ಕೃತಿ: ಸಖನೊಂದಿಗಿನ ಸಖ್ಯ
ಸಂಕಲನ: ಮಲ್ಲಿಗೆ ಹೂವಿನ ಸಖ
ವಿಮಸ ಬರಹ: ಚೇತನಾ ಕುಂಬಳೆ
'ಸಂಗಾತ' ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಮೂಲಕ ಪರಿಚಿತರಾದ ಲೇಖಕ ಟಿ.ಎಸ್ ಗೊರವರ ಅವರ *ಮಲ್ಲಿಗೆ ಹೂವಿನ ಸಖ* ಎಂಬ ಕಥಾ ಸಂಕಲನವು ತನ್ನ ಶೀರ್ಷಿಕೆಯಿಂದಲೇ ಓದುಗರ ಮನವನ್ನು ಸೆಳೆದು ಬಿಡುತ್ತದೆ. ಜೊತೆಗೆ ಒಂದು ರೀತಿಯ ಕುತೂಹಲವನ್ನೂ ಮೂಡಿಸುತ್ತದೆ. ಒಮ್ಮೆ ಓದ ಬೇಕೆನಿಸುತ್ತದೆ. ಮಲ್ಲಿಗೆ ಹೂವಿನ ಸಖ ಮಲ್ಲಿಗೆ ಹೂವಿನಷ್ಟೇ ಆಕರ್ಷಕವಾಗಿದ್ದು, ತುಂಬ ಆಪ್ತವೆನಿಸಿ ಬಿಡುತ್ತಾನೆ. ಗದಗ ಜಿಲ್ಲೆಯ ರಾಜೂರ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದ ಲೇಖಕರು ತಮ್ಮ ಕಥೆಗಳಲ್ಲಿಗ್ರಾಮೀಣ ಬದುಕಿನ ಚಿತ್ರಣವನ್ನೂ ಹಳ್ಳಿ ಭಾಷೆಯ ಸೊಗಡನ್ನೂ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
'ಅಂಗಳದಲ್ಲಾಡುವ ಬೆಳಕಿಗೆ ಮೈ ತುಂಬ ನೋವು' ಎಂಬ ಕಾವ್ಯಾತ್ಮಕ ಶೈಲಿಯ, ಚಿತ್ತಾಕರ್ಷಕ ತಲೆ ಬರಹದಡಿ ಎಸ್.ಎಫ್. ಯೋಗಪ್ಪನವರ್ ಬರೆದ ಮುನ್ನುಡಿಯು ಸಂಕಲನದಲ್ಲಿರುವ ಕಥೆಗಳ ಸಣ್ಣ ಪರಿಚಯವನ್ನು ಮಾಡಿಸುತ್ತದೆ. 'ಮಿಟುಕಲಾಡಿ ಅನುಭವಗಳು ವೈಯಾರ ತೋರುತ್ತಾ ಮೋಜು ನೋಡುತ್ತಲೇ ಇರಲಿ' ಎಂಬ ತಲೆಬರಹದಡಿ, ಕಂಡದ್ಧು, ದಕ್ಕಿದ್ದು, ಅನುಭವಿಸಿದ್ದು ಬಿಟ್ಟೂ ಬಿಡದೆ ಕಾಡಿದ್ದನ್ನು ಕತೆಯಾಗಿಸಿದ ವಿಷಯ ಗಳನ್ನು ಹೃದಯ ಸ್ಪರ್ಶಿಯಾಗಿ ಹೇಳುತ್ತಾರೆ. ಹೀಗೆ ತಮ್ಮ ಮನದ ಮಾತುಗಳನ್ನು ಒಂದೊಂದಾಗಿ ನಮ್ಮ ಮುಂದೆ ಬಿಚ್ಚಿಡುತ್ತಾ, ಕಾವ್ಯಕ್ಕಿಂತ ಗದ್ಯದ ಕಡೆಗೆ ಹೆಚ್ಚಿನ ಒತ್ತನ್ನು ನೀಡಿ, ಕತೆಯನ್ನೂ ಕಾವ್ಯದ ನಡಿಗೆಯಲ್ಲಿ ಹೆಜ್ಜೆ ಹಾಕಿಸುವಲ್ಲಿ ಯಶಸ್ವಿಯಾಗಿದ್ಧಾರೆ.
ಇಲ್ಲಿಯ ಪ್ರತಿ ಕಥೆಗಳಿಗೂ ಚಿತ್ರಗಳನ್ನು ಅಳವಡಿಸಲಾಗಿದೆ.
ಇದರಲ್ಲಿ ಒಟ್ಟು 6 ಕಥೆಗಳಿದ್ದು , ಎಲ್ಲವೂ ಕಥಾ ವಸ್ತುಗಳಿಂದ ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಈ ಕಥೆಗಳೆಲ್ಲವೂ ಆಸಕ್ತಿ ಮೂಡಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಅನಿರೀಕ್ಷಿತ ತಿರುವುಗಳೊಂದಿಗೆ ಮುಕ್ತಾಯಗೊಳ್ಳುವುದನ್ನೂ ಕಾಣಬಹುದು. ಕತೆಗಳಲ್ಲಿ ಕೆಲವೊಂದು ಕಾವ್ಯಾತೊಮಕವಾದ, ಹೃದಯಸ್ಪರ್ಶಿ ಸಾಲುಗಳು ಮನವನ್ನು ತಟ್ಟುತ್ತವೆ. ಇಲ್ಲಿ ಎಲ್ಲ ಪಾತ್ರಗಳೂ ಗ್ರಾಮ್ಯ ಭಾಷೆಯನ್ನೇ ಬಳಸಿರುವುದು ಸಹಜವಾಗಿದೆ.
ಇಲ್ಲಿನ 'ಪೆಪ್ಪರುಮೆಂಟು' ಕತೆಯಲ್ಲಿ ಬಾಲ್ಯದ ಚಿತ್ರಣ, ಹಸಿವಿನ, ಬಡತನದ ತೀವ್ರತೆ, ಬಯಸಿದ್ದನ್ನು ಪಡೆದುಕೊಳ್ಳಲಾಗದ ನಿರಾಶೆ, ಪೆಪ್ಪರಮೆಂಟನ್ನು ಕದಿಯಲು ಹೋದಾಗ ನಡೆಯುವ ದುರಂತವನ್ನು 'ಉರಿವ ಕೆನ್ನಾಲಿಗೆಗೆ ರಕ್ತದ ರುಚಿಯೂ ಸೇರಿತು' ಎಂದು ಒಂದೇ ಮಾತಿನಲ್ಲಿ ವಿವರಿಸುತ್ತಾರೆ. 'ದೇವರಾಟ' ಕಥೆಯಲ್ಲಿ ಮಕ್ಕಳ ಸ್ವಾರ್ಥ ಮನೋಭಾವ, 'ಕತ್ತಲೆಯಾಚೆ' ಕಥೆಯಲ್ಲಿ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಹೆಣ್ಣೊಬ್ಬಳು ತಾಯಿಯಾಗದಿರುವಾಗ ಗಂಡ, ಆತನ ಮನೆಯವರು ಕೊಡುವ ಹಿಂಸೆ, ಚುಚ್ಚು ಮಾತುಗಳು, ಅನುಭವಿಸುವ ಕಷ್ಟಗಳು, ವಿಚಿತ್ರ ಸಂದರ್ಭದಲ್ಲಿ ಆಕೆ ಗರ್ಭಿಣಿಯಾದಾಗ ಅನಿವಾರ್ಯವಾಗಿ ಆಕೆಯನ್ನು ಸ್ವೀಕರಿಸುವ ಸನ್ನಿವೇಶಗಳನ್ನು ಹೇಳುವ ಪ್ರಯತ್ನ ಮಾಡುತ್ತಾರೆ. ಒಂದು ಕನಸಿನ ಸುತ್ತ ನಡೆಯುವ ಆಲೋಚನೆಗಳುನ್ನು 'ಮನಸಿನ ವ್ಯಾಪಾರ'ದಲ್ಲಿ ಹೇಳಿದ್ಧಾರೆ. 'ಮಲ್ಲಿಗೆ ಹೂವಿನ ಸಖ' ಕಥೆಯಲ್ಲಿ ಹುಡುಗನಿಗೆ ಬಾಲ್ಯದಿಂದಲೇ ಮಲ್ಲಿಗೆಯೊಂದಿಗೆ ಬೆಳೆದ ಸಖ್ಯ. ಕೊನೆಗೆ ಅದು ಅವನ ಬಾಳಿನ ದುರಂತಕ್ಕೆ ಕಾರಣವಾದ ಪರಿ, ಇದೊಂದು ಸಮಸ್ಯೆ ತುಂಬ ವಿಚಿತ್ರವಾಗಿದ್ದು ,ನಮ್ಮ ಮುಂದೆ ತೆರೆದಿಡುತ್ತಾರೆ. 'ಕದ್ಧು ನೋಡುವ ಚಂದಿರ' ಕಥೆಯಲ್ಲಿ ರಾತ್ರಿಯಲ್ಲಿ ಚಂದಿರ ಭುವಿಗಿಳಿದು ಬರುವುದು, ಊರೊಳಗೆ ಸುತ್ತಾಡುವುದು, ಬೆಳಿಕಿನ ಕಣ್ಣಿಗೆ ಅಗೋಚರವಾಗಿರುವ ಸಂಗತಿಗಳು ಚಂದಿರನ ಗಮನಕ್ಕೆ ಬರುವಂಥದ್ದು, ಹೀಗೆ ಹಲವಾರು ವಿಷಯಗಳನ್ನಿಟ್ಟುಕೊಂಡು ತನ್ನದೇ ಶೈಲಿಯಲ್ಲಿ ಮನಸ್ಸಿಗೆ ನಾಟುವಂತೆ ಲೇಖಕರು ಕಥೆಗಳನ್ನು ಬರೆಯುತ್ತಾರೆ. ಒಟ್ಟಾರೆಯಾಗಿ ಇಲ್ಲಿಯ ಕಥೆಗಳೆಲ್ಲವೂ ಚೆನ್ನಾಗಿವೆ. ಕೆಲವೊಂದು ಕಥೆಗಳು ಮನದಲ್ಲಿ ನಿಂತು ಬಿಡುತ್ತವೆ.
ವಿಮರ್ಶಾ ಬರಹ: ಚೇತನಾ ಕುಂಬ್ಳೆ
FEEDBACK: samarasasudhi@gmail.com




