ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಬಿಜೆಪಿಗೆ; ದಿಲ್ಲಿಯಿಂದ ಸ್ಪರ್ಧೆ
0
ಮಾರ್ಚ್ 23, 2019
ಹೊಸದಿಲ್ಲಿ : ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗ ಗೌತಮ್ ಗಂಭೀರ್ ಶುಕ್ರವಾರ ಬಿಜೆಪಿ ಸೇರಿದ್ದಾರೆ. ಅಂತೆಯೇ ಅವರು ರಾಷ್ಟ್ರ ರಾಜಧಾನಿಯ ಯಾವುದಾದರೂ ಒಂದು ಸ್ಥಾನದಿಂದ ಬಿಜೆಪಿ ಟಿಕೆಟ್‍ನಲ್ಲಿ ಲೋಕಸಭೆಗೆ ಸ್ಫರ್ಧಿಸುವ ನಿರೀಕ್ಷೆ ಇದೆ.
ಕೇಂದ್ರ ಸಚಿವರಾದ ಅರುಣ್ ಜೇತ್ಲಿ ಮತ್ತು ರವಿ ಶಂಕರ್ ಪ್ರಸಾದ್ ಅವರ ಸಮ್ಮುಖದಲ್ಲಿ ಗೌತಮ್ ಗಂಭೀರ್ ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದರು.
ಒಬ್ಬ ಉತ್ತಮ ಆರಂಭಕಾರನಾಗಿ ಮಿಂಚಿದ್ದ ಗೌತಮ್ ಗಂಭೀರ್ 2011ರ ವಿಶ್ವ ಕಪ್ ಮತ್ತು 2007 ಟಿ-20 ವಿಶ್ವ ಕಪ್ ಗೆದ್ದ ಭಾರತ ತಂಡದ ಓರ್ವ ಪ್ರಮುಖ ಆಟಗಾರನಾಗಿದ್ದು ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು.ಈಚೆಗಷ್ಟೇ ಗಂಭೀರ್ ಪದ್ಮಶ್ರೀ ಪ್ರಶಸ್ತಿಯಿಂದ ಪುರಸ್ಕತರಾಗಿದ್ದರು.
ಬಿಜೆಪಿಯ ಮೀನಾಕ್ಷಿ ಲೇಖೀ ಅವರು ಪ್ರಕೃತ ಪ್ರತಿನಿಧಿಸುತ್ತಿರುವ ನ್ಯೂಡೆಲ್ಲಿ ಕ್ಷೇತ್ರದಿಂದಲೇ ಗಂಭೀರ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

