ಪೆರ್ಲ: ಬೆಂಗಳೂರಿನ ರಾಮನಗರದಲ್ಲಿ ಭಾನುವಾರ ನಡೆದ ಕರ್ನಾಟಕ ಜಾನಪದ ಪರಿಷತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರಕಾರ ಪ್ರವಾಸಿ ಜಾನಪದ ಲೋಕೋತ್ಸವ-2019 ಕಾರ್ಯಕ್ರಮದಲ್ಲಿ ದೈವ ಪಾತ್ರಿ ಕುಟ್ಟಿ ಬಜಕೂಡ್ಲು ಇವರಿಗೆ ಜಾನಪದ ಲೋಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಆದಿಚುಂಚನಗಿರಿ ಮಹಾಸಂಸ್ಥಾನಂನ ಪೀಠಾಧ್ಯಕ್ಷ ಪ.ಪೂ.ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್.ಮುಂಜುನಾಥ್ ಪ್ರಶಸ್ತಿ ಪ್ರದಾನ ಮಾಡಿದರು.
ಆದಿಚುಂಚನಗಿರಿ ಮಠದ ಶಾಖಾಧೀಶರಾದ ಅನ್ನದಾನೇಶ್ವರ ಸ್ವಾಮೀಜಿ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಡಿ.ತಿಮ್ಮೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಕೆ.ಎಂ.ಜಾನಕಿ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಕಾರ್ಯದರ್ಶಿ ಆ.ದೇವೇಗೌಡ, ಕಾರ್ಯಕಾರಿಣಿ ಸದಸ್ಯ ಜಯಪ್ರಕಾಶ್ ಗೌಡ, ಆಡಳಿತ ಟ್ರಸ್ಟಿ ಆದಿತ್ಯ ನಂಜರಾಜ್ ಮೊದಲಾದವರು ಉಪಸ್ಥಿತರಿದ್ದರು.

ದೈವನರ್ತಕನಾಗಿ ಗುರುತಿಸಲ್ಪಟ್ಟಿರುವ ಕುಟ್ಟಿ ಬಜಕೂಡ್ಲು ದೈಪಾತ್ರಿಯಾಗಿ ಇಳಿವಯಸ್ಸಿನಲ್ಲಿಯೂ ದೈವಸೇವೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ ನಾಟಿ ವೈದ್ಯರಾಗಿಯೂ ಜನರಿಗೆ ನೆರವಾಗುತ್ತಿದ್ದದಾರೆ. ಅವರ ನಿಷ್ಠಾವಂತ ಸೇವೆಗೆ ಸಂದ ಗೌರವ ಇದಾಗಿದೆ.
ಏನಂತಾರೆ:
ಪ್ರಶಸ್ತಿ ಬಯಸದೆ ಬಂದ ಭಾಗ್ಯ. ಆದರೂ ತುಂಬಾ ಸಂತೋಷವಾಯಿತು. ಕೇರಳ ಸರಕಾರ ಈಗಾಗಲೇ ನನ್ನ ಬದುಕನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡು ಗೌರವಿಸಿರುವ ಬಗ್ಗೆ ಈ ಸಂದರ್ಭದಲ್ಲಿ ನೆನಪಿಸುತ್ತಿದ್ದೇನೆ. ಕೊನೆಯ ವರೆಗೂ ದೈವ ದೇವರ ಸೇವೆ ಮಾಡುವುದಷ್ಟೇ ನನ್ನ ಆಸೆ. ಗಡಿನಾಡಿನ ಕಲಾವಿದರನ್ನೂ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸುವ, ಪ್ರೋತ್ಸಾಹಿಸುವ ಕರ್ನಾಟಕ ಸರಕಾರದ ಜಾನಪದ ಪರಿಷತ್ತಿನ ಕಾರ್ಯ ಶ್ಲಾಘನೀಯ.
ಕುಟ್ಟಿ ಬಜಕೂಡ್ಲು