ಅಪೋಲೊ-11 ಗಗನನೌಕೆಯು ಮೂವರು ಮನುಷ್ಯರನ್ನು ಹೊತ್ತುಕೊಂಡು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚಾರಿತ್ರಿಕ ಘಟನೆಗೆ ಈ ವಾರ 50 ವರ್ಷಗಳಾಗುತ್ತವೆ. ಇದರ ಸಂಭ್ರಮಾಚರಣೆಗಳು ಅಮೆರಿಕದಾದ್ಯಂತ ಆಗಲೇ ಆರಂಭವಾಗಿವೆ. ಇಲ್ಲಿ ವಾಷಿಂಗ್ಟನ್‍ನಲ್ಲಿ ನಮ್ಮ ಮನೆಗೆ ಹತ್ತಿರದಲ್ಲೇ ಇರುವ ‘ಏರ್ ಏಂಡ್ ಸ್ಪೇಸ್ ಮ್ಯೂಸಿಯಂ’ನಲ್ಲಿ, ಚಂದ್ರನ ಮೇಲೆ ಇಳಿದಾಗ ನೀಲ್ ಆರ್ಮ್‍ಸ್ಟ್ರಾಂಗ್ ಧರಿಸಿದ್ದ ಸ್ಪೇಸ್ ಸೂಟ್‍ನ ಪ್ರದರ್ಶನವೂ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಟಿವಿಯಲ್ಲಿ ನ್ಯಾಷನಲ್ ಜಿಯೊಗ್ರಫಿಕ್, ಡಿಸ್ಕವರಿ, ಹಿಸ್ಟರಿ ಚಾನೆಲ್, ಸ್ಮಿತ್‍ಸೋನಿಯನ್, ಪಿಬಿಎಸ್ ಚಾನೆಲ್‍ಗಳಲ್ಲೆಲ್ಲ ವಾರವಿಡೀ ತತ್ಸಂಬಂಧಿ ವಿಶೇಷಗಳೇ ಪ್ರಸಾರವಾಗುತ್ತಿವೆ. ಐವತ್ತು ವರ್ಷಗಳ ಹಿಂದೆ ಈಗಿನಂತೆ ಇಪ್ಪತ್ತನಾಲ್ಕು ಗಂಟೆಗಳೂ ಅರಚುವ ಹಾಗೂ ಸದಾ ಉದ್ವೇಗದಲ್ಲೇ ಇರುವ ಸುದ್ದಿವಾಹಿನಿಗಳಿಲ್ಲದಿದ್ದಾಗ, ಶ್ರೀಸಾಮಾನ್ಯನ ಕೈಯಲ್ಲಿ ಸ್ಮಾರ್ಟ್‍ಫೋನ್ ಮತ್ತು ಸೋಶಿಯಲ್ ಮೀಡಿಯಾದ ಕಲ್ಪನೆಯೂ ಇಲ್ಲದಿದ್ದಾಗ, ಬಹುಶಃ ವಿ ಜ್ಞಾ ನ-ತಂತ್ರ ಜ್ಞಾ ನಗಳ ಈ ಮಹತ್ಸಾಧನೆಯು ಸುದ್ದಿಯಾದ ರೀತಿಯು ಸೀಮಿತ ಮಟ್ಟದಲ್ಲೇ ಇತ್ತು. ಅಮೆರಿಕದ ಪ್ರಮುಖ ದಿನಪತ್ರಿಕೆಗಳ 21 ಜುಲೈ 1969ರ ಸಂಚಿಕೆಯ ಮುಖಪುಟ ಹೇಗಿತ್ತೆಂದು ಇಲ್ಲಿನ ‘ನ್ಯೂಸಿಯಂ’ ಸುದ್ದಿಸಂಗ್ರಹಾಲಯದಲ್ಲಿ ತೋರಿಸಿದ್ದಿದೆ. ಆಗಿನ ರಾಷ್ಟ್ರಾಧ್ಯಕ್ಷ ರಿಚರ್ಡ್ ನಿಕ್ಸನ್‍ನ ಭಾಷಣ, ನಾಸಾ ವಿ ಜ್ಞಾ ನಿಗಳಿಂದ ವಿಧವಿಧ ವ್ಯಾಖ್ಯಾನಗಳು, ಭೂಮಿಗೆ ಮರಳಿದ ಮೇಲೆ ನೀಲ್ ಆರ್ಮ್‍ಸ್ಟ್ರಾಂಗ್, ಎಡ್ವಿನ್ ಆಲ್ಡ್ರಿನ್, ಮತ್ತು ಮೈಕೇಲ್ ಕಾಲಿನ್ಸ್ ತಂತಮ್ಮ ಅನುಭವಗಳನ್ನು ಹೇಳಿದ್ದು ಎಲ್ಲವೂ ದಾಖಲಾಗಿವೆ. ಇವೆಲ್ಲ ಮಹತ್ತ್ವದ್ದೇ. ಆದರೆ ಯಾವುದೇ ದೊಡ್ಡ ಘಟನೆ ನಡೆದಾಗ ಅದಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಮುಖ ವರದಿಗಳ ಜತೆಜತೆಗೇ ಸೈಡ್-ಬಾರ್‍ನಲ್ಲಿ ಅಥವಾ ಬಾಕ್ಸ್ ಐಟಂ ಆಗಿ ಚಿಕ್ಕಚಿಕ್ಕ ಸ್ವಾರಸ್ಯಗಳು ಮಿಂಚುಮಿಣುಕುಗಳು ಪ್ರಕಟವಾಗುತ್ತವೆ ನೋಡಿ, ಅವೇ ಹೆಚ್ಚು ರಸವತ್ತಾಗಿ ರುಚಿಕರವಾಗಿರುವುವು. ಅವೇ ಹೆಚ್ಚು ಕಾಲ ಜನಮಾನಸದಲ್ಲಿ ಉಳಿಯುವುವು. ಚಂದ್ರಯಾನಕ್ಕೆ ಸಂಬಂಧಿಸಿದಂತೆಯೂ ಅಂತಹ ‘ತಿಳಿ’ಗಾಳುಗಳು ಬೇಕಾದಷ್ಟು ಇವೆ. ತುಷಾರ ಮಾಸಪತ್ರಿಕೆಯಲ್ಲಿ ರಾಶಿ ಅವರು ಬರೆಯುತ್ತಿದ್ದ ಚೂಟಿ ಅಂಕಣದ ಶೀರ್ಷಿಕೆಯನ್ನೇ ಕಡ ತೆಗೆದುಕೊಂಡು ಹೇಳುವುದಾದರೆ ಅವೆಲ್ಲ ಅಕ್ಷರಶಃ ‘ತಿಂಗಳ ತಿಳಿಗಾಳು’ಗಳು!
1960ರಲ್ಲಿ ಅಮೆರಿಕದ ಬಾಹ್ಯಾಕಾಶ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ‘ಅಪೋಲೊ’ ರೂಪುಗೊಂಡಾಗ, ಮನುಷ್ಯನಿರುವ ಗಗನನೌಕೆಯನ್ನು ಚಂದ್ರನ ಕಕ್ಷೆಯೊಳಗೆ ಪ್ರವೇಶಿಸುವಂತೆ ಮಾಡುವುದಷ್ಟೇ ಉದ್ದೇಶವಿದ್ದದ್ದು. ಚಂದ್ರನ ಮೇಲೆ ಇಳಿಯಬೇಕೆಂಬ ಇರಾದೆಯಿರಲಿಲ್ಲ. ಆದರೆ ಮರುವರ್ಷವೇ ರಾಷ್ಟ್ರಾಧ್ಯಕ್ಷನಾಗಿ ಚುನಾಯಿತನಾದ ಜಾನ್ ಎಫ್ ಕೆನಡಿ, ಸೋವಿಯತ್ ಒಕ್ಕೂಟಕ್ಕಿಂತ ಅಮೆರಿಕ ಮುಂದಿರಬೇಕೆಂಬ ಜಿದ್ದಿನಿಂದ, ಚಂದ್ರನ ಮೇಲೆ ಮನುಷ್ಯನ ಪದಾರ್ಪಣವೇ ನಮ್ಮ ಗುರಿ ಎಂದು ಘೋಷಣೆ ಮಾಡಿಯಾಯ್ತು. ಅಪೋಲೊ-11ರ ಧ್ಯೇಯ ಸಹ ‘ಮನುಷ್ಯರಿರುವ ನೌಕೆಯನ್ನು ಚಂದ್ರನ ಮೇಲೆ ಇಳಿಸುವುದು’ ಎಂದಷ್ಟೇ ಇದ್ದದ್ದು, ನೌಕೆಯ ಬಾಗಿಲು ತೆರೆದು ಕೆಳಗಿಳಿದು ನಡೆದಾಡುವ ಯೋಜನೆಯೆಲ್ಲ ಇರಲಿಲ್ಲ. ಆದರೆ ನಿರೀಕ್ಷೆಗೂ ಮೀರಿ, ನೀಲ್ ಆರ್ಮ್‍ಸ್ಟ್ರಾಂಗ್ ಮತ್ತು ಎಡ್ವಿನ್ ಆಲ್ಡ್ರಿನ್ ಆ ಸಾಹಸವನ್ನೂ ಮಾಡಿಯೇಬಿಟ್ಟರು! ಹಾಗಂತ, ನೌಕೆಯು ಚಂದ್ರನ ಮೇಲೆ ಇಳಿದ ಕೂಡಲೇ ಅವರಿಬ್ಬರು ಹೊರಬಂದು ನಡೆದಾಡತೊಡಗಿದ್ದಲ್ಲ (ಅಷ್ಟು ಹೊತ್ತಿಗಾಗಲೇ ಅಲ್ಲೊಂದು ‘ಉಡುಪಿ ರೆಸ್ಟೋರೆಂಟ್’ ಇತ್ತೆನ್ನುವುದು ಬರೀ ಜೋಕ್ ಅಷ್ಟೇಹೊರತು ಸತ್ಯವಲ್ಲ). ಅಪೋಲೊ-11 ಚಂದ್ರನ ಮೇಲೆ ಲ್ಯಾಂಡ್ ಆದದ್ದು 1969ರ ಜುಲೈ 20ರಂದು ಅಮೆರಿಕದ ಪೂರ್ವಕರಾವಳಿ ಸಮಯ ಸಂಜೆ 4:17ಕ್ಕಾದರೆ, ನೀಲ್ ಆರ್ಮ್‍ಸ್ಟ್ರಾಂಗ್ ಚಂದ್ರನ ಮೇಲೆ ಕಾಲೂರಿದ್ದು ರಾತ್ರಿ 11 ಗಂಟೆಯ ಸುಮಾರಿಗೆ! ಅಂದರೆ ಆರೇಳು ಗಂಟೆಗಳ ಕಾಲ ಮೂವರೂ ನೌಕೆಯೊಳಗೆ ಕುಳಿತುಕೊಂಡೇ ಅಲ್ಲಿನ ‘ಮೀನಮೇಷ’ ಎಣಿಸುತ್ತಿದ್ದರೋ ಏನೋ. ಭಯ, ಉದ್ವೇಗಗಳಿಂದ ಅವರ ಎದೆ ಡವಡವ ಎನ್ನುತ್ತಿದ್ದಿರಬಹುದೇ? ಆಶ್ಚರ್ಯವೆಂಬಂತೆ ಆ ಮೂವರ ಎದೆಬಡಿತವು ಇಡೀ ಯಾನದುದ್ದಕ್ಕೂ ನಾರ್ಮಲ್ ಆಗಿಯೇ ಇತ್ತಂತೆ. ಎಡ್ವಿನ್ ಆಲ್ಡ್ರಿನ್ ಅಂತೂ ನಿಮಿಷಕ್ಕೆ ಸರಾಸರಿ 88 ಲಬ್‍ಡಬ್‍ಗಳೊಂದಿಗೆ ಉಳಿದಿಬ್ಬರಿಗಿಂತಲೂ ಸದಾ ‘ಕೂಲ್’ ಆಗಿಯೇ ಇದ್ದನಂತೆ.
ಅಪೋಲೊ-11 ನೌಕೆಯಲ್ಲಿ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯಲ್ಲಿ ಏನೋ ಸ್ವಲ್ಪ ತಾಂತ್ರಿಕ ತೊಂದರೆ ಇತ್ತು. ಗ್ಯಾಸ್ ಫಿಲ್ಟರ್‍ಗಳಿಲ್ಲದಿದ್ದುದರಿಂದ ಜಲಜನಕದ ಗಾಳಿಗುಳ್ಳೆಗಳಿದ್ದ ನೀರನ್ನೇ ಕುಡಿಯಬೇಕಾಗಿತ್ತು. ಮೈಕೇಲ್ ಕಾಲಿನ್ಸ್ ಬರೆದ ‘Carrying The Fire - An Astronaut's Journey’ ಅನುಭವಕಥನ ಪುಸ್ತಕದಲ್ಲಿ ಇದರ ಪ್ರಸ್ತಾವವಿದೆ. ಕುಡಿಯುವ ನೀರಿನಲ್ಲಿ ಗಾಳಿಗುಳ್ಳೆಗಳಿದ್ದವು ಅಂತಷ್ಟೇ ಆಗಿದ್ದರೆ ಅದರಲ್ಲೇನೂ ಸ್ವಾರಸ್ಯ ಅನಿಸುತ್ತಿರಲಿಲ್ಲ. ಮೈಕೇಲ್ ಮುಂದುವರೆದು ಬರೆದಿದ್ದಾನೆ- ‘ಆ ನೀರನ್ನು ಕುಡಿದಿದ್ದರಿಂದಾಗಿ ನಾವು ಮೂವರೂ ಏಕ್‍ದಂ ಹೂಸು ಬಿಡಲಾರಂಭಿಸಿದೆವು. ಮೊದಲೇ ಇಕ್ಕಟ್ಟಾದ ಜಾಗ, ಅದರೊಳಗೆ ಮೂವರ ಅಪಾನವಾಯು ಸೇರಿಕೊಂಡರೆ ಹೇಗಿರಬಹುದು ಊಹಿಸಿ.’ ಆದರೂ ಆತ ಅದನ್ನು ಓದುಗರಿಗೆ ಅಸಹ್ಯವೆನಿಸದಂತೆ ಚಂದವಾಗಿ ಬರೆದಿದ್ದಾನೆ. ‘ನಮ್ಮ ಕೊಲಂಬಿಯಾ (ಅಪೋಲೊ-11 ನೌಕೆಯ ಸರ್ವೀಸ್ ಮಾಡ್ಯೂಲ್) ದುರ್ನಾತದಿಂದ ಕೂಡಿತ್ತು ಎಂದು ಹೇಳಿ ಅದರ ಅವಮಾನ ಮಾಡಲಾರೆ. ಮಾವಿನಹಣ್ಣೊಂದು ಪರಿಪಕ್ವವಾಗಿ ಆಗಲೋಈಗಲೋ ಮರದಿಂದ ಉದುರಲು ಸಿದ್ಧವಾಗಿದ್ದಂತೆ ಇತ್ತು ಎನ್ನುವೆ.’ ಎಂದು ಉಪಮಾಲಂಕಾರ ಬಳಸಿ ಬಣ್ಣಿಸಿದ್ದಾನೆ. ಒಟ್ಟಾರೆಯಾಗಿ ಅಪೋಲೊ-11 ಗಗನಯಾತ್ರಿಗಳ ಮಲಮೂತ್ರ ವಿಸರ್ಜನಾ ಆವಶ್ಯಕತೆಗಳ ಬಗ್ಗೆ ನಾಸಾ ನಿಗಾವಹಿಸಿದ್ದು ಕಡಿಮೆಯೇ. ಮೂವರ ಪೈಕಿ ಒಬ್ಬ (ಯಾರೆಂದು ಇದುವರೆಗೂ ಬಹಿರಂಗಗೊಂಡಿಲ್ಲ) ಯಾತ್ರಿಯಂತೂ ಇಡೀ ಯಾನದಲ್ಲಿ ಅಂದರೆ ಒಟ್ಟು 195 ಗಂಟೆಗಳ ಅವಧಿಯಲ್ಲಿ ಒಮ್ಮೆಯೂ ಮಲವಿಸರ್ಜನೆ ಆಗದಂತೆ ಮಾತ್ರೆ ಸೇವಿಸಿದ್ದನಂತೆ. ಇಲ್ಲಿ ಇನ್ನೂ ಒಂದು ಮಜಾ ಇದೆ. ಚಂದ್ರನ ಮೇಲೆ ಮೊತ್ತಮೊದಲು ಹೆಜ್ಜೆಯೂರಿದ ಖ್ಯಾತಿ ಆರ್ಮ್‍ಸ್ಟ್ರಾಂಗ್‍ನದೇ ಇರಬಹುದು. ಆದರೆ ಉಚ್ಚೆ ಹೊಯ್ದ ಖ್ಯಾತಿ ಎಡ್ವಿನ್ ಆಲ್ಡ್ರಿನ್‍ನದು. ‘ಯಾರೂ ಇಲ್ಲದ ನಿರ್ಜನ ಪ್ರದೇಶ. ಎಷ್ಟು ಭಯವಾಯ್ತೆಂದರೆ ನಾನು ಪ್ಯಾಂಟ್‍ನಲ್ಲೇ ಮೂತ್ರ ಮಾಡಿದೆ!’ ಎಂದು ಒಂದು ಸಂದರ್ಶನದಲ್ಲಿ ಆಲ್ಡ್ರಿನ್ ಉವಾಚ.
ನಾಸಾದಲ್ಲಿ 1965ರಿಂದಲೇ ನಡೆದುಬಂದಿದ್ದ ಒಂದು ಸಂಪ್ರದಾಯವೆಂದರೆ ಪ್ರತಿಯೊಂದು ವ್ಯೋಮಯಾತ್ರೆಯ ವಾಹನದ ಲಾಂಛನವನ್ನು ಆಯಾ ಯಾತ್ರೆಗಳ ಯಾತ್ರಿಕರ ಪೈಕಿಯೇ ಒಬ್ಬರು ರಚಿಸಬೇಕು. ವಾಹನಕ್ಕಷ್ಟೇ ಅಲ್ಲ, ಯಾತ್ರಿಗಳ ಉಡುಪಿನ ಮೇಲೂ ಅದೇ ಲಾಂಛನ. ಯೋಜನೆಗೆ ಸಂಬಂಧಿಸಿದ ಎಲ್ಲ ಕಾಗದಪತ್ರಗಳಿಗೂ ಅದೇ ಲಾಂಛನ. ಅಪೋಲೊ-11ರ ಲಾಂಛನವನ್ನು ರಚಿಸಿದವನು ಮೈಕೇಲ್ ಕಾಲಿನ್ಸ್. ಅದರಲ್ಲಿ ಬರೀ ಅಪೋಲೊದ ಧ್ಯೇಯಕ್ಕಿಂತ ನಾಸಾ ಸಂಸ್ಥೆಯ ಮತ್ತು ಅಮೆರಿಕ ರಾಷ್ಟ್ರದ ಧ್ಯೇಯವು ಪ್ರತಿಬಿಂಬಿತವಾಗಬೇಕೆಂದು ಅವನ ಉದ್ದೇಶ. ‘ನಮ್ಮ ಹೆಸರನ್ನು ಕೆತ್ತುವುದು ನನಗೆ ಸರಿಯೆನಿಸಲಿಲ್ಲ. ಏಕೆಂದರೆ ಈ ಯೋಜನೆ ಸಫಲವಾದರೆ ಅದರ ಕೀರ್ತಿ ನಾವು ಮೂವರದಷ್ಟೇ ಅಲ್ಲ. ಲಕ್ಷಗಟ್ಟಲೆ ತಂತ್ರ ಜ್ಞ ರು ಹಗಲಿರುಳೂ ದುಡಿದಿರುವ ಪರಿಶ್ರಮವಿದು. ಹಾಗಾಗಿ, ಅಮೆರಿಕದ ರಾಷ್ಟ್ರಪಕ್ಷಿಯಾದ ಬಿಳಿತಲೆ ಹದ್ದು ತನ್ನ ಕೊಕ್ಕಿನಲ್ಲಿ ಆಲಿವ್ ಮರದ ಗೆಲ್ಲೊಂದನ್ನು ಶಾಂತಿಯ ಸಂಕೇತವಾಗಿ ತೆಗೆದುಕೊಂಡು ಬಂದು ಗುಳಿಗಳಿರುವ ಚಂದ್ರನ ಮೇಲೆ ಕುಳಿತುಕೊಂಡಿರುವ, ಬಾಹ್ಯಾಕಾಶದ ಕತ್ತಲೆಯಲ್ಲಿ ದೂರದಲ್ಲಿ ಭೂಮಿಯು ಕಾಣುತ್ತಿರುವ ದೃಶ್ಯವನ್ನು ನನ್ನ ಕೈಯಿಂದಲೇ ಬಿಡಿಸಿ ಲಾಂಛನ ತಯಾರಿಸಿದೆನು’ ಎನ್ನುತ್ತಾನೆ ಕಾಲಿನ್ಸ್. ಆಮೇಲೆ ನಾಸಾದ ಉನ್ನತ ಅಧಿಕಾರಿಯೊಬ್ಬನ ಸೂಚನೆಯಂತೆ ಹದ್ದಿನ ಕೊಕ್ಕಿನಲ್ಲಿದ್ದ ಆಲಿವ್ ಗೆಲ್ಲನ್ನು ಹದ್ದಿನ ಕಾಲುಗಳು ಹಿಡಿದುಕೊಂಡಿವೆಯೆಂಬಂತೆ ಚಿತ್ರಿಸಲಾಯ್ತು. ಇದು ಕಾಲಿನ್ಸ್‍ಗೆ ಅಷ್ಟೇನೂ ಇಷ್ಟವಾಗಲಿಲ್ಲವಾದರೂ ಒಪ್ಪಿಕೊಳ್ಳಬೇಕಾಯ್ತು. ‘ಹಾಗೆ ಗೆಲ್ಲನ್ನು ಕಾಲುಗಳಿಂದ ಹಿಡಿದುಕೊಳ್ಳುವುದು ಹದ್ದಿಗೂ ಸರಿಯೆನಿಸಿರಲಿಕ್ಕಿಲ್ಲ. ಚಂದ್ರನ ಮೇಲೆ ಕಾಲೂರುವ ಮೊದಲು ಅದು ಆ ಗೆಲ್ಲನ್ನು ಬೀಳಿಸಿರುತ್ತದೆ’ ಎಂದು ಆತ ತಮಾಷೆ ಮಾಡಿದ್ದೂ ಇದೆ.
ಅಪೋಲೊ-11 ಗಗನನೌಕೆಯನ್ನು ನಿಯಂತ್ರಿಸಿದ ಕಂಪ್ಯೂಟರ್‍ಗೆ ಸಾಫ್ಟ್‍ವೇರ್ ಬರೆದವಳು ನಾಸಾ ಎಂಜಿನಿಯರ್ ಮಾರ್ಗರೇಟ್ ಹ್ಯಾಮಿಲ್ಟನ್. ಆಗ ಆಕೆಗೆ 33ರ ವಯಸ್ಸು. ‘ಸಾಫ್ಟ್‍ವೇರ್ ಎಂಜಿನಿಯರಿಂಗ್’ ಎಂಬ ಪದಪುಂಜವನ್ನು ಚಾಲ್ತಿಗೆ ತಂದವಳೂ ಆಕೆಯೇ. ಮೂನ್ ಲ್ಯಾಂಡಿಂಗ್‍ನ ಪ್ರೊಗ್ರಾಮ್‍ನಲ್ಲಿ ಅಲ್ಲಲ್ಲಿ ತಮಾಷೆಯ ಕಾಮೆಂಟ್‍ಗಳನ್ನೂ, ಆಗಿನ ಪ್ರಚಲಿತ ರಾಜಕೀಯ ಸಂಗತಿಗಳನ್ನು ಲೇವಡಿ ಮಾಡುವ ಕೋಡ್‍ವರ್ಡ್‍ಗಳನ್ನೂ ಮಾರ್ಗರೇಟಳ ತಂಡದವರು ಸೇರಿಸಿದ್ದರು. ಉದಾಹರಣೆಗೆ ಇಗ್ನೀಷನ್ ರುಟೀನ್‍ನ ಕಮಾಂಡ್‍ಗಳ ಕಡತಕ್ಕೆ ‘ಬರ್ನ್ ಬೇಬಿ ಬರ್ನ್’ ಎಂಬ ಹೆಸರು. ಅದು, 1965ರಲ್ಲಿ ಲಾಸ್ ಏಂಜಲೀಸ್‍ನಲ್ಲಿ ನಡೆದಿದ್ದ ದೊಂಬಿಗಳ ಬಗ್ಗೆ ಆಗ ರೇಡಿಯೋ ಜಾಕಿಯೊಬ್ಬ ಪ್ರಸಿದ್ಧಿಗೆ ತಂದಿದ್ದ ಸಾಲು! ಅಪೋಲೊ-11 ವ್ಯೋಮಯಾತ್ರೆಗೆ ಸಂಬಂಧಿಸಿದ ಕಂಪ್ಯೂಟರ್ ಪ್ರೋಗ್ರಾಮ್‍ನ ಪ್ರಿಂಟ್‍ಔಟ್ ತೆಗೆದು ಆ ಕಾಗದಗಳ ಅಟ್ಟ್ಟೆಯನ್ನು ಪೇರಿಸಿದಾಗ ಅದು ಮಾರ್ಗರೇಟ್‍ಳಷ್ಟೇ ಎತ್ತರವಾಗಿತ್ತು. ಆ ಫೋಟೊ ತುಂಬ ಪ್ರಸಿದ್ಧವಾದುದು. 2016ರಲ್ಲಿ ಬರಾಕ್ ಒಬಾಮ ಅಮೆರಿಕಾಧ್ಯಕ್ಷನಾಗಿದ್ದಾಗ ಮಾರ್ಗರೇಟ್‍ಗೆ ಅತ್ಯುನ್ನತ ಸೇವಾಪದಕ ನೀಡಿ ಗೌರವಿಸಲಾಗಿತ್ತು.
ಚಂದ್ರಯಾನದ ಯಾತ್ರಿಗಳು ಏನನ್ನೆಲ್ಲ ಒಯ್ದಿದ್ದರು ಎಂಬುದು ಕೂಡ ಸ್ವಾರಸ್ಯವೇ. ಮೊತ್ತಮೊದಲ ಬಾರಿ ಮನುಷ್ಯನ ಪದಾರ್ಪಣ ಆಗಲಿರುವುದರ ಕುರುಹಾಗಿ ಒಂದು ಫಲಕ, ಅಮೆರಿಕದ ರಾಷ್ಟ್ರಧ್ವಜ (ಒಂದು ಅಲ್ಲಿ ಚಂದ್ರನ ಮೇಲೆ ನೆಡಲಿಕ್ಕೆ, ಇನ್ನೊಂದು- ಚಂದ್ರನವರೆಗೆ ಹೋಗಿ ವಾಪಸಾದದ್ದು ಎಂಬ ಖ್ಯಾತಿಗೆ), ಎಲ್ಲ 50 ಸಂಸ್ಥಾನಗಳ ಮತ್ತು ವಾಷಿಂಗ್ಟನ್ ಡಿಸಿ. ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ ಧ್ವಜಗಳು, ವಿಶ್ವಸಂಸ್ಥೆಯ ಧ್ವಜ- ಇವೆಲ್ಲ ನಿರೀಕ್ಷಿತವೇ. ಜತೆಗೆ ಇನ್ನೂ ಕೆಲವೆಲ್ಲ ವಸ್ತುಗಳಿದ್ದವು. ರೈಟ್ ಸಹೋದರರ ಮೊತ್ತಮೊದಲ ವಿಮಾನದ ಅವಶೇಷಗಳನ್ನು ಸ್ವತಃ ನೀಲ್ ಆರ್ಮ್‍ಸ್ಟ್ರಾಂಗ್ ವಿಶೇಷ ಮುತುವರ್ಜಿ ವಹಿಸಿ ಒಯ್ದಿದ್ದನು. ಅಮೆರಿಕದ ಧ್ವಜಗಳನ್ನು ಯಾವ ಕಂಪನಿಯು ಒದಗಿಸಿತ್ತು ಎಂದು ನಾಸಾ ಗುಟ್ಟು ಬಿಡಲಿಲ್ಲ. ಅವು ‘ಸಿಯರ್ಸ್’ ಕಂಪನಿಯಿಂದ ಸರಬರಾಜಾಗಿದ್ದ ಧ್ವಜಗಳು. ಆದರೆ ಸಿಯರ್ಸ್ ಆ ಬಗ್ಗೆ ಜಾಹಿರಾತು ಮಾಡದಂತೆ ನಾಸಾ ಕ್ರಮಕೈಗೊಂಡಿತ್ತು. ಇನ್ನೊಂದು ಸ್ವಾರಸ್ಯವೆಂದರೆ ಚಂದ್ರನತ್ತ ಹೊರಡುವುದಕ್ಕೆ ಒಂದು ವಾರದ ಮೊದಲು ಸುದ್ದಿಗಾರರು ನೀಲ್ ಆರ್ಮ್‍ಸ್ಟ್ರಾಂಗ್‍ಗೆ ‘ವೈಯಕ್ತಿಕವಾಗಿ ಸ್ಮರಣಿಕೆಯೇನಾದರೂ ತೆಗೆದುಕೊಂಡು ಹೋಗಬೇಕೆಂದಿರುವಿರಾ?’ ಎಂದು ಪ್ರಶ್ನೆ ಕೇಳಿದ್ದರು. ಆರ್ಮ್‍ಸ್ಟ್ರಾಂಗ್ ಅದಕ್ಕೆ ತಮಾಷೆಗೆಂದೇ ‘ಏನಿಲ್ಲ, ಸಾಧ್ಯವಾದರೆ ಸ್ವಲ್ಪ ಹೆಚ್ಚು ಇಂಧನವನ್ನು ಒಯ್ಯುವೆ’ ಎಂದಿದ್ದನು. ನೋಡಿದರೆ ಆತನ ಆ ಉತ್ತರಕ್ಕೆ ಎಲ್ಲಿಲ್ಲದ ಮಹತ್ತ್ವ ಬಂತು! ಅಪೋಲೊ-11ರ ‘ಈಗಲ್’ ಕ್ಯಾಪ್ಸೂಲ್ ಚಂದ್ರನ ಮೇಲೆ ಇಳಿದಾಗ ಅದರ ಇಂಧನ ಟ್ಯಾಂಕ್ ಬಹುತೇಕ ಖಾಲಿಯಾಗಿ ಅಲಾರಂ ಹೊಡೆದಿತ್ತು! ಇನ್ನು ಐದು ಸೆಕೆಂಡು ತಡವಾಗುತ್ತಿದ್ದರೂ ಈಗಲ್ ಕ್ಯಾಪ್ಸೂಲ್‍ನ ಇಂಧನ ಮುಗಿದು ಪರಿಸ್ಥಿತಿ ಘೋರವಾಗುತ್ತಿತ್ತು.
ಚಂದ್ರನ ಮೇಲೆ ಕಾಲೂರಿದ ಬಳಿಕ ಆರ್ಮ್‍ಸ್ಟ್ರಾಂಗ್ ಹೇಳಿದ, ವಾಯ್ಸ್ ಆಫ್ ಅಮೆರಿಕ ಮತ್ತು ಬಿಬಿಸಿ ರೇಡಿಯೊದಿಂದ ಭೂಮಿಯಲ್ಲೆಲ್ಲ ಬಿತ್ತರಗೊಂಡ, ``That's one small step for a man, one giant leap for mankind’ ’ ವಾಕ್ಯದ ಬಗ್ಗೆಯೂ ಸಾಕಷ್ಟು ಚರ್ಚೆಯಾಗಿದೆ. ಎಡಗಾಲಿನ ಬೂಟು ಚಂದ್ರನನ್ನು ತಗುಲಿದ ಕ್ಷಣದಲ್ಲಿ ಆರ್ಮ್‍ಸ್ಟ್ರಾಂಗ್‍ನ ಬಾಯಿಂದ ಬಂದ ಮಾತದು. ಆ ವಾಕ್ಯದಲ್ಲಿನ ಆರನೆಯ ಪದ (ಚಿ ಎಂಬ ಒಂದಕ್ಷರ) ಸರಿಯಾಗಿ ಕೇಳಿಸುವುದಿಲ್ಲ. ತಾನು ಅದನ್ನು ಸರಿಯಾಗಿಯೇ ಉಚ್ಚರಿಸಿದ್ದೇನೆ ಎಂದು ಆರ್ಮ್‍ಸ್ಟ್ರಾಂಗ್‍ನ ವಾದ. ಕೇಳಿಸದಿರುವುದಕ್ಕೆ ಕಾರಣ ರೇಡಿಯೊ-ಸ್ಟಾಟಿಕ್ ಶಬ್ದ. ‘ಅಶ್ವತ್ಥಾಮೋ ಹತಃ ಕುಂಜರಃ’ ಎಂದು ಯುಧಿಷ್ಠಿರ ಹೇಳುವಾಗ ಕುಂಜರಃ ಪದವನ್ನು ಮಾತ್ರ ಮರೆಮಾಚುವಂತೆ ಕೃಷ್ಣ ಶಂಖ ಊದಿದ್ದನಲ್ಲ ಹಾಗೆ ಆದದ್ದು. ಆರ್ಮ್‍ಸ್ಟ್ರಾಂಗ್ ಹೇಳಿದ್ದರಲ್ಲಿ ಒಂದಕ್ಷರ ಮಿಸ್ಸಿಂಗ್ ಆಗಿ ಆ ವಾಕ್ಯವು ಅಂಥದೇನೂ ಅರ್ಥವ್ಯತ್ಯಾಸವಾಗದಿದ್ದರೂ ಪವರ್‍ಫುಲ್ ಆಗಬೇಕಿದ್ದದ್ದು ಸ್ವಲ್ಪ ಪೇಲವವಾದದ್ದು ಹೌದು. ಹಾಗೆಯೇ, ಕಾಲೂರಿದ ಚಂದ್ರಭಾಗವನ್ನು ಆರ್ಮ್‍ಸ್ಟ್ರಾಂಗ್ ‘ಟ್ರಾನ್‍ಕ್ವಿಲಿಟಿ ಬೇಸ್’ ಎಂದು ಹೊಸದೊಂದು ಪದಪುಂಜ ಬಳಸಿ ಅನೌನ್ಸ್ ಮಾಡಿದ್ದು ಕೂಡ ಹ್ಯೂಸ್ಟನ್‍ನಲ್ಲಿ ನಿಯಂತ್ರಣಕೇಂದ್ರದ ವಿ ಜ್ಞಾ ನಿಗಳನ್ನು ತಬ್ಬಿಬ್ಬುಗೊಳಿಸಿತ್ತು.
ಚಂದ್ರನ ಮೇಲೆ ನಿಂತು ಬೈಬಲ್‍ನ ಒಂದು ಚಿಕ್ಕ ಭಾಗವನ್ನು ಓದಬೇಕೆಂದು ಆಲ್ಡ್ರಿನ್ ಯೋಚಿಸಿದ್ದ. ಈಹಿಂದೆ ಅಪೋಲೊ-8ರ ಯಾತ್ರಿಗಳು ಚಂದ್ರನ ಸುತ್ತ ಪ್ರದಕ್ಷಿಣೆ ಬಂದ ದಿನವು ಭೂಮಿಯಲ್ಲಿ ಕ್ರಿಸ್ಮಸ್‍ನ ಹಿಂದಿನ ದಿನವಾದ್ದರಿಂದ ಬೈಬಲ್ ಪಠಣ ಮಾಡಿದ್ದರು. ಅದು ಭೂಮಿಯ ಮೇಲಿನ ಕೆಲವು ನಾಸ್ತಿಕರನ್ನು ಕೆರಳಿಸಿತ್ತು. ಆ ಉಸಾಬರಿಯೇ ಬೇಡವೆಂದು ನಾಸಾ ಅಧಿಕಾರಿಗಳು ಉಡ್ಡಯನಕ್ಕೆ ಮೊದಲೇ ಆಲ್ಡ್ರಿನ್‍ಗೆ ಚಂದ್ರನ ಮೇಲೆ ಬೈಬಲ್ ಪುಸ್ತಕ ತೆರೆಯದಂತೆ ತಾಕೀತು ಮಾಡಿದ್ದರು. ಬೈಬಲ್ ಪಠಣ ಮಾಡದಿದ್ದರೇನಂತೆ, ಆಲ್ಡ್ರಿನ್ ಅಲ್ಲಿ ಚಂದ್ರನ ಮೇಲೆ ನಾಲ್ಕು ಹನಿ ವೈನ್ ಚಿಮುಕಿಸಿ, ಉಳಿದ ವೈನ್‍ನಲ್ಲಿ ಬ್ರೆಡ್ ಸ್ಲೈಸ್ ಅದ್ದಿ ಜೀಸಸ್‍ನನ್ನು ಪ್ರಾರ್ಥಿಸಿ ಮನದಲ್ಲೇ ಕೃತ???ತೆ ಸಲ್ಲಿಸಿದರ ಬಗ್ಗೆ ಆಧ್ಯಾತ್ಮಿಕ ಅಭಿಮಾನದಿಂದ ಹೇಳುತ್ತಾನೆ. ಆಲ್ಡ್ರಿನ್‍ಗೆ ಸಂಬಂಧಿಸಿದ ಇನ್ನೊಂದು ವಿಶೇಷವಿದೆ: ಆತನ ಅಮ್ಮ ಮೇರಿಯನ್‍ಳ ತವರು ಕುಟುಂಬದ ಹೆಸರು ‘ಮೂನ್’ ಅಂತಲೇ ಇದ್ದದ್ದು! ಆದರೆ ಆತ ಆ ಮಾಹಿತಿಯನ್ನು ನಾಸಾಕ್ಕೆ ಯಾವತ್ತೂ ತಿಳಿಸಿದ್ದಿಲ್ಲ. ಆ ಬಗ್ಗೆ ನಾಸಾ ಅನಾವಶ್ಯಕ ಸ್ಕೋಪ್ ತಗೊಳ್ಳೋದು ಆತನಿಗೆ ಇಷ್ಟವಿರಲಿಲ್ಲ.
ಆಲ್ಡ್ರಿನ್ ನೆನಪಿಸಿಕೊಳ್ಳುವ ಇನ್ನೊಂದು ತಮಾಷೆ ಸಂಗತಿಯೆಂದರೆ ಚಂದ್ರಯಾನದ ಬಾಬ್ತು ಆತ ಸಲ್ಲಿಸಬೇಕಾಗಿ ಬಂದಿದ್ದ ಖರ್ಚು-ವೆಚ್ಚದ ವಿವರ. ಕಾರ್ಪೊರೇಟ್ ಜಗತ್ತಿನಲ್ಲಿರುವವರಿಗೆ ಗೊತ್ತಿರುತ್ತದೆ ಕೆಲಸದ ನಿಮಿತ್ತ ಎಲ್ಲಿಗಾದರೂ ಟೂರ್ ಹೋಗಿಬಂದರೆ ಎಕ್ಸ್‍ಪೆನ್ಸ್ ರಿಪೋರ್ಟ್ ಸಲ್ಲಿಸಬೇಕಾದ ಜರೂರತ್ತು. ಆಲ್ಡ್ರಿನ್ 1971ರಲ್ಲಿ ನಿವೃತ್ತನಾದಾಗ, ಚಂದ್ರಯಾನಕ್ಕಾಗಿ ತನ್ನ ಬೇಸ್ ಆಫೀಸ್‍ನಿಂದ ಫ್ಲೋರಿಡಾದ ಕೇಪ್ ಕೆನಡಿ ಉಡ್ಡಯನ ಕೇಂದ್ರಕ್ಕೆ ಹೋಗಿ ಬಂದ ಖರ್ಚಿನಲ್ಲಿ 33 ಡಾಲರ್ 31 ಸೆಂಟ್ಸ್ ತನ್ನ ಕಿಸೆಯಿಂದ ಹಾಕಿದ್ದನ್ನು ನಾಸಾ ಆಮೇಲೆ ಆತನಿಗೆ ಪಾವತಿ ಮಾಡಿತಂತೆ. ಅಪೋಲೊ-11 ನೌಕೆಯು ಚಂದ್ರನಿಂದ ಹೊರಟು ಭೂಮಿಯನ್ನು ತಲುಪಿದ್ದು ಪೆಸಿಫಿಕ್ ಸಾಗರ ಮಧ್ಯದಲ್ಲಿ ಅದಕ್ಕೆಂದೇ ನಿಲ್ಲಿಸಿದ್ದ ಯು.ಎಸ್.ಎಸ್ ಹಾರ್ನೆಟ್ ಎಂಬ ಹಡಗಿನೊಳಕ್ಕೆ. ಅಲ್ಲಿಂದ ಹವಾಯಿ ದ್ವೀಪಗಳ ರಾಜಧಾನಿ ಹೊನಲುಲುವನ್ನು 24 ಜುಲೈ 1969ರಂದು ತಲುಪಿದಾಗ ಅಲ್ಲಿ ಆ ಮೂವರು ಗಗನಯಾತ್ರಿಗಳು ಕಸ್ಟಂಸ್ ಫಾರಂ ತುಂಬಿಸಬೇಕಾಯ್ತು. ಚಂದ್ರನ ಮೇಲಿಂದ ಶಿಲೆಗಳನ್ನೂ ಒಂದಿಷ್ಟು ಧೂಳನ್ನೂ ತಂದಿದ್ದೇವೆಂದು ಡಿಕ್ಲೇರ್ ಮಾಡಬೇಕಾಗಿ ಬಂತು! ಎಕ್ಸ್‍ಪೆನ್ಸ್ ರಿಪೋರ್ಟ್ ಮತ್ತು ಕಸ್ಟಂಸ್ ಫಾರಂನ ಪ್ರತಿಗಳನ್ನು ಆಲ್ಡ್ರಿನ್ 2015ರಲ್ಲಿ ಮಾಡಿದ ಟ್ವೀಟ್‍ಗಳಲ್ಲಿ ದಾಖಲಿಸಿದ್ದಾನೆ.
ಚಂದ್ರನ ಮೇಲೆ ಮಾನವನ ಪದಾರ್ಪಣೆಯೆಲ್ಲ ಸುಳ್ಳು, ನಾಸಾ ಹೆಣೆದ ಮಹಾ ಕಪಟನಾಟಕ ಅಂತೆಲ್ಲ ಕಾನ್ಸ್ಪಿರೆಸಿ ಥಿಯರಿಗಳು ಈಗಲೂ ಹರಿದಾಡುತ್ತವೆ. ಅಲ್ಲಿ ನೆಟ್ಟ ಧ್ವಜ ಮತ್ತು ನೀಲ್ ಆರ್ಮ್‍ಸ್ಟ್ರಾಂಗ್‍ನ ನೆರಳು ಆ ರೀತಿ ಕಾಣಿಸಿಕೊಳ್ಳಲಿಕ್ಕೆ ಹೇಗೆ ಸಾಧ್ಯ ಎಂದು ಆಪ್ಟಿಕಲ್ ಫಿಸಿಕ್ಸ್ ಹಿಡಿದುಕೊಂಡು ವಾದಿಸುವವರು ಇದ್ದಾರೆ. ಇದಕ್ಕೆ ಪ್ರತಿಯಾಗಿ ‘ನಾವು ನಿಜವಾಗಿ ಹೋಗಿ ಬಂದದ್ದಕ್ಕಿಂತ, ಕಪಟ ನಾಟಕವಾಡುವುದು ದುಪ್ಪಟ್ಟು ಕಷ್ಟದ ಕೆಲಸ’ ಎಂದು ಆರ್ಮ್‍ಸ್ಟ್ರಾಂಗ್ ಹೇಳಿಕೆ ಕೂಡ ಪ್ರಸಿದ್ಧ. 2001ರಲ್ಲಿ ಬಾರ್ಬ್ ಸಿಬ್ರೆಲ್ ಎಂಬೊಬ್ಬ ಕಾನ್ಸ್ಪಿರೆಸಿ ಥಿಯರಿಸ್ಟನು ಆಲ್ಡ್ರಿನ್‍ನನ್ನು ‘ಬೈಬಲ್ ಮೇಲೆ ಕೈಯಿಟ್ಟು ಹೇಳುತ್ತೀಯಾ ನೀನು ಚಂದ್ರನ ಮೇಲೆ ನಡೆದದ್ದು ಸತ್ಯ ಅಂತ?’ ಎಂದು ಪೀಡಿಸಿದ್ದನು. ನಸುನಗುತ್ತ ಆತನನ್ನು ಸಾಗಹಾಕುವ ಪ್ರಯತ್ನವನ್ನು ಆಲ್ಡ್ರಿನ್ ಮಾಡಿದನಾದರೂ ಆತ ಮತ್ತೆಮತ್ತೆ ಕೆಣಕಿದನು. ‘ನೀನೊಬ್ಬ ಹೇಡಿ, ಸುಳ್ಳುಗಾರ, ಕಳ್ಳ’ ಎಂದು ಆಲ್ಡ್ರಿನ್‍ನನ್ನು ಮೂದಲಿಸಿದನು. ತಾಳ್ಮೆ ಕಳೆದುಕೊಂಡ ಆಲ್ಡ್ರಿನ್ ಆತನ ಮುಸುಡಿಗೇ ಒಂದು ಮುಷ್ಟಿಪ್ರಹಾರ ಕೊಟ್ಟನು. ಆಲ್ಡ್ರಿನ್ ಹೊಡೆದಿದ್ದಕ್ಕೆ ಆತ ಬದುಕಿಕೊಂಡನು. ‘ನೀಳ ಭುಜಬಲಿ’- ಅದೇ ನೀಲ್ ಆರ್ಮ್‍ಸ್ಟ್ರಾಂಗ್ ಏನಾದರೂ ಹಾಗೆ ಪಂಚ್ ಮಾಡಿದ್ದಿದ್ದರೆ ಆ ಆಸಾಮಿ ಅಲ್ಲೇ ಸತ್ತುಹೋಗುತ್ತಿದ್ದನೋ ಏನೋ!
ಲೇಖಕರು:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
ಲೇಖಕರ ಜು.14ರ ತಿಳಿರು ತೋರಣ ಅಂಕಣದಿಂದ....
FEEDBACK: samarasasudhi@gmail.com



