HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-08-ಬರಹ:ಶ್ರೀವತ್ಸ ಜೋಶಿ ವಾಶಿಂಗ್ಟನ್ ಡಿ.ಸಿ.

       
         ಇಂದಿನ ಟಿಪ್ಪಣಿ:
     1.  ಉಪಾಹಾರ ಫಲಾಹಾರ ಶಾಕಾಹಾರ ಸಸ್ಯಾಹಾರ ಮಾಂಸಾಹಾರ
     ಈ ಎಲ್ಲವುಗಳಲ್ಲಿಯೂ ‘ಆಹಾರ’ ಇದೆಯಾದ್ದರಿಂದ, ‘ಆಹಾರ’ ಎಂದು ಬರೆಯುವಾಗ ‘ಆ’ ಅಕ್ಷರ ಇರಲೇಬೇಕಾದ್ದರಿಂದ, ಉಪಹಾರ ಫಲಹಾರ ಶಾಕಹಾರ ಸಸ್ಯಹಾರ ಮಾಂಸಹಾರ ಎಂದೆಲ್ಲ ಬರೆಯಬಾರದು. ಶಾಕಾಹಾರವನ್ನು ಶಾಖಾಹಾರ ಎಂದು ತಪ್ಪಾಗಿ ಬರೆಯುವವರಿದ್ದಾರೆ. ಅದು ಶಾಖೆಗಳಲ್ಲಿ (ಗಿಡ ಮರ ಬಳ್ಳಿಗಳ  branchಗಳಲ್ಲಿ ಅಥವಾ ಗೆಲ್ಲುಗಳಲ್ಲಿ) ಬೆಳೆಯುವ ಪದಾರ್ಥದಿಂದ, ಅಂದರೆ ತರಕಾರಿಯಿಂದ, ತಯಾರಿಸಿದ್ದಾದ್ದರಿಂದ ‘ಶಾಖಾಹಾರ’ ಎಂದು ಸಮರ್ಥಿಸುವ ಕನ್ನಡ ಎಮ್ಮೆ ಪಂಡಿತರೂ, ಎಂ.ಎ ಪ್ರೊಫೆಸರ್‍ಗಳೂ ನಮ್ಮಲ್ಲಿದ್ದಾರೆ. ಮೂರ್ಖ ವಿವರಣೆ ಅದು.  ಸಂಸ್ಕೃತದಲ್ಲಿ ‘ಶಾಕ’ ಎಂಬ ನಪುಂಸಕಲಿಂಗ ಪದಕ್ಕೆ ತರಕಾರಿ, ಕಾಯಿಪಲ್ಯ ಎಂದು ಅರ್ಥ. ‘ಶಾಕಿನೀ’ ಎಂಬ ಸ್ತ್ರೀಲಿಂಗ ಪದಕ್ಕೆ ‘ತರಕಾರಿಯಿಂದ ತುಂಬಿರುವ ಭೂಮಿ, ಕ್ಷೇತ್ರ’ ಎಂಬ ಅರ್ಥ. ‘ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ’ ಎನ್ನುತ್ತಾರೆ ಶ್ರೀ ಶಂಕರಾಚಾರ್ಯರು ಶಿವಮಾನಸಸ್ತೋತ್ರದಲ್ಲಿ, ತಾನು ಮನಸ್ಸಿನಲ್ಲೇ ಶಿವನಿಗೆ ಏನೇನನ್ನೆಲ್ಲ ಅರ್ಪಿಸುತ್ತೇನೆ ಎಂಬ ಪಟ್ಟಿಯಲ್ಲಿ. ಶಾಕಾನಾಮಯುತಂ = ಶಾಕಾನಾಂ + ಅಯುತಂ = ತರಕಾರಿಗಳ ಕೂಟ್ಟು. ‘ಪರಿಪರಿಯ ಬಹು ಭಕ್ಷ್ಯಪಾಕದ| ಪರಿಮಳದ ಶಾಕಾದಿಗಳ ವೊ| ಗ್ಗರಣೆಗಳ ಸೌರಭಕೆ ತಿಳಿದುದು ನಿದ್ದೆ ಪವನಜನ||’ ಎನ್ನುತ್ತಾನೆ ಕುಮಾರವ್ಯಾಸ, ಬಕಾಸುರನಿಗೆ ಕೊಡಲಿಕ್ಕೆಂದು ಮಾಡಿದ ಅಡುಗೆಯ ಪರಿಮಳವು ಮಧ್ಯರಾತ್ರಿಯಲ್ಲೇ ಭೀಮಸೇನನಿಗೆ ಹೇಗೆ ತಲುಪಿತು ಎಂದು ಬಣ್ಣಿಸುವಾಗ.
====
    2. "ಮಹಾಭಾರತದ ಪ್ರತಿಯೊಂದು ಪಾತ್ರಗಳು ಅದರದೇ ಆದ ಮಹತ್ವ, ವಿಚಿತ್ರಗಳನ್ನು ಹೊಂದಿದೆ."
    ಈಗಷ್ಟೇ ಫೇಸ್‍ಬುಕ್‍ನಲ್ಲಿ ಓದಿದ ಒಂದು ಟಿಪ್ಪಣಿಯ ಮೊದಲ ವಾಕ್ಯ ಇದು. ಆಭಾಸಕರವಾಗಿದೆ ಎಂದು ಮೇಲ್ನೋಟಕ್ಕೆ ಅನಿಸುವುದಿಲ್ಲ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ನಾಲ್ಕೂವರೆ ತಪ್ಪುಗಳು ಇವೆ ಈ ವಾಕ್ಯದಲ್ಲಿ!
 
ಅ) ಪ್ರತಿಯೊಂದು ಎಂಬ ಪದದ ಬಳಿಕ ಉಪಯೋಗಿಸುವ ನಾಮಪದವು ಏಕವಚನದಲ್ಲಿ ಇರಬೇಕು. ಹಾಗಾಗಿ, ‘ಪಾತ್ರಗಳು; ಅಲ್ಲ ‘ಪಾತ್ರವು’ ಆಗಬೇಕು.

ಆ) ಪಾತ್ರವು ಅಲ್ಲ, ಪಾತ್ರವೂ ಎಂದಾಗಬೇಕು. (ಪಾತ್ರ ಸಹ, ಪಾತ್ರ ಕೂಡ, ಎಂಬ ಅರ್ಥದಲ್ಲಿ)

ಇ) ‘ಅದರದೇ’ ಎಂದು ಬರೆದರೆ ತಪ್ಪು ಎನ್ನಲಾಗದಾದರೂ ‘ತನ್ನದೇ’ ಎಂದು ಬರೆದರೆ ಒಳ್ಳೆಯದು.

ಈ) ವಿಚಿತ್ರ ಎನ್ನುವುದು ವಿಶೇಷಣಪದ ((adjective). ಅದರ ನಾಮಪದ ರೂಪ (noun form) ಆದ ‘ವೈಚಿತ್ರ್ಯ’ ಬಳಸುವುದು ಸಮಂಜಸ. ಏಕೆಂದರೆ, ‘ವಿಚಿತ್ರ’ ಆಗಿ ಇರಲಿಕ್ಕೆ ಸಾಧ್ಯ, ’ವಿಚಿತ್ರ’ವನ್ನು ಹೊಂದುವುದಕ್ಕೆ ಆಗುವುದಿಲ್ಲ. ಹೊಂದಿದೆ ಎಂಬ ಕ್ರಿಯಾಪದ ಇದೆಯೆಂದ ಮೇಲೆ ‘ವೈಚಿತ್ರ್ಯ’ ಎಂಬ ನಾಮಪದರೂಪವನ್ನು ಬಳಸಬೇಕು. (ಮಹತ್ವ ಎಂಬುದು ಆಗಲೇ ನಾಮಪದರೂಪದಲ್ಲಿದೆ).

ಉ) ಮೇಲೆ ಹೇಳಿದಂತೆ ‘ಪಾತ್ರವೂ’ ಎಂದು ಏಕವಚನಕ್ಕೆ ಬದಲಾಯಿಸಬೇಕಿದೆಯಾದ್ದರಿಂದ ‘ಹೊಂದಿದೆ’ ಕ್ರಿಯಾಪದ ಏಕವಚನದಲ್ಲಿರುವುದು ಸರಿಯಾಗುತ್ತದೆ. ಆದರೆ "ಮಹಾಭಾರತದ ಪಾತ್ರಗಳು ತಮ್ಮವೇ ಆದ ಮಹತ್ವ ವೈಚಿತ್ರ್ಯಗಳನ್ನು..." ಎಂಬ ರೀತಿಯಲ್ಲಿ ವಾಕ್ಯವಿರುತ್ತಿದ್ದರೆ ಕ್ರಿಯಾಪದವು ಬಹುವಚನ ರೂಪದಲ್ಲಿ ’ಹೊಂದಿವೆ’ ಎಂದು ಇರಬೇಕಿತ್ತು. 
     ಟಿಪ್ಪಣಿಯನ್ನು ಬರೆದಾದ ಮೇಲೆ ಒಂದೆರಡು ಬಾರಿ ನಿಧಾನವಾಗಿ ಓದಿಕೊಂಡಿರುತ್ತಿದ್ದರೆ ಬಹುಶಃ ಈ ಐದೂ ಅಂಶಗಳನ್ನು ಸರಿಪಡಿಸಬಹುದಾಗಿತ್ತು. ಅದೇ ಮುಖ್ಯ: ಬರೆದಿದ್ದನ್ನು ಕನಿಷ್ಠ ಮೂರು ಸಲ ಓದಿನೋಡಬೇಕು.

====
3. ಟ ಒತ್ತು ಎಲ್ಲಿ? ಠ ಒತ್ತು ಎಲ್ಲಿ?

ಗೊತ್ತಿದೆಯೆಂದುಕೊಂಡರೂ ಕಣ್ತಪ್ಪಿನಿಂದಾಗುತ್ತದೆ. ಅಲ್ಪಪ್ರಾಣ ಒತ್ತೋಣ್ವಾ ಮಹಾಪ್ರಾಣ ಒತ್ಬೇಕಾ ಎಂದು ಕೆಲವೊಮ್ಮೆ ಕೊನೇ ಕ್ಷಣದ ಸಂದೇಹದಿಂದ ಆಗುತ್ತದೆ. ಆಧುನಿಕ ಗ್ಯಾಡ್ಜೆಟ್‍ಗಳಲ್ಲಿ ಟ ಮತ್ತು ಠ ಅಕ್ಷರಗಳಿಗೆ ಸರಿಯಾದ ಕೀಲಿಗಳಿಲ್ಲದೆಯೂ ತಪ್ಪುಗಳಾಗಬಹುದು. ಆದರೂ ನೆನಪಲ್ಲಿಡಬೇಕಾದ್ದೆಂದರೆ-

ಈ ಕೆಳಗಿನ ಪದಗಳಲ್ಲಿ ಟ ಒತ್ತು ಬರುತ್ತದೆ:

ಅನಿಷ್ಟ (ಅಶುಭ), ಚೇಷ್ಟೆ, ತುಷ್ಟಿ (ತೃಪ್ತಿ), ದೃಷ್ಟಿ, ನಿರ್ದಿಷ್ಟ, ಮುಷ್ಟಿ, ಮೃಷ್ಟಾನ್ನ, ಪುಷ್ಟಿ/ಪೌಷ್ಟಿಕ(ಪೋಷಣೆ), ವ್ಯಷ್ಟಿ (ಪ್ರತ್ಯೇಕತೆ), ವೃಷ್ಟಿ (ಮಳೆ), ಷಷ್ಟ್ಯಬ್ದಿ (ಅರವತ್ತನೆಯ ವರ್ಷ), ಸಮಷ್ಟಿ(ಸಮಗ್ರತೆ), ಸೃಷ್ಟಿ.
 ಈ ಕೆಳಗಿನ ಪದಗಳಲ್ಲಿ ಠ ಒತ್ತು ಬರುತ್ತದೆ.
ಅಂಗುಷ್ಠ (ಹೆಬ್ಬೆರಳು), ಉತ್ತಿಷ್ಠ (ಎದ್ದೇಳು), ಓಷ್ಠ (ತುಟಿ), ಕನಿಷ್ಠ (ಎಲ್ಲಕ್ಕಿಂತ ಚಿಕ್ಕ), ಕಾಷ್ಠ (ಕಟ್ಟಿಗೆ), ಕುಷ್ಠ (ತೊನ್ನು), ಗರಿಷ್ಠ (ಎಲ್ಲಕ್ಕಿಂತ ದೊಡ್ಡ), ಜ್ಯೇಷ್ಠ (ಮಿಕ್ಕೆಲ್ಲರಿಗಿಂತ ಹಿರಿಯ),  ಪ್ರತಿಷ್ಠೆ (ಗೌರವ), ಪೃಷ್ಠ (ಮೈಯ ಹಿಂಭಾಗ), ಯುಧಿಷ್ಠಿರ, ವಸಿಷ್ಠ, ಶ್ರೇಷ್ಠ, ಷಷ್ಠೀ (ಆರನೆಯ ತಿಥಿ)
                                ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
                    ಮುಂದುವರಿಯುವುದು........
              FEEDBACK: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries