ಇಂದಿನ ಟಿಪ್ಪಣಿ:
1. ರೋಗಕ್ಕೆ ‘ಮನೋ’ ಆದರೆ ರಂಜನೆಗೂ ಅದೇ!
ಮನೋರೋಗ ಎಂದು ಬರೆಯುವಾಗ ಸರಿಯಾಗಿಯೇ ‘ಮನೋ’ ಎಂದು ಬರೆಯುವ ನಾವು, ಮನೋರಂಜನೆಯನ್ನು ಮಾತ್ರ ತಪ್ಪಾಗಿ ಮನರಂಜನೆ ಎಂದು ಬರೆಯುತ್ತೇವೆ! ಮನಸ್ಸಿಗೆ ಸಂಬಂಧಿಸಿದ ಎಂಬ ಅರ್ಥದಲ್ಲಿ ’ಮನೋ’ ಪ್ರಿಫಿಕ್ಸ್ ಇರುವ ಈ ಪದಗಳನ್ನೆಲ್ಲ ಗಮನಿಸಿ: ಮನೋಭೀಷ್ಟ, ಮನೋವಿಕಾರ, ಮನೋವಿಕಾಸ, ಮನೋವೈಕಲ್ಯ, ಮನೋಹರ... ಇತ್ಯಾದಿ. ಶಂಕರಾಚಾರ್ಯವಿರಚಿತ ನಿರ್ವಾಣ ಷಡ್ಕಮ್ ಸ್ತೋತ್ರದ ಆರಂಭವನ್ನು ಗಮನಿಸಿ: "ಮನೋಬುದ್ಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ|" ಈ ಎಲ್ಲ ಕಡೆಗಳಲ್ಲೂ ’ಮನೋ’ ಅಂತಲೇ ಇದೆ. ಅದೇ ಸರಿ. ಮನಃ ಶಬ್ದವು ‘ವಿಸರ್ಗಕ್ಕೆ ಸಕಾರ’ ಎಂಬ ಸೂತ್ರದಂತೆ ಮನಸ್ ಆಗುತ್ತದೆ. ‘ಸಕಾರಕ್ಕೆ ಉಕಾರ’ ಎಂಬ ಇನ್ನೊಂದು ಸೂತ್ರದಂತೆ ಮನ+ಉ ಆಗುತ್ತದೆ. ಅಲ್ಲಿ ಗುಣಸಂಧಿಯಿಂದಾಗಿ "ಮನೋ" ಆಗುತ್ತದೆ. ಅಂದಮೇಲೆ ಮನರಂಜನೆ ಎಂದು ಬರೆಯುವುದು ಅಥವಾ ಉಚ್ಚರಿಸುವುದು ತಪ್ಪು. ಕನ್ನಡ ಪತ್ರಿಕೆಗಳಲ್ಲಿ ಮನರಂಜನೆ ಮತ್ತು ಮನೋರಂಜನೆ ಎರಡೂ ಪದಗಳು ಬಳಕೆಯಾಗುತ್ತಿವೆ. ಒಂದೇ ಪತ್ರಿಕೆಯ ಒಂದು ಸುದ್ದಿ/ಲೇಖನದಲ್ಲಿ ಮನರಂಜನೆ ಅಂತಲೂ, ಇನ್ನೊಂದು ಸುದ್ದಿ/ಲೇಖನದಲ್ಲಿ ಮನೋರಂಜನೆ ಅಂತಲೂ ಬಳಕೆಯಾಗುವ ಉದಾಹರಣೆಗಳು ಸಿಗುತ್ತವೆ!
====
2. "ಹೊರತಾಗಿಯೂ" ಅಲ್ಲ, "ನಡುವೆಯೂ " ಆಗಬೇಕು.
"ಪೊಲೀಸ್ ಕಾವಲಿನ ಹೊರತಾಗಿಯೂ ನಗರದಲ್ಲಿ ಹೆಚ್ಚಿರುವ ಕಳ್ಳತನ"
"ಗಾಯದ ಹೊರತಾಗಿಯೂ ಚಿತ್ರೀಕರಣಕ್ಕೆ ಮರಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್"
"ಶಾ ಹೇಳಿಕೆಯ ಹೊರತಾಗಿಯೂ ರೆಡ್ಡಿಯಿಂದ ಬಿಜೆಪಿ ಪರ ಪ್ರಚಾರ"
"ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ ಭಾರತ ತಂಡಕ್ಕೆ ಸೋಲು"
"ನ್ಯಾಯಾಲಯ ಆದೇಶದ ಹೊರತಾಗಿಯೂ ಮುಷ್ಕರ ಮುಂದುವರಿಕೆ"
ಕನ್ನಡ ದಿನಪತ್ರಿಕೆಗಳಿಂದ ಎತ್ತಿಕೊಂಡ ಈ ಉದಾಹರಣೆಗಳನ್ನು ಗಮನಿಸಿ. "ಪೊಲೀಸ್ ಕಾವಲಿನ ಹೊರತಾಗಿಯೂ" ಅಂದರೆ ಪೊಲೀಸ್ ಕಾವಲು ಇಲ್ಲದಿದ್ದಾಗ್ಯೂ ಎಂದರ್ಥ. ಆಗ ಕಳ್ಳತನ ಹೆಚ್ಚಾಗೋದೇ ತಾನೆ? ಅದು ಸುದ್ದಿ ಎನಿಸದು. ಪೊಲೀಸ್ ಕಾವಲಿನ ನಡುವೆಯೇ ಕಳ್ಳತನ ಸಂಭವಿಸಿದರೆ ಅದು ಸುದ್ದಿ. ಗಾಯದ ಹೊರತಾಗಿಯೂ ಅಂದರೆ ಗಾಯ ಇಲ್ಲದಿದ್ದಾಗ. ಆಗ ಚಿತ್ರೀಕರಣಕ್ಕೆ ಬರಲಿಕ್ಕೆ ದರ್ಶನ್‍ಗೇನೂ ಧಾಡಿ ಇಲ್ಲ. ಗಾಯ ಇದ್ದಾಗಲೂ ಚಿತ್ರೀಕರಣಕ್ಕೆ ಬಂದನೆಂದರೆ ದರ್ಶನ್‍ನನ್ನು ಮೆಚ್ಚಬೇಕು. ಶಾ ಹೇಳಿಕೆ ಇಲ್ಲದಿದ್ದಾಗ ರೆಡ್ಡಿ ಪ್ರಚಾರ ಮಾಡಿರಬಹುದು. ಆದರೆ ಶಾ ಹೇಳಿಕೆ ಇರುವಾಗಲೂ ರೆಡ್ಡಿ ಬಿಜೆಪಿ ಪರ ಪ್ರಚಾರ ಮಾಡಿದರೆ ಅದು ಸುದ್ದಿ. ಅಂತೆಯೇ ‘ವಿರಾಟ್ ಕೋಹ್ಲಿಯ ಶತಕದ ನಡುವೆಯೂ ಭಾರತ ತಂಡಕ್ಕೆ ಸೋಲು’ ಮತ್ತು, ‘ನ್ಯಾಯಾಲಯ ಆದೇಶದ ನಡುವೆಯೂ ಮುಷ್ಕರ ಮುಂದುವರಿಕೆ’ ಎಂದಾಗಬೇಕು. ಈ ಎಲ್ಲ ಸಂದರ್ಭಗಳಲ್ಲೂ ಪತ್ರಿಕೆಗಳು ’ಹೊರತಾಗಿಯೂ’ ಎಂಬ ತಪ್ಪು ಪದವನ್ನು ಬಳಸಿ ಆಭಾಸ ಮಾಡುತ್ತಿವೆ. ಇಂಗ್ಲಿಷ್‍ನ "In spite of" ಅಥವಾ "despite"ಗೆ ಯಾರೋ ಕೆಟ್ಟದಾಗಿ ಮಾಡಿದ ಕನ್ನಡ ಅನುವಾದ "ಹೊರತಾಗಿಯೂ" ಕನ್ನಡ ಸುದ್ದಿಮನೆಗಳಲ್ಲಿ ಈಗ ಪ್ರತಿಯೊಬ್ಬ ಸದಸ್ಯನೂ ಅತ್ಯದ್ಭುತ ಪ್ರಕಾಂಡ ಭಾಷಾಪಂಡಿತ ಆಗಿರುವುದರ ಹೊರತಾಗಿಯೂ ಉಳಿದುಕೊಂಡಿದೆ!
====
3. ಪದೇಪದೇ ತಪ್ಪಾಗಿ ಕಾಣಿಸಿಕೊಳ್ಳುವ ಕೆಲವು ಪದಗಳ ಸರಿ ರೂಪ :
ಅ) ’ಪ್ರಶಸ್ತಿ ಪ್ರದಾನ’ (ಪ್ರಶಸ್ತಿಯನ್ನು ಕೊಡುವುದು) ಸರಿ. ‘ಪ್ರಶಸ್ತಿ ಪ್ರಧಾನ’ ತಪ್ಪು
ಆ) ‘ಅಭಿಧಾನ’ (ಬಿರುದು) ಸರಿ. ‘ಅಭಿದಾನ’ ತಪ್ಪು. [ ‘ಇತ್ತಬಾರೈ ಕುಳ್ಳಿರೆತ್ತಣ| ದೆತ್ತ ಬರವಾರಟ್ಟಿದರು ನೀ| ವೆತ್ತಣವರೇನೆಂದು ನಿಮ್ಮಭಿಧಾನವೇನಹುದು’ - ಕುಮಾರವ್ಯಾಸ.]
ಇ) ‘ಐಕಮತ್ಯ’ (ಒಗ್ಗಟ್ಟು) ಸರಿ. ಐಕ್ಯಮತ ಅಥವಾ ಐಕ್ಯಮತ್ಯ ತಪ್ಪು
ಈ) ವಿಶದಪಡಿಸು (ವಿವರಣೆ ಕೊಡು) ಸರಿ. ವಿಷದಪಡಿಸು ತಪ್ಪು. ಆದರೆ, ವಿಷಾದ (ದುಃಖ) ಬರೆಯುವಾಗ ಪಟ್ಟೆ ಷ ಇರುವುದು ಸರಿ.
ಉ) ಸ್ತಬ್ಧಚಿತ್ರ (tableau) ಸರಿ. ಸ್ಥಬ್ಧಚಿತ್ರ ತಪ್ಪು. ಹಾಗೆಯೇ, ಸ್ತಂಭ (ಕಂಬ) ಸರಿ, ಸ್ಥಂಭ ತಪ್ಪು.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
ಮುಂದುವರಿಯುವುದು.........



