ಯೋಕೋಹಮಾ (ಜಪಾನ್) : ರಾಷ್ಟ್ರೀಯ ಹಬ್ಬಕ್ಕೆ ರಜೆ ಘೋಷಿಸಬೇಕು ಅನ್ನೋ ಕೂಗು ಇರೋದು ಸಹಜ. ಇನ್ನು ರಜೆ ಸಿಕ್ಕಿದ್ರೆ ಸಾಕು ಪ್ರವಾಸ, ಫಾರಿನ್ ಟೂರ್, ಮೋಜು ಮಸ್ತಿ ಮಾಡೋಕೆ ಕಾಯ್ತಿರ್ತಾರೆ. ಆದ್ರೆ ಜಪಾನ್ ನಲ್ಲಿ 10 ದಿನ ಒಟ್ಟಿಗೆ ರಜೆ ಕೊಟ್ಟಿದ್ದಕ್ಕೆ ಜನ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಜೋಯೂಸ್ ರಾಷ್ಟ್ರೀಯ ದಿನಾಚರಣೆ ಹಿನ್ನೆಲೆ 10 ದಿನಗಳ ಗೋಲ್ಡನ್ ವೀಕ್ ಪಬ್ಲಿಕ್ ಹಾಲಿಡೆ ನೀಡಲಾಗಿದೆ. ಆದ್ರೆ ಈ ರಜೆ ಜಪಾನೀಯರಿಗೆ ಸಂತಸ ತರುವ ಬದಲು ಕೆಂಡಕಾರುವಂತೆ ಮಾಡಿದೆ ಅಂತ ಸಮೀಕ್ಷೆಗಳು ತಿಳಿಸಿವೆ. ಏಪ್ರಿಲ್ 27ರಿಂದ ಮೇ. 6ವರೆಗೆ ನೀಡಿದ್ದ ರಜೆಗೆ ದೇಶದ ಅರ್ಧದಷ್ಟು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಕೇವಲ ಶ್ರೀಮಂತರು ಮಾತ್ರ ರಜೆಯಿಂದ ಸಂತಸಗೊಂಡಿದ್ದಾರೆ. 10 ದಿನಗಳ ಸಾಲು ರಜೆಯನ್ನ ನೀಡಬೇಡಿ. ಇದೊಂದು ಸರ್ಕಾರದ ಅಪ್ರಯೋಜಕ ನಿರ್ಧಾರ ಅಂತ ಜನ ಅಭಿಪ್ರಾಯಪಟ್ಟಿದ್ದಾರೆ.
10 ದಿನಗಳ ರಜೆ ನೀಡಿದ್ದರಿಂದಾಗಿ ಪ್ರಯಾಣ ದರದಲ್ಲಿ ಏರಿಕೆಯಾಗಿದ್ದು, ಪ್ರವಾಸಿ ತಾಣಗಳು ಜನರಿಂದ ತುಂಬಿದ್ದವು. ಆದ್ರೆ ಬ್ಯಾಂಕ್ ಹಾಗೂ ಚೈಲ್ಡ್ ಸೆಂಟರ್ ಗಳು ಮುಚ್ಚಿವೆ. ಸಣ್ಣ ಪ್ರಮಾಣದ ವ್ಯಾಪಾರ ವಹಿವಾಟಿಗೆ ಹೊಡೆತ ಕೊಟ್ಟಿದೆ. 10 ದಿನಗಳ ರಜೆಯಲ್ಲಿ ಕೆಲವೇ ಮಂದಿ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಮಿಕ್ಕವರು ಪರದಾಡುವಂತಾಗಿದೆ. ಜೊತೆಗೆ ಕೆಲಸಕ್ಕೆ ಹಾಜರಾದ ಸಿಬ್ಬಂದಿ ಡಬಲ್ ಡ್ಯೂಟಿ, ರಜೆ ಕೂಡ ಸಿಗದೇ ನರಕ ಅನುಭವಿಸುವಂತಾಗಿದೆ. ಇದರಿಂದ ಆಕ್ರೋಶಗೊಂಡಿರುವ ಜನ ಇದು ಯಾತನಾಮಯ 10 ದಿನಗಳು ಅಂತ ಟ್ವಿಟರ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಬ್ಬರ 10 ದಿನಗಳ ರಜೆಯನ್ನ ಇನ್ನೊಬ್ಬರ 10 ದಿನಗಳ ಕೆಲಸದ ಮೂಲಕ ಭರ್ತಿ ಮಾಡಲಾಗುತ್ತಿದೆ ಅಂತ ಮಾಡಿದ್ದ ಟ್ವೀಟ್ ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.


