HEALTH TIPS

ಸಮರಸದಲ್ಲಿ ಇಂದಿನಿಂದ ತೊರವೆ ರಾಮಾಯಣ-ಸಂಚಿಕೆ-01

           
     ರಾಮಾಯಣ ಮಾಸಾಚರಣೆಯ ಅಂಗವಾಗಿ ಸಮರಸ ಸುದ್ದಿಯು ಇಂದಿನಿಂದ ತೊರವೆ ರಾಮಾಯಣವನ್ನು ಪ್ರಕಟಿಸಲಿದೆ.
     ವಾಲ್ಮೀಕಿ ರಾಮಾಯಣದ ಕಥೆಯನ್ನು ಅಂದಗೆಡದಂತೆ ಮೊತ್ತ ಮೊದಲಬಾರಿಗೆ ಕನ್ನಡಕ್ಕೆ ಕೊಟ್ಟ ಕೀರ್ತಿ ತೊರವೆಯ ನರಹರಿಗೆ ಅರ್ಥಾತ್ ಕುಮಾರವಾಲ್ಮೀಕಿಗೆ ಸೇರಿದ್ದು. ನಿರೂಪಣೆ ಮತ್ತು ದೃಷ್ಟಿಗಳಲ್ಲಿ ನಾರಣಪ್ಪನ ಸಂಪ್ರದಾಯಕ್ಕೆ ಸೇರಿದವನು ನರಹರಿ. ರಾಮಾವತಾರದ ಮಹತ್ವವನ್ನು ಸಾರಿ ರಾಮಭಕ್ತಿಯ ತರಂಗಿಣಿಯಲ್ಲಿ ಆಸ್ತಿಕರನ್ನು ಮೀಯಿಸುವುದೇ ಅವನ ಪರಮ ಗುರಿ. ನಾರಣಪ್ಪನ ಭಾಷಾ ಸಾಮಥ್ರ್ಯವಾಗಲೀ ರೂಪಕ ವೈಭವವಾಗಲೀ ಕಲ್ಪನೋಜ್ವಲತೆಯಾಗಲೀ ಅವನಿಗಿಲ್ಲ. ಜನಮನಸ್ಸಿಗೆ ತಾಕುವಂತೆ ಸರಳವಾಗಿ ನಿರರ್ಗಳವಾಗಿ ಕಥೆ ಹೇಳುವುದೇ ಅವನ ಉದ್ದೇಶ. ರಾಮವ್ಯಕ್ತಿತ್ವಕ್ಕೆ ತನ್ನನ್ನು ಅರ್ಪಿಸಿಕೊಂಡದ್ದರಿಂದ ಕಾವ್ಯದಲ್ಲಿ ತಲೆ ದೋರುವ ರಾಮಚಾರಿತ್ರ್ಯದ ಕೆಲವು ವಿರೋಧಾಭಾಸಗಳ ಬಗ್ಗೆ ಆತ ತಲೆಕೆಡಿಸಿಕೊಳ್ಳುವುದಿಲ್ಲ. ರಾಮ ದೇವರಾದುದರಿಂದ ಆತನ ಕಾರ್ಯಗಳೆಲ್ಲ ದೋಷರಹಿತವೆಂದೇ ಅವನ ಭಾವನೆ. ಆದ್ದರಿಂದ ಬುದ್ದಿಜನ್ಯವಾದ ಜಿ????ಸೆಗಳಿಗೆ ಇಲ್ಲಿ ಎಡೆಯೇ ಇಲ್ಲ. ಮೂಲಕಥೆಯನ್ನು ಅಗತ್ಯವಾದೆಡೆ ಹಿಗ್ಗಿಸಿ, ಅನಗತ್ಯವಾದೆಡೆ ಸಂಕ್ಷಿಪ್ತಗೊಳಿಸುವುದು ಶ್ರೇಷ್ಠ ಕವಿಯ ಸಲ್ಲಕ್ಷಣಗಳಲ್ಲಿ ಒಂದು. ಆದರೆ ಕುಮಾರವಾಲ್ಮೀಕಿ ವಾಲ್ಮೀಕಿಯ ಕಥಾಸಂವಿಧಾನವನ್ನು ಅತ್ಯಂತ ಅಗತ್ಯವೂ ರೋಚಕವೂ ಆದ ಎಡೆಗಳಲ್ಲೇ ಕುಗ್ಗಿಸಿ, ಅನಗತ್ಯವೂ ಅನಾಕರ್ಷಕವೂ ಆದೆಡೆಗಳಲ್ಲೆ ಹಿಗ್ಗಿಸಿ ಕಾವ್ಯಕ್ಕೆ ಬೊಜ್ಜು ಹೆಚ್ಚಿಸಿದ್ದಾನೆ. ವಾಲ್ಮೀಕಿಯಲ್ಲಿ ಬಾಲಕಾಂಡ ಅತ್ಯಂತ ಚಿಕ್ಕದು. ಆದರೆ ನರಹರಿ ಅದನ್ನು ಸುಮಾರು ಎರಡರಷ್ಟು ಗಾತ್ರಕ್ಕೆ ಉಬ್ಬಿಸಿ ನೀರಸಗೊಳಿಸಿದ್ದಾನೆ. ಹಾಗೆಯೇ ಅತ್ಯಂತ ಪ್ರಭಾವಕಾರಿಯೂ ಮಾನವೀಯತೆಯ ಅಂತ ರಾಳದ ಪ್ರಬಲ ಅನಿಕೆಗಳ ಕ್ರಿಯೆಗಳ ಜ್ವಲಂತ ಸಮರ್ಥ ಚಿತ್ರಣವಿರುವ ಅಯೋಧ್ಯಾ ಕಾಂಡವನ್ನು ಅನುಚಿತವಾಗಿ ಹ್ರಸ್ವಗೊಳಿಸಿಬಿಟ್ಟಿದ್ದಾನೆ. ಯುದ್ಧಕಾಂಡವಂತೂ ಸಹನಾತೀತ ವಾಗಿ ಅಕ್ಷಮ್ಯವಾಗಿ ಲಂಬಿತವಾಗಿದೆ, ನಿಸ್ಸಾರವಾಗಿದೆ. ಸಂವಾದಗಳ ಮೂಲಕ ವಾಲ್ಮೀಕಿಯ ಪಾತ್ರಗಳಲ್ಲಿ ವ್ಯಕ್ತಗೊಳ್ಳುವ ಜೀವನ ಸಂಘರ್ಷ ಇಲ್ಲಿ ತೀರಾ ಸಪ್ಪೆಯಾಗಿದೆ. ಇಡೀ ಕೃತಿ ರಾಮಮಹಿಮಾಮಯವಾಗಿದ್ದು, ಸರಳ ನಿರೂಪಣೆಯಿಂದಾಗಿ ಸಾಮಾನ್ಯ ಜನಪ್ರಿಯತೆಯನ್ನು ಪಡೆಯಿತೆಂಬುದನ್ನು ಬಿಟ್ಟರೆ, ಇದರ ಕೊರತೆಗಳ ಪಟ್ಟಿಯನ್ನು ಹೀಗೇ ಬೆಳೆಸುತ್ತ ಹೋಗ ಬಹುದು.
     ತೊರವೆ ರಾಮಾಯಣದ ಗದ್ಯಾನುವಾದವನ್ನು ಕೆ.ಎಸ್.ಕೃಷ್ಣಮೂರ್ತಿಯವರು ಮಾಡಿದ್ದಾರೆ.
ಕುಮಾರ ವಾಲ್ಮೀಕಿಯ ಪರಿಚಯ
ಈತನ ನಿಜವಾದ ಹೆಸರು: ನರಹರಿ
ಈತನ ಕಾಲ: ಕ್ರಿ.ಶ.ಸು. 1500
ಈತನ ಕೃತಿ: 'ತೊರವೆ ರಾಮಾಯಣ'
ಈತನ ಸ್ಥಳ: ವಿಜಾಪುರ ಜಿಲ್ಲೆಯ ತೊರವೆ ಗ್ರಾಮ. ಅಲ್ಲಿನ ದೇವರಾದ ನರಸಿಂಹನ ಅಂಕಿತದಲ್ಲಿ ಕಾವ್ಯರಚನೆ ಮಾಡಿದ್ದಾನೆ.
ಈತನಿಗಿದ್ದ ಬಿರುದು: ಕವಿರಾಜ ಹಂಸ
ಈತ ಬರೆದ "ತೊರವೆ ರಾಮಾಯಣ"ವು ಜನಪ್ರಿಯವಾದ ನಡುಗನ್ನಡ ಕಾವ್ಯವಾಗಿದೆ.  ಕುಮಾರವ್ಯಾಸ ನಂತೆ ಈತ ಸಹ ಭಾಮಿನಿ ಷಟ್ಪದಿಯಲ್ಲಿ ರಚಿಸಿರುತ್ತಾನೆ. ಇದು ಎರಡು ಸಂಪುಟಗಳ ಬೃಹತ್ಕಾವ್ಯ.
            ಕುಮಾರ ವಾಲ್ಮೀಕಿಯ ತೊರವೆ ರಾಮಾಯಣ
ತೊರವೆ ರಾಮಾಯಣ
ಕುಮಾರ ವಾಲ್ಮೀಕಿ
ಕಾಲ: ಸುಮಾರು 1500

ಬಾಲಕಾಂಡ
ಮೊದಲನೆಯ ಸಂಧಿ

ಶ್ರೀಜನಕಜಾರಮಣ ವಿಮಲಸ
ರೋಜಸಂಭವಜನಕನನುಪಮ
ರಾಜಶೇಖರವಿನುತ ನಿಖಿಳಾಮರಕಿರೀಟಚಯ
ರಾಜಿತಾಮಲ ಲಲಿತಪದಪಂ
ಕೇಜನಾನತಜನದಯಾಸುರ
ಭೂಜ ತೊರವೆಯರಾಯ ನರಹರಿ ಪಾಲಿಸುಗೆ ಜಗವ ||1||

ಪರಮಮಂಗಳಮೂರ್ತಿ ಪಾವನ
ಚರಿತ ಪರಮಾನಂದಮಯ ಪುರ
ಹರ ಪುರಂದರ ಪೂಜಿತಾಂಘ್ರಿಸರೋಜ ಶಶಿಮೌಳಿ
ಶರಣಜನಸುರಧೇನು ಗಂಗಾ
ಧರ ಗಜಾಸುರಮಥನ ಗೌರೀ
ವರ ತ್ರಿಯಂಬಕನೊಲಿದು ಸಲಹುಗೆ ಸಕಲ ಸಜ್ಜನರ ||2||

ಸರಸಿಜಾಂಘ್ರಿದ್ವಯದ ಕೋಮಲ
ಚರಣಕಾಂಡದ ಘನನಿತಂಬದ
ನಿರುಪಮಾಂಗದ ನಿಮ್ನ ನಾಭಿಯ ನಿಬಿಡಕುಚಭರದ
ವರತರಾಭಯಕರದ ಶೋಭಾ
ಕರದ ನಗೆಮೊಗದನುಪಮದ ಬಂ
ಧುರದ ಭಾರತಿ ನಿಲುಗೆ ಮನ್ಮುಖಪದ್ಮಸದ್ಮದಲಿ ||5||
                 ಮುಂದುವರಿಯುವುದು....................

                     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries