ಇಂದಿನಿಂದ ಉಳುವಾರ್ ಮಖಾಂ ಉರೂಸ್- ಮತ ಸೌಹಾರ್ಧತೆಯ ದ್ಯೋತಕವಾದ ಪ್ರವೇಶ ದ್ವಾರ
0
ಮಾರ್ಚ್ 26, 2019
ಕುಂಬಳೆ: ಉಳುವಾರ್ ಮಖಾಂ ಉರೂಸ್ ಇಂದಿನಿಂದ(ಬುಧವಾರ) ಆರಂಭಗೊಳ್ಳಲಿದ್ದು, ಈ ಸಂಬಂಧ ಪೂಕಟ್ಟೆಯಲ್ಲಿ ಸೋಮವಾರ ನಿರ್ಮಿಸಿದ ಪ್ರವೇಶ ದ್ವಾರ ಮತ ಸೌಹಾರ್ಧತೆಗೆ ದ್ಯೋತಕವಾಗಿ ಮನಸೂರೆಗೊಂಡಿದೆ.
ಇಂದಿನಿಂದ ಉಳುವಾರ ದರ್ಗಾದ ಉರೂಸ್ ಆರಂಭಗೊಂಡು ಏ.6 ರಂದು ಮುಕ್ತಾಯವಾಗಲಿದೆ. ಇದರ ಜೊತೆಯಲ್ಲಿ ಅಂಬಿಲಡ್ಕ ಶ್ರೀಪೂಮಾಣಿ-ಕಿನ್ನಿಮಾಣಿ ದೈವಕ್ಷೇತ್ರದ ವಾರ್ಷಿಕ ಜಾತ್ರೆ ಏಪ್ರಿಲ್ 4 ರಂದು ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಎರಡೂ ಧಾರ್ಮಿಕ ಕೇಂದ್ರಗಳ ಪ್ರವೇಶ ದ್ವಾರವನ್ನು ಜೊತೆಯಾಗಿಸಿ ವಿನೂತನ ಶೈಲಿಯಲ್ಲಿ ಪ್ರವೇಶದ್ವಾರ ನಿರ್ಮಿಸಲಾಗಿದೆ. ಎರಡೂ ಕೇಂದ್ರಗಳ ಧಾರ್ಮಿಕ ಚಟುವಟಿಕೆಗಳು ಏಕಕಾಲದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಯಾವುದೇ ಕೋಮು ಸಂಘರ್ಷ, ವಿವಾದಗಳಿಗೆ ಆಸ್ಪದವಾಗದಂತೆ ದೈವಕ್ಷೇತ್ರ ಹಾಗೂ ದರ್ಗಾದ ಪ್ರಮುಖರು ಸಭೆಸೇರಿ ಐತಿಹಾಸಿಕವಾದ ನಿರ್ಣಯದ ಮೂಲಕ ಜೊತೆಯಾಗಿರುವ ರೀತಿಯಲ್ಲಿ ಪ್ರವೇಶ ದ್ವಾರ ನಿರ್ಮಿಸುವ ನಿಟ್ಟಿನಲ್ಲಿ ಮುಂದಾಗಿ ಇತರೆಡೆಗಳಿಗೆ ಇದೀಗ ಮಾದರಿಯಾಗಿದ್ದಾರೆ. ಶ್ರೀಪೂಮಾಣಿ-ಕಿನ್ನಿಮಾಣಿ ದೈವ ಕ್ಷೇತ್ರಕ್ಕೆ ಸಂಬಂಧಿಸಿದ ನವಸೇವಾ ವೃಂದ ಅಂಬಿಲಡ್ಕ ಸಂಘಟನೆಯ ಯುವಕರು ಉಳುವಾರ್ ದರ್ಗಾ ಪ್ರಮುಖರೊಂದಿಗೆ ಸ್ಥಳೀಯ ಮುಸ್ಲಿಂ ಸೋದರರ ಸಹಕಾರದೊಂದಿಗೆ ತೋರಿಸಿಕೊಟ್ಟಿರುವ ಮಾದರಿ ಚಟುವಟಿಕೆ ಕೋಮು ಭಾವನೆ, ರಾಜಕೀಯ ಮೇಲಾಟಗಳಲ್ಲಿ ಕಾಲೆಳೆಯುವವರಿಗೆ ಅಷ್ಟೊಂದು ರುಚಿಕರವಾಗಿರದು ಎಂಬ ಮಾತುಗಳ ಮಧ್ಯೆ ಸಹೃದಯ ನಾಗರಿಕರ ಮುಕ್ತ ಪ್ರಶಂಸೆಗೆ ಕಾರಣವಾಗಿದೆ.

