HEALTH TIPS

ಮಂಗಳೂರಲ್ಲಿ ಪತ್ರಿಕಾ ದಿನಾಚರಣೆ- ಪತ್ರಕರ್ತರ ಜಿಲ್ಲಾ ಸಮ್ಮೇಳನ ಉದ್ಘಾಟನೆ- ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಹಿರಿದು- ಪಿ.ಬಿ.ಆಚಾರ್ಯ

 

        ಮಂಗಳೂರು: ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ  ಪತ್ರಕರ್ತರ ಪಾತ್ರ ಬಲು ಹಿರಿದಾದುದು ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ
        ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಿನ್ನೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
   ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ ನೀಡುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಬಲು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.  ಪತ್ರಕರ್ತರು ಸೇರಿದಂತೆ ದೇಶದ ಅಭಿವೃದ್ಧಿಗೆ ಇಲ್ಲಿನ ಜನರು ಕೈಜೋಡಿಸಿದ್ದಾರೆ. ಮಾಧ್ಯಮಗಳು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೂ ಗಮನ ಹರಿಸಬೇಕಾಗಿದೆ. ಈ ರಾಜ್ಯಗಳಲ್ಲಿರುವ ಅಪಾರ ಸಂಪನ್ಮೂಲಗಳನ್ನು ಬಳಸಿ  ಈ ರಾಜ್ಯಗಳ ಆರ್ಥಿಕ ಅಭಿವೃದ್ಧಿಗೆ ಮತ್ತು ದೇಶದ ಬೆಳವಣಿಗೆಗೆ ಬಳಸುವ ಪ್ರಯತ್ನ ನಡೆಸಬೇಕಾಗಿದೆ ಎಂದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
     ಪತ್ರಕರ್ತರಿಗೆ ನಿವೇಶನ ನೀಡಲು ಸೂಚನೆ: ಸಚಿವ ಖಾದರ್
ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ನಿವೇಶನ ನೀಡಬೇಕು ಎಂಬ ನೆಲೆಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ಸ್ಥಳ ಗುರುತಿಸಿ ಪತ್ರಕರ್ತರಿಗೆ ನೀಡಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ತಹಶಿಲ್ದಾರ್ ಗಳಿಗೆ ಆದೇಶ ನೀಡಲಾಗಿದೆ ಎಂದು ಮುಖ್ಯ ಅತಿಥಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಪತ್ರಿಕೆಗಳನ್ನು ಓದುವಾಗ ಅದು ಜನರಿಗೆ ಟೆನ್ಸನ್ ಸೃಷ್ಠಿಸುವಂತೆ ಇರಬಾರದು. ಬದಲಾಗಿ ಜನರ ಟೆನ್ಸನ್ ಹೋಗಲಾಡಿಸುವಂತೆ ಇರಬೇಕು. ಅದಕ್ಕಾಗಿ ಧನಾತ್ಮಕ ಸುದ್ದಿಗಳು ವೈಭವೀಕರಣವಾಗಬೇಕು ಎಂದರು. ಮನಸ್ಸು, ಹೃದಯ ಮತ್ತು ಸಮಾಜವು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಪತ್ರಕರ್ತರ ಮೇಲೆ ಇದೆ. ಹಿರಿಯರ ಕಲ್ಪನೆಯ ನಾಡನ್ನು ಕಟ್ಟಲು ಮತ್ತು ನಮ್ಮ ಹಿರಿಮೆಯನ್ನು ಎತ್ತಿ ಹಿಡಿಯಲು ಪತ್ರಕರ್ತರು ಮುಂಚೂಣಿಯಲ್ಲಿರಬೇಕು ಎಂದು ಹೇಳಿದರು.
     ಸಮ್ಮೇಳನ ಸ್ಮರಣ ಸಂಚಿಕೆ 'ಸಮಾಚಾರ'ಬಿಡುಗಡೆ ಮಾಡಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸಂವಿಧಾನದ ಪ್ರಮುಖ ಅಂಗವಾದ ಪತ್ರಿಕಾರಂಗ ಸಮಾಜದ ಏಳಿಗೆಗೆ ನಿರಂತರ ಪ್ರಯತ್ನ ನಡೆಸುತಿದೆ. ಆಡಳಿತ ಯಂತ್ರವನ್ನು ಎಚ್ಚರಿಸಿ ಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪತ್ರಕರ್ತರು ಯೋಧರಂತೆ ಕೆಲಸ ಮಾಡುತಿದೆ ಎಂದು ಹೇಳಿದರು.
ಬ್ರ್ಯಾಂಡ್ ಮಂಗಳೂರು, ಗ್ರಾಮ ವಾಸ್ತವ್ಯ ಎಂಬುದು ದೊಡ್ಡ ಕಲ್ಪನೆ. ಬ್ರ್ಯಾಂಡ್ ಮಂಗಳೂರು ಕುರಿತು ಎಲ್ಲರಲ್ಲೂ ಕೆಲವೊಂದು ಕಲ್ಪನೆಗಳಿವೆ. ಅದರ ಸಾಕಾರಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
   ಗಿಡಗಳನ್ನು ವಿತರಿಸುವ ಮೂಲಕ 'ಹಸಿರು ಉಸಿರು' ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಪ್ರಜಾಪ್ರಭುತ್ವದ ಬೆಳವಣಿಗೆಗೆ ಪತ್ರಿಕಾ ಕ್ಷೇತ್ರದ ಜವಾಬ್ದಾರಿ ದೊಡ್ಡದಿದೆ. ನಾಡನ್ನು ಪ್ಲಾಸ್ಟಿಕ್ ಮುಕ್ತಮಾಡುವ ಮತ್ತು ಹಸಿರು ಪರಿಸರವನ್ನು ಸೃಷ್ಠಿಸುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
   ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಪತ್ರಕರ್ತರಿಗೆ ಉಚಿತ ಆರೋಗ್ಯ ಸೇವೆ ನೀಡುವ ಹೆಲ್ತ್ ಕಾರ್ಡ್ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ ಎಂದರು.
   ಸಮ್ಮೇಳನದ ಕುರಿತು ಪ್ರಸ್ತಾವನೆಗೈದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ 44 ವರ್ಷದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಿದೆ. ಪತ್ರಕರ್ತರು ಸರಕಾರದ  ಮತ್ತು ಸಮಾಜದ ಕೊಂಡಿಯಾಗಿ ಕೆಲಸ ಮಾಡಬೇಕು ಎಂಬ ನೆಲೆಯಲ್ಲಿ ಪತ್ರಕರ್ತರ ಸಂಘ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪತ್ರಕರ್ತರಲ್ಲಿ ಇನ್ನಷ್ಟು ಉತ್ಸಾಹ  ಮತ್ತು ಜಾಗೃತಿ ಮೂಡಿಸುವ ದೃಷ್ಠಿಯಿಂದ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
    ಕವಿತಾ ಪಿ.ಬಿ.ಆಚಾರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್,
ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು.
      ಸಮ್ಮೇಳನದ ಸಂಚಾಲಕ ಹಾಗು ರಾಜ್ಯ ಕಾರ್ಯಕಾರಿಣಿ ಸದಸ್ಯ  ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
          ಕುತ್ಲೂರು ಶಾಲೆಗೆ ಕಂಪ್ಯೂಟರ್ ಕೊಡುಗೆ:
     ಪತ್ರಕರ್ತರ ಸಂಘದ ವತಿಯಿಂದ ಕಳೆದ ಡಿಸೆಂಬರ್ ತಿಂಗಳಲ್ಲಿ ಗ್ರಾಮ ವಾಸ್ತವ್ಯ ನಡೆಸಿದ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆಗೆ ಮಂಗಳೂರು ವಿಶೇಷ ಆರ್ಥಿಕ ವಲಯದ ವತಿಯಿಂದ ನೀಡಿದ ಕಂಪ್ಯೂಟರ್ ನ ದಾಖಲೆಗಳನ್ನು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಕುತ್ಲೂರು ಶಾಲೆಯ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು. ಎಂಎಝಡ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಮಚಂದ್ರ ಭಂಡಾರ್ಕರ್ ಉಪಸ್ಥಿತರಿದ್ದರು.
           ಸತ್ಯ ಸುದ್ದಿಯೇ ಪತ್ರಿಕೆಗೆ ಜೀವಾಳ
    *ಪತ್ರಿಕಾ ಮಾಧ್ಯಮ*ದ ಕುರಿತು ಹಿರಿಯ ಪತ್ರಕರ್ತ ಅಳದಂಗಡಿ ಕೃಷ್ಣ ಭಟ್ ಮಾತನಾಡಿ, ನವ ಮಾಧ್ಯಮಗಳ ಸೃಷ್ಟಿಯಾದ ಬಳಿಕ, ಜಗತ್ತಿನ ಸುದ್ದಿಯನ್ನು ಮೊಬಲ್ ಮೂಲಕ ವೀಕ್ಷಿಸಲು ಸಾಧ್ಯವಾದ ಆನಂತರ ಪತ್ರಿಕಾ ಮಾಧ್ಯಮಕ್ಕೆ ಅವಕಾಶ ಕಡಿಮೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ, ಕಳೆದ 15 ವರ್ಷಗಳಿಂದ ನಿರಂತರವಾಗಿ ಪತ್ರಿಕೆಗಳ ಪ್ರಸರಣ ಸಂಖ್ಯೆ ಏರುತ್ತಿರುವುದು ಪತ್ರಿಕಾ ಮಾಧ್ಯಮಗಳಲ್ಲಿ ಇನ್ನಷ್ಟು ಭರವಸೆ ಸೃಷ್ಟಿಯಾಗಲು ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಸತ್ಯ ಮತ್ತು ನೈಜ ಸುದ್ದಿಯನ್ನು ಪತ್ರಿಕೆಗಳು ಜನರಿಗೆ ನೀಡುತ್ತಿರುವುದು ಎಂದು ಅಭಿಪ್ರಾಯಪಟ್ಟರು. ಪತ್ರಕರ್ತನಾದವನು ತನ್ನನ್ನು ಸಾಮಾಜಿಕ ಸಮಸ್ಯೆಗಳಿಗೆ ತೆರೆದುಕೊಳ್ಳುವ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದವರು ಆಶಿಸಿದರು.
     ಸಾಮಾಜಿಕ ಕೆಲಸಕ್ಕೆ ನಮ ಮಾಧ್ಯಮ ಬಳಕೆ
*ನವ ಮಾಧ್ಯಮ* ಕುರಿತು ವಿಷಯ ಮಂಡಿಸಿದ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರಸ್ತುತ ಜಗತ್ತಿನ ಹಲವಾರು ಸುದ್ದಿಗಳನ್ನು ತಿಳಿದುಕೊಳ್ಳಲು ನವ ಮಾಧ್ಯಮಗಳು ನೆರವಾಗುತ್ತವೆ. ಜಗತ್ತಿನ ಪ್ರಮುಖ ವ್ಯಕ್ತಿಗಳ ಸಂದೇಶಗಳು, ನಿರ್ಧಾರಗಳು ಕ್ಷಣ ಮಾತ್ರದಲ್ಲಿ ಟ್ವಿಟರ್ ಮುಖಾಂತರ ಸಿಗುತ್ತವೆ ಎಂದಾದರೆ ನವ ಮಾಧ್ಯಮಗಳ ಅಗತ್ಯ ಎಂತಹುದು ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.
     ಸಾಮಾಜಿಕ ಕೆಲಸಗಳನ್ನು ಮಾಡಲು, ಜನರನ್ನು ಒಗ್ಗೂಡಿಸಲು ನವ ಮಾಧ್ಯಮಗಳ ಬಳಕೆ ಹೆಚ್ಚುತ್ತಿದೆ. ಆದರೆ, ಉತ್ತಮ ವಿಚಾರವನ್ನು ಪಸರಿಸಲಷ್ಟೇ ಸಾಮಾಜಿಕ ತಾಣಗಳನ್ನು ಬಳಸಿಕೊಂಡರೆ ಬಹುಶಃ ಈಗಿನ ಯುಗದಲ್ಲಿ ಇದೊಂದು ಅತ್ಯುತ್ತಮ ಮಾಧ್ಯಮವಾಗಿ ರೂಪುತಳೆಯಬಲ್ಲದು ಎಂದು ಅಭಿಪ್ರಾಯಿಸಿದರು.
ಸಮ್ಮೇಳನಾಧ್ಯಕ್ಷರಾದ ಹಿರಿಯ ಪತ್ರಕರ್ತ ಈಶ್ವರ ದೈತೋಟ ಉಪಸ್ಥಿತರಿದ್ದರು. ಪತ್ರಕರ್ತರಾದ ಆತ್ಮಭೂಷಣ್ ಭಟ್ ಸ್ವಾಗತಿಸಿದರು. ಹರೀಶ್ ಮೋಟುಕಾನ ವಂದಿಸಿದರು. ಚೇತನ್ ಪಿಲಿಕುಳ ನಿರೂಪಿಸಿದರು.
                         ದೃಶ್ಯ ಮಾಧ್ಯಮಕ್ಕೆ ಸುವರ್ಣ ಸಂಭ್ರಮ:
      ದೃಶ್ಯ ಮಾಧ್ಯವದ ಆರಂಭ 1959ರಲ್ಲಾಯಿತು. ಈ ವರ್ಷ ದೃಶ್ಯ ಮಾಧ್ಯಮಕ್ಕೆ ಸುವರ್ಣ ಸಂಭ್ರಮ ವರ್ಷ. ಆರಂಭದ ಸುಮಾರು 15 ವರ್ಷ ಕಾಲ ದೃಶ್ಯ ಮಾಧ್ಯಮದ ಪ್ರಭಾವ ಅಷ್ಟೇನು ಇರಲಿಲ್ಲ. ಆದರೆ, ಜಗತ್ತು ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ ದೃಶ್ಯ ಮಾಧ್ಯಮಗಳ ಜನಪ್ರಿಯತೆ ಹೆಚ್ಚಾಯಿತು ಎಂದು ಪ್ರೊ| ಜೋಸೆಫಿನ್ ಜೋಸೆಫ್ ಹೇಳಿದರು.
        ದೇಶೀಯತೆ ಬೆಳೆಸುವಲ್ಲಿ ಆಕಾಶವಾಣಿ:
*ಆಕಾಶವಾಣಿ* ಕುರಿತು ವಿಷಯ ಮಂಡಿಸಿದ ಮಂಗಳೂರು ಆಕಾಶವಾಣಿ ನಿವೃತ್ತ ನಿರ್ದೇಶಕ ಡಾ| ವಸಂತಕುಮಾರ್ ಪೆರ್ಲ, ಆಕಾಶವಾಣಿ ಮಾಧ್ಯಮ 92 ವಸಂತಗಳನ್ನು ಪೂರೈಸಿದ ಹೆಮ್ಮೆಯೊಂದಿಗೆ ಜನರ ಮಾಧ್ಯಮವಾಗಿ ಸಾಗುತ್ತಿದೆ. ಭಾರತದ ಸಂಸ್ಕೃತಿ, ದೇಶೀಯತೆ, ಕಲೆ, ಸಾಹಿತ್ಯ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳ ಸವಾರ್ಂಗಿಣ ಅಭ್ಯುದಯ-ಪರಿಚಯ ಮಾಡುವ ನಿಟ್ಟಿನಲ್ಲಿ ಆಕಾಶವಾಣಿಯ ಕೊಡುಗೆ ಅಪಾರ ಎಂದು ವಿಶ್ಲೇಷಿಸಿದರು.
      ಕಲೆ, ಸಂಸ್ಕೃತಿ, ಕೃಷಿ ಪದ್ಧತಿ ಮುಂತಾದವುಗಳನ್ನು ಉಳಿಸುವ ನಿಟ್ಟಿನಲ್ಲಿ ಮಾಧ್ಯಮಗಳಿಗೆ ಬಹುದೊಡ್ಡ ಹೊಣೆಗಾರಿಕೆ ಇದೆ. ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಕಾಶವಾಣಿಯ ಪಾತ್ರ ಹಿರಿದು. ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಗೂ ಆಕಾಶವಾಣಿ ಮಹತ್ತರ ಕೊಡುಗೆ ನೀಡಿದೆ ಎಂದವರು ಹೇಳಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries