HEALTH TIPS

ಸಮರಸ ಶಬ್ದಾಂತರಂಗ ಸೌರಭ-ಭಾಗ-09-ಬರಹ:ಶ್ರೀವತ್ಸ ಜೋಶಿ. ವಾಶಿಂಗ್ಟನ್ ಡಿ.ಸಿ.

           ಇಂದಿನ ಟಿಪ್ಪಣಿ:
   1.  ಕೋಟ್ಯಧಿಪತಿ ಸರಿ, ಕೋಟ್ಯಾಧಿಪತಿ ತಪ್ಪು.
    1998ರಲ್ಲಿ ಬ್ರಿಟನ್‍ನಲ್ಲಿ ಹುಟ್ಟಿ, ಅಲ್ಲಿಂದ 1999ರಲ್ಲಿ ಅಮೆರಿಕಕ್ಕೆ ಬಂದ `Who Wants to Be a Millionaire?' ಟೆಲಿವಿಷನ್ ಗೇಮ್ ಷೋ, ಆಮೇಲೆ 2000ದಲ್ಲಿ ಭಾರತದಲ್ಲಿ ಹಿಂದಿಯಲ್ಲಿ ‘ಕೌನ್ ಬನೇಗಾ ಕರೋಡ್‍ಪತಿ?’ ಆಗಿ, 2012ರಲ್ಲಿ ಕನ್ನಡದಲ್ಲಿ ‘ಕೋಟ್ಯಾಧಿಪತಿ’ ಎಂದು ಅವತಾರವೆತ್ತಿತು. ಸ್ಪರ್ಧಿಗಳಿಂದ ಸರಿಯುತ್ತರಗಳನ್ನು ಬಯಸುವ ಈ ಗೇಮ್ ಷೋ ತನ್ನ ಹೆಸರಿನಲ್ಲಿ ಮಾತ್ರ ಕಣ್ಣಿಗೆ ರಾಚುವಂಥ ತಪ್ಪನ್ನೇ ಹೊಂದಿತ್ತು! ಅತ್ಯವಸರದಲ್ಲಿ, ಅತ್ಯಂತ ಉತ್ಸಾಹದಿಂದ ಯಾರೋ ಪುಣ್ಯಾತ್ಮರು  Millionaire ಅಥವಾ ಕರೋಡ್‍ಪತಿಗೆ ಕನ್ನಡದಲ್ಲಿ ‘ಕೋಟ್ಯಾಧಿಪತಿ’ ಸರಿಹೊಂದುತ್ತದೆ ಎಂದು ಇತ್ಯರ್ಥಗೊಳಿಸಿರಬೇಕು. ಯಾರ ಪ್ರೀತ್ಯರ್ಥ ಇದೊಂದು ಸ್ತುತ್ಯರ್ಹ ಕಾರ್ಯವೆಂದುಕೊಂಡು ಹಾಗೆ ಮಾಡಿದರೋ ಗೊತ್ತಿಲ್ಲ. ಅದು ಕೋಟಿ + ಅಧಿಪತಿ = ಕೋಟ್ಯಧಿಪತಿ ಎಂದಾಗಬೇಕು. ಯಣ್ ಸಂಧಿಯಿಂದಾದ ಪದ. ಅತ್ಯವಸರ (ಅತಿ+ಅವಸರ), ಅತ್ಯಂತ (ಅತಿ+ಅಂತ), ಇತ್ಯರ್ಥ (ಇತಿ+ಅರ್ಥ), ಪ್ರೀತ್ಯರ್ಥ (ಪ್ರೀತಿ+ಅರ್ಥ), ಸ್ತುತ್ಯರ್ಹ (ಸ್ತುತಿ+ಅರ್ಹ) ಮುಂತಾದುವೆಲ್ಲವೂ ಹಾಗೆಯೇ. ಜಾತ್ಯತೀತ (ಜಾತಿ+ಅತೀತ)ವೂ ಹಾಗೆಯೇ. ಆದರೆ ಜಾತ್ಯತೀತ ಎಂದು ಹೇಳುವುದೂ/ಬರೆಯುವುದೂ ಇಲ್ಲ, ಹಾಗೆ ಇರುವುದೂ ಇಲ್ಲ ಅಂತಾಗಿದೆ.
     ಈ ಸೀಸನ್‍ನಿಂದ ಕಾರ್ಯಕ್ರಮದ ಹೆಸರನ್ನು ‘ಕೋಟ್ಯಧಿಪತಿ’ ಎಂದು ಸರಿಪಡಿಸಲಾಗಿದೆ. ನಿರ್ವಾಹಕರೂ ಬದಲಾಗಿದ್ದಾರೆ. ಕೆಲವು ಜನರು ‘ಕೋಟ್ಯಾಧಿಪತಿ’ಗೆ ಎಷ್ಟು ಒಗ್ಗಿಹೋಗಿದ್ದಾರೆಂದರೆ ’ಕೋಟ್ಯಧಿಪತಿ’ ಎಂದು ಕಾರ್ಯಕ್ರಮದ ಹೆಸರನ್ನು ಬದಲಾಯಿಸಿದ್ದು ಕನ್ನಡಕ್ಕೆ ಮಾಡಿದ ದ್ರೋಹ ಅಂತ ಹುಯಿಲೆಬ್ಬಿಸಿದ್ದಾರೆ! ಸಾವಿರ ಸರ್ತಿ ಹೇಳಿದರೆ ಸುಳ್ಳು ಸತ್ಯವಾಗುತ್ತದೆ ಅಂತೊಂದು ಗಾದೆ. ಕೋಟಿ ಸರ್ತಿ ಹೇಳಿದರೆ ಮತ್ತೇನಾಗುತ್ತದೆ?
   ====
2. "ಬೆಂಗಳೂರು ಮತ್ತು ಸುತ್ತಮುತ್ತ ಭಾಗಶಃ ಮೋಡ ಕವಿದ ವಾತಾವರಣ ಇರುವುದು."
    ಹವಾಮಾನ ಮುನ್ಸೂಚನೆಯ ನಿತ್ಯಪಾಠದ ಈ ವಾಕ್ಯದಲ್ಲಿ ‘ಭಾಗಶಃ’ ಎಂಬ ಪದವನ್ನು ಗಮನಿಸಿ. ಈ ಪದದ ಅರ್ಥ ಇಂಗ್ಲಿಷ್‍ನಲ್ಲಾದರೆ ಠಿಚಿಡಿಣಟಥಿ ಎಂದು. ‘ಸಂಪೂರ್ಣವಾಗಿ ಅಲ್ಲ’ ಎಂಬಂತೆ. ’ಶಃ’ ಎಂದು ಸಂಸ್ಕೃತದಲ್ಲಿ ಒಂದು ಪ್ರತ್ಯಯ. ಅದನ್ನು ರೀತಿವಾಚಕ ಪ್ರತ್ಯಯ ಎನ್ನುತ್ತಾರೆ. ಆ ರೀತಿ, ಈ ರೀತಿ ಎಂದು ನಾವು ಯಾವುದನ್ನಾದರೂ ವಿವರಿಸುತ್ತೇವಲ್ಲ, ಅಂಥ ಸಂದರ್ಭದಲ್ಲಿ ’ಶಃ’ ಪ್ರತ್ಯಯ ಬಳಸುತ್ತೇವೆ. ವಿದ್ಯೆ ಮತ್ತು ಸಂಪತ್ತನ್ನು ಹೇಗೆ ಸಂಪಾದಿಸಬೇಕು ಎಂದು ಹೇಳುವ ಸುಭಾಷಿತದಲ್ಲಿ ಕ್ಷಣಶಃ, ಕಣಶಃ ಎಂಬ ಪದಗಳು ಬರುತ್ತವೆ. ["ಕ್ಷಣಶಃ ಕಣಶಶ್ಚೈವ ವಿದ್ಯಾಮಥರ್ಂ ಚ ಸಾಧಯೇತ್| ಕ್ಷಣ ತ್ಯಾಗೇ ಕುತೋ ವಿದ್ಯಾ ಕಣ ತ್ಯಾಗೇ ಕುತೋ ಧನಮ್||" - ವಿದ್ಯೆಯನ್ನು ಪ್ರತಿಕ್ಷಣದ ರೀತಿಯಲ್ಲಿ, ಸಂಪತ್ತನ್ನು ಕಣಕಣದ ರೀತಿಯಲ್ಲಿ ಸಂಗ್ರಹಿಸುತ್ತ ಹೋಗಬೇಕು. ಒಮ್ಮಿಂದೊಮ್ಮೆಲೇ ಅವು ನಮಗೆ ದೊಡ್ಡ ಪ್ರಮಾಣದಲ್ಲಿ ಸಿಗುತ್ತವೆಂದು ಅಪೇಕ್ಷಿಸಬಾರದು. ಸಿಕ್ಕಿದ ಅಲ್ಪವನ್ನು ‘ಇಷ್ಟೇನಾ?’ ಎಂದು ಉಪೇಕ್ಷಿಸಬಾರದು.]
      ಭಾಗಶಃ (partly), ಬಹುಶಃ (mostly ), ಕ್ರಮಶಃ (orderly), ಅಕ್ಷರಶಃ (literally) ಮುಂತಾದ ಎಲ್ಲ ಪದಗಳೂ ‘ಶಃ’ ರೀತಿವಾಚಕ ಪ್ರತ್ಯಯದಿಂದಾದವು. ಆದ್ದರಿಂದ ವಿಸರ್ಗದೊಂದಿಗಿನ ಡೊಂಕು ಶ ಅಕ್ಷರವನ್ನೇ ("ಶಃ") ಬಳಸಬೇಕು. ಭಾಗಷಹ, ಬಹುಷಃ, ಅಕ್ಷರಶಹ, ಅಕ್ಷರಸಹ ಅಂತೆಲ್ಲ ಬರೆದರೆ ತಪ್ಪು.
====
 3. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಕೆಲವು ಪದಗಳ ಸರಿ ರೂಪ :
ಅ) ಕೂಲಂಕಷ (ಸಮಗ್ರವಾದ) ಸರಿ. ಕೂಲಂಕುಶ, ಕೂಲಂಕುಷ, ಕೂಲಂಕಶ ಇವು ಮೂರೂ ತಪ್ಪು.

ಆ) ವಿನಾ (ಹೊರತು) ಸರಿ. ವಿನಹ, ವಿನಹಾ, ವಿನಃ ಇವು ಮೂರೂ ತಪ್ಪು.

ಇ) ನಾಗರಿಕ (ಪಟ್ಟಣಿಗ, ಸುಸಂಸ್ಕೃತ) ಸರಿ. ನಾಗರೀಕ ತಪ್ಪು.

ಈ) ಕೌಶಲ ಅಥವಾ ಕುಶಲತೆ ಸರಿ. ಕೌಶಲ್ಯ ತಪ್ಪು.

ಉ) ಕಾತರ (ಕಳವಳ/ಉತ್ಸುಕತೆ/ಆಸಕ್ತಿ ಇಂದ ಕೂಡಿದ) ಸರಿ. ಕಾತುರ ತಪ್ಪು. ‘ಆತುರ’ (ಸರಿ) ಇದ್ದಂತೆ ‘ಕಾತುರ’ ಎಂದುಕೊಳ್ಳುವುದರಿಂದಾದ ತಪ್ಪು ಇದು.
                                     ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
                  ಮುಂದುವರಿಯುವುದು...........
                         FEEDBACK: samarasasudhi@gmail.com

        

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries