಾಬ್ದಾರಿಯನ್ನು ಯಾಗ ಸಮಿತಿ ಗೌರವಾಧ್ಯಕ್ಷ, ಕೇಂದ್ರ ಸಚಿವ ಶ್ರೀಪಾದ ಎಸ್ಸೋ ನಾಯಕ್ ಅವರು ವಹಿಸಿದ್ದು, ಶನಿವಾರ ಇಂತಹ ವ್ಯವಸ್ಥೆಯೊಂದನ್ನು ನಿರ್ವಹಿಸುವ ಸನ್ನಿವೇಶ ಅವರಿಗೆ ಒದಗಿಬಂತು. ಸಚಿವರು ಸ್ವತಃ ರಾಜಪೋಷಾಕಿನಲ್ಲಿ ಬಿಲ್ಲು ಬಾಣಗಳನ್ನು ಹಿಡಿದು ಯಾಗ ಮಂಟಪದ ಸುತ್ತ ಸಂಚರಿಸಿ ಬಳಿಕ ಸಾಂಕೇತಿಕವಾಗಿ ಬಾಣಗಳನ್ನು ಬಿಲ್ಲಿಗೇರಿಸಿ ಗುರಿಯಿರಿಸಿದರು. ಈ ಮೂಲಕ ಪ್ರಾಚೀನ ಪರಂಪರೆಯೊಂದರ ಮರು ಸಾಕ್ಷಾತ್ಕಾರ ಸಂಪನ್ನಗೊಂಡಿತು. ಇಂದಿನ ಕಾರ್ಯಕ್ರಮ: ಇಂದು (ಭಾನುವಾರ) ಅತಿವಿಶಿಷ್ಟ ವಿಶ್ವಜಿತ್ ಅತಿರಾತ್ರ ಸೋಮಯಾಗ ಪೂರ್ಣಾಹುತಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ.18ರಿಂದ 24ರವರೆಗೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರೌತ ವಿದ್ವಾಂಸ ಗೋಕರ್ಣದ ವಿದ್ವಾನ್ ಗಣೇಶ ವಾಸುದೇವ ಜೋಗಳೇಕರ ಅವರ ಅಧ್ವರ್ಯವದಲ್ಲಿ ಬ್ರಹ್ಮಶ್ರೀ ಅನಿರುದ್ಧ ವಾಜಪೇಯಿಯವರ ಯಜಮಾನತ್ವದಲ್ಲಿ ಲೋಕಕಲ್ಯಾರ್ಥವಾಗಿ ಅತ್ಯಪೂರ್ವವಾಗಿ ಅರುಣ ಕೇತುಕ ಚಯನದೊಂದಿಗೆ ನಡೆದ ವಿಶ್ವಜಿತ್ ಅತಿರಾತ್ರ ಸೋಮಯಾಗವು ಇಂದು ಪೂರ್ಣಾಹುತಿಗೊಳ್ಳಲಿದೆ. ಯಾಗಶಾಲೆಯಲ್ಲಿ ಶನಿವಾರ ಯಜ್ಞಸಾರಥಿಗಾನ, ಗ್ರಹೋಪಸ್ಥಾನ, ಪ್ರಾತರನುವಾಕ, ನಾಮ-ಸುಬ್ರಹ್ಮಣ್ಯಾಹ್ವಾ, ಸೋಮಾಭಿಷವ, ಗ್ರಹ ಗ್ರಹಣ, ಸರ್ಪಣ, ಬಹಿಷ್‍ಪವಮಾನ, ಸವನೀಯಯಾಗ, ವಪಾಯಾಗ, ಪ್ರಾತಸ್ಸವನ, ಆಜ್ಯಾದಿ ಶಸ್ತ್ರಗಳು, ಪ್ರಾತಸ್ಸವನ ಸಮಾಪ್ತಿ. ಬಳಿಕ ಮಾಧ್ಯಂದಿನ ಸವನ ಪ್ರಕ್ರಿಯೆಗಳು, ರಾತ್ರಿ ಪರ್ಯಾಯದಲ್ಲಿ ಅಶ್ವಿನ ಸ್ತೋತ್ರ, ಶಸ್ತ್ರ. ಪ್ರಸನ್ನ ಮಹಾಪೂಜೆ. ಅನ್ನಸಂತರ್ಪಣೆ ನಡೆಯಿತು. ಬೆಳಗ್ಗಿನಿಂದ ರಾತ್ರಿಯವರೆಗೂ ಸಾವಿರಾರು ಮಂದಿಭಕ್ತರು ಯಾಗಶಾಲೆಗೆ ಭೇಟಿನೀಡಿ ಯಾಗದೇವತೆಯ ಕೃಪೆಗೆ ಪಾತ್ರರಾದರು. ಇಂದು (ಭಾನುವಾರ) ಬೆಳಿಗ್ಗೆ ಪ್ರಾಯಶ್ಚಿತ್ತಾದಿ ಯಜ್ಞಪುಚ್ಛ, ಅವಭೃತಸ್ನಾನ, ಉದಯನಿಯೇಷ್ಟಿ, ಮೃತ್ರಾವರುಣೇಷ್ಟಿ, ಉದವಸಾನೀಯ, ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ಸಮಾರೋಪ ಸಮಾರಂಭದ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 5ರಿಂದ ಯಜ್ಞಶಾಲೆಗೆ ಅಗ್ನಿಸ್ಪರ್ಶ ಯಜ್ಞ ಸಮರ್ಪಣೆ, ಮಂತ್ರಾಶೀರ್ವಾದ, ಮಹಾಪ್ರಸಾದ ವಿತರಣೆಯಾಗಲಿದೆ. ಜಲಸ್ತಂಭನ ವಿಶೇಷ: ಕಳೆದ ಏಳು ದಿನಗಳಿಂದ ನಡೆದ ಅತಿವಿಶಿಷ್ಟವಾದ ಅರುಣ ಕೇತುಕ ಚಯನ ಪೂರ್ವಕವಾದ ಅತಿರಾತ್ರ ಸೋಮಯಾಗದ ಪೂರ್ಣಾಹುತಿಯ ಮೊದಲು ಅವಭೃತ ಸ್ನಾನಕರ್ಮದವಿಶೇಷ ಕ್ರಮ ನಡೆಯಲಿದೆ. ಯಾಗಕ್ಕೆ ಬಳಸಿದ ಮರದ, ಮಣ್ಣಿನ, ಕಬ್ಬಿಣ ಸಹಿತ ವಿವಿಧ ಸಲಕರಣೆಗಳನ್ನು ಉಪ್ಪಳ ಪತ್ವಾಡಿ ಹೊಳೆಯಲ್ಲಿವಿಸರ್ಜಿಸಿ, ಬಳಿಕ ಸರ್ವ ಸಮಸ್ತರೂ ಅವಭೃತ ಸ್ನಾನ ನಿರ್ವಹಿಸುವರು. ಯಾಗ ಸಂಬಂಧಿ ಎಲ್ಲಾ ವಸ್ತುಗಳನ್ನೂ ವಿಸರ್ಜಿಸಿ, ಬಂದು ಸೇರಿರುವ ಭಕ್ತರೆಲ್ಲರೂ ಅವಭೃತ ಸ್ನಾನಗೈಯ್ಯುವುದು ಸೋಮಯಾಗದ ಮಾತ್ರವಾದ ವಿಶೇಷತೆಯಾಗಿದೆ. ಇದು ಕುಂಭ ಮೇಳದ ಸ್ನಾನದ ಫಲ ನೀಡುವುದೆಂಬ ಪ್ರತೀತಿ ನೀಡಲಾಗಿದೆ. ಬಳಿಕ ಹಿಂತಿರುಗಿ ಬಂದು ಎರಡು ಇಷ್ಠಿಗಳು ನಡೆದ ಬಳಿಕ ಯಾಗ ಪೂರ್ಣಾಹುತಿಯೊಂದಿಗೆ ಯಾಗ ಮಂಟಪವನ್ನು ಅಗ್ನಿಗೆಸಮರ್ಪಿಸುವ ವಿಶೇಷ ಪ್ರಕ್ರಿಯೆ ನಡೆಯಲಿದೆ. ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ಅಪರಾಹ್ಣ 2.30ಕ್ಕೆ: ಸಮಾರೋಪ ಸಮಾರಂಭ ಧಾರ್ಮಿಕ ಸಭೆ ನಡೆಯಲಿದ್ದು, ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ, ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರು ಆಶೀರ್ವಚನ ನೀಡುವರು. ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣ, ಆನುವಂಶಿಕ ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಉಪಸ್ಥಿತರಿರುವರು. ಕುಸುಮೋಧರ. ಡಿ. ಶೆಟ್ಟಿ ,ಉದ್ಯಮಿ, ಮುಂಬಯಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸುರೇಶ್ ಪ್ರಭು, ಕೇಂದ್ರ ಸಚಿವರು, ನಾಗರಿಕ ವಿಮಾನಯಾನ, ಭಾರತ ಸರಕಾರ. ಶ್ರೀಪಾದ್ ಯಸ್ಸೋ ನಾಯಕ್, ಮಾನ್ಯ ಆಯುಷ್ ಖಾತೆ ಸಚಿವರು, ಭಾರತಸರಕಾರ, ಬಿ. ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕರು, ಕರ್ನಾಟಕ ಸರಕಾರ. ಕೆ. ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರು, ಕರ್ನಾಟಕ ಸರಕಾರ. ಶ್ರೀರಾಮಲು, ಮಾಜಿ ಮಂತ್ರಿಗಳು ಹಾಗೂ ಶಾಸಕರು, ಕರ್ನಾಟಕ ಸರಕಾರ. ಡಾ. ಪ್ರಭಾಕರ ಭಟ್, ಸಂಚಾಲಕರು, ಶ್ರೀರಾಮ ವಿದ್ಯಾ ಕೇಂದ್ರ, ಕಲ್ಲಡ್ಕ. ಸಂಜೀವ ಮಠಂದೂರು, ಶಾಸಕರು, ಪುತ್ತೂರು. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು. ಸುರೇಂದ್ರ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ. ರೋಹಿತ್ ಶೆಟ್ಟಿ ನಗ್ರಿಗುತ್ತು, ಉದ್ಯಮಿ, ಪ್ರವೀಣ್ ಶೆಟ್ಟಿ ವಕ್ವಾಡಿ - ಫೋರ್ಚೂನ್ ಸಂಸ್ಥೆಗಳು, ದುಬಾಯಿ. ಸರ್ವೋತ್ತಮ ಶೆಟ್ಟಿ , ಉದ್ಯಮಿ, ದುಬಾಯಿ. ಯಶಪಾಲ್ ಸುವರ್ಣ, ಅಧ್ಯಕ್ಷರು, ಮೀನುಗಾರಿಕಾ ಫೆಡರೇಶನ್, ದ.ಕ ಮತ್ತು ಉಡುಪಿ ಜಿಲ್ಲೆ. ಸುನೀಲ್‍ಕೃಷ್ಣ ಸುತಾರ್, ಉಪಾಧ್ಯಕ್ಷರು, ಎನ್. ಸಿ.ಪಿ. ನವಿಮುಂಬೈ. ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ, ಮುಂಬಯಿ. ಗುಣಶೀಲ ಶೆಟ್ಟಿ, ಉದ್ಯಮಿ, ದುಬಾಯಿ. ಶ್ರೀ ಪ್ರೇಮ್‍ನಾಥ್ ಶೆಟ್ಟಿ, ಉದ್ಯಮಿ, ದುಬಾಯಿ ಉಪಸ್ಥಿತರಿರುವರು. ಸಾಯಂಕಾಲ 5. ರಿಂದ: ಯಜ್ಞಸಮರ್ಪಣೆ (ಯಜ್ಞಶಾಲೆಗೆ ಅಗ್ನಿಸ್ಪರ್ಶ), ಮಂತ್ರಾಶೀರ್ವಾದ, ಮಹಾಪ್ರಸಾದ ವಿತರಣೆ ನಡೆಯಲಿದೆ. ಫೆ. 25 ರಂದು ಸೂರ್ಯಾಸ್ತ 6.37ರಿಂದ ಮಾ. 4 ರ ಸೂರ್ಯಾಸ್ತ 6.38ರ ತನಕ 16ನೇ ವóರ್ಷದ ಅಖಂಡ ಭಜನಾ ಸಪ್ತಾಹ ಜರಗಲಿರುವುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries