HEALTH TIPS

ಕೊಂಡೆವೂರಲ್ಲಿ ಸಂಪನ್ನಗೊಂಡ ಚುಟುಕು ಸಂಭ್ರಮ-2019: ಧಾರ್ಮಿಕತೆ ಮತ್ತು ಸಾಹಿತ್ಯದ ಸಮ್ಮಿಲದಲ್ಲಿ ಬದುಕು ಅಡಗಿದೆ- ಕೊಂಡೆವೂರು ಶ್ರೀ


       ಉಪ್ಪಳ: ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶ್ರದ್ಧೆಯಿರಿಸಿ ಸಾಧನೆಯನ್ನು ಮಾಡುತ್ತಿಡುವ ಅನೇಕ ಸಾಧಕರಿದ್ದಾರೆ. ಕೆಲವರು ಸಾಹಿತ್ಯದೆಡೆ ಒಲವು ತೋರಿದರೆ ಇನ್ನು ಹಲವರು ಧಾರ್ಮಿಕತೆಯಲ್ಲಿ, ಕಲೆಗಳಲ್ಲಿ ಒಲವು ತೋರಿಸುತ್ತಿದ್ದಾರೆ. ಅವರವರ ಅಭಿರುಚಿಗಳಿಗೆ ತಕ್ಕಂತೆ ಅನುಭವಗಳನ್ನು ಸಮಾಜಕ್ಕೆ  ಉಣಬಡಿಸುತ್ತಾರೆ. ಆದರೆ ಧಾರ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡಲ್ಲಿ ಸಾಹಿತ್ಯ, ಕಲೆ ಹೀಗೆ ಎಲ್ಲದರ ಪರಿಚಯವೂ ಸಾಧ್ಯ ಎಂದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
        ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು  ಮಂಗಳೂರು ಹಾಗೂ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಇವುಗಳ ಜಂಟಿ ಆಶ್ರಯದಲ್ಲಿ ಶನಿವಾರ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರಗಿದ  ಚುಟುಕು ಸಾಹಿತ್ಯ ಸಂಭ್ರಮ-2019 ಕಾರ್ಯಕ್ರಮ ದೀಪ ಬೆಳಗಿಸಿ ಚಾಲನೆ ನೀಡಿ ಆಶೀರ್ವಚನ ನೀಡಿದರು. 
      ಸಾಹಿತ್ಯದ ಒಲವು ಮುಂದಿನ ದಿನಗಳಲ್ಲಿ ಯುವ ಜನಾಂಗದಲ್ಲಿ ಅದರಲ್ಲೂ ವಿದ್ಯಾರ್ಥಿಗಳಲ್ಲಿ ಮೂಡುವಂತೆ ಶ್ರಮ ವಹಿಸುವ ಅನಿವಾರ್ಯತೆಯಿದೆ . ಅವುಗಳ ಮೂಲಕ ಜನರ ಮನೆ ಮನಸ್ಸುಗಳು ಶುದ್ಧೀಕರಣಗೊಳ್ಳುವ ಪ್ರಯತ್ನ ಸಾಧ್ಯವಾಗುವುದು ಎಂದು ಅವರು ತಿಳಿಸಿದರು. ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಚಟುವಟಿಕೆಗಳು ಬಲ ನೀಡುತ್ತದೆ ಎಂದ ಶ್ರೀಗಳು ತಿಳಿಸಿದರು.
      ಹಿರಿಯ ಕವಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ ಭಟ್ ಎಡನೀರು ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಚುಟುಕು  ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಇರಾ ನೇಮು ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಾಹಿತ್ಯದಲ್ಲಿ ಸಂತೋಷ, ಸುಖ ದುಃಖ ಎಲ್ಲವೂ ಅಡಗಿದೆ. ಮಾತ್ರವಲ್ಲದೆ ಚುಟುಕುಗಳ ಮೂಲಕ ಬದುಕಿನ ಸಾರವನ್ನೇ ಹೇಳುವ ತಾಕತ್ತನ್ನು ಈ ಸಾಹಿತ್ಯ ಹೊಂದಿರುವುದು ವಿಶೇಷ. ಚುಟುಕು ಅಮೃತದ ತೊಟ್ಟಿನಂತೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.
     ದ.ಕ ಜಿಲ್ಲಾ ಚುಟುಕು  ಸಾಹಿತ್ಯ ಪರಿಷತ್ತು ಅಧ್ಯಕ್ಷ ತಾರಾನಾಥ ಬೋಳಾರು ಭಾಗವಹಿಸಿ, ವೀರಯೋಧರ ಕುರಿತು ಹನಿಗಗವನಗಳನ್ನು ವಾಚಿಸಿದರು. ಚುಟುಕು ಕವಿ ಹ.ಸು.ಒಡ್ಡಂಬೆಟ್ಟು, ಸವಿ ಹೃದಯ ಕವಿಮಿತ್ರರು ವೇದಿಕೆ ಪೆರ್ಲ ಇದರ ಸಂಚಾಲಕ ಸುಭಾಷ್ ಪೆರ್ಲ ಉಪಸ್ಥಿತರಿದ್ದರು. ಈ ಸಂದರ್ಭ ನಾಡಿನ ಹಿರಿಯ ಕವಿಗಳಾದ ಹರೀಶ್ ಪೆರ್ಲ, ರಾಧಾಕೃಷ್ಣ.ಕೆ.ಉಳಿಯತ್ತಡ್ಕ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಅಪರ್ಣ ಆಳ್ವ ಒಡ್ಡಂಬೆಟ್ಟು , ನೃತ್ಯ ಕಲಾವಿದೆ ಅಮೃತಸಿಂಧು ಇವರನ್ನು ಗೌರವಿಸಲಾಯಿತು.
     ಬಳಿಕ ನಡೆದ ಪುಸ್ತಕ ವಿಮರ್ಶೆಯಲ್ಲಿ   ಡಾ.ಹರಿಕೃಷ್ಣ ಭರಣ್ಯ ಹಾಗೂ ಡಾ.ಶ್ರೀಕೃಷ್ಣ ಭಟ್ ಅರ್ತಿಕತೆ ಜಂಟಿಯಾಗಿ ಬರೆದು ಸಂಪಾದಿಸಿರುವ ತುಪ್ಪಶನ ಉಂಬಲೆ ಎಂಬ ಹವ್ಯಕ ಜನಪದ ಗೀತೆಗಳ ಸಂಗ್ರಹ ಮತ್ತು ಅಧ್ಯಯನ ಗ್ರಂಥವನ್ನು  ಕಾಸರಗೋಡು  ಸರಕಾರಿ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ರವಿಶಂಕರ ಜಿ.ಕೆ ಕೆದಂಬಾಡಿ ಹಾಗೂ ಶ್ರೀಧರ ಏತಡ್ಕ ಅವರ ತಿರುವು ಎಂಬ ಕಥಾಸಂಕಲನವನ್ನು ಚೇತನಾ ಕುಂಬಳೆ ಇವರು ವಿಮರ್ಶಿಸಿದರು. ಬಳಿಕ ಚುಟುಕು ಕವಿಗೋಷ್ಠಿ ನಡೆಯಿತು. ಸಾಹಿತಿ ಡಾ.ಸುರೇಶ್ ನೆಗಲಗುಳಿ ಉದ್ಘಾಟಿಸಿದರು.  ಗೋಷ್ಠಿಯಲ್ಲಿ 15ಕ್ಕಿಂತಲೂ ಹೆಚ್ಚು ಕವಿಗಳು ಚುಟುಕು ಕವಿತೆಗಳನ್ನು ವಾಚಿಸಿದರು. ಜಯ ಮಣಿಯಂಪಾರೆ ಸಹಕರಿಸಿದರು.
     ಎನ್.ಸುಬ್ರಾಯ ಭಟ್ ಸ್ವಾಗತಿಸಿ,  ಪುರುಷೋತ್ತಮ ಭಟ್ ಕೆ.ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.  ವಸಂತ ಬಾರಡ್ಕ ಪ್ರಾರ್ಥಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries