ಬದಿಯಡ್ಕ : ನೂರಾರು ವರ್ಷಗಳ ಇತಿಹಾಸವುಳ್ಳ ನೀರ್ಚಾಲು ಮದಕವನ್ನು ಅಭಿವೃದ್ಧಿಪಡಿಸಲು ಕೇಂದ್ರ ಜಲಶಕ್ತಿ ಅಭಿಯಾನ, ವ್ಯಾಪಕ ಯೋಜನೆಗಳೊಂದಿಗೆ ಕ್ರಮಗಳು ಜಾರಿಗೊಳ್ಳುತ್ತಿದೆ. ಈ ಪ್ರದೇಶದ ಅಂತರ್ಜಲ ಸಮೃದ್ಧಿ, ಕುಡಿಯುವ ನೀರು, ಕೃಷಿಗೆ ನೀರುಣಿಸುವ ಬೃಹತ್ ಜಲ ಮರುಪೂರಣ ಯೋಜನೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ನೀರ್ಚಾಲು ಮದಕವನ್ನು ಶತಮಾನದ ಹಿಂದೆ ಕೃಷಿ ಅಗತ್ಯಕ್ಕಾಗಿ ನಿರ್ಮಿಸಲಾಗಿತ್ತೆನ್ನಲಾಗಿದೆ. ಈ ಪ್ರದೇಶದ ಜಲಸಂಪನ್ಮೂಲಗಳನ್ನು ಹೆಚ್ಚಿಸುವುದರಲ್ಲಿ ಈ ಮದಕ ಪ್ರಯೋಜನಕಾರಿಯಾಗಿದೆ. ಆದರೆ ಕಳೆದಕೆಲವು ದಶಕಗಳಿಂದ ಈ ಮದಕ ಅವನತಿಗೊಳ್ಳುವ ಭೀತಿಗೊಳಗಾಗಿತ್ತು. ಇಲ್ಲಿಯ ಮದಕದ ಅವನತಿಯಿಂದಾಗಿ ಕೆಲವು ವರ್ಷಗಳಿಂದ ನೀರ್ಚಾಲು ಪ್ರದೇಶದ ಸಾವಿರಾರು ಹೆಕ್ಟೇರ್ ಭೂ ಪ್ರದೇಶದಲ್ಲಿ ನೀರಿನ ಕ್ಷಾಮ ತಲೆದೋರಿತ್ತು. ಮದಕದ ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗುವುದನ್ನು ಅರಿತು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಎಂ.ಎಚ್.ಜನಾರ್ದನ ಎಂಬವರ ಅಹರ್ನಿಶಿ ಪ್ರಯತ್ನದ ಫಲವಾಗಿ ಇದೀಗ ಇದರ ಅಭಿವೃದ್ಧಿಗೆ ನಿರ್ಧರಿಸಲಾಗಿದೆ.
2011ರಲ್ಲಿ ಆರಂಭಿಸಿ ಆರ್‍ಐಡಿಎಫ್ ಸಹಸ್ರ ಸರೋವರ ಯೋಜನೆ ಬಳಿಕ ಜಾರಿಗೊಳ್ಳದೆ ಸ್ತಬ್ದವಾಗಿತ್ತು. ಆದರೆ ಇದೀಗ ಕೇಂದ್ರ ಜಲ ಶಕ್ತಿ ಅಭಿಯಾನ ಸಹಿತ ಸರ್ಕಾರದ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮರುಜೀವ ನೀಡಲು ನಿರ್ಧರಿಸಲಾಗಿದೆ. ನೀರ್ಚಾಲು ಮದಕ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ನೀರ್ಚಾಲು, ಓಣಿಯಡ್ಕ, ಪುದುಕೋಳಿ ಭತ್ತದ ಕೃಷಿ ಬಯಲುಗಳಿದ್ದು ದಶಕಗಳ ಹಿಂದೆ ಭಾರೀ ಪ್ರಮಾಣದಲ್ಲಿ ಭತ್ತದ ಬೆಳೆ ನಡೆಯುತ್ತಿತ್ತು. ಆದರೆ ನೀರಿನ ಅಭಾವ ಮತ್ತು ಇದರ ಸಮಸ್ಯೆಗಳಿಂದ ಭತ್ತದ ಬೇಸಾಯ ಮೂಲೆಗುಂಪಾಗಿದೆ. ಈ ಮದಕವನ್ನು ಅಭಿವೃದ್ಧಿಪಡಿಸಿದಲ್ಲಿ ಕುಡಿಯಲು ಕೃಷಿಗೆ ಅಗತ್ಯಕ್ಕೆ ನೀರಿನ ಸಮಸ್ಯೆ ಉಂಟಾಗದೆಂದು ನಿರೀಕ್ಷಿಸಲಾಗಿದೆ. ಈ ಮದಕದ ಅಭಿವೃದ್ಧಿಗೆ ಕ್ರಮಕೈಗೊಂಡ ಅಧಿಕಾರಿಗಳನ್ನು ಬದಿಯಡ್ಕ ಕೃಷಿ ಅಭಿವೃದ್ಧಿ ಸಮಿತಿ, ಪಂಚಾಯತಿ ಯೋಜನಾ ಸಮಿತಿ ಸದಸ್ಯ ಎಂ.ಎಚ್. ಜನಾರ್ಧನ ಅಭಿನಂದಿಸಿದ್ದಾರೆ.
ಖಂಡಿಗೆಯವರ ಕೊಡುಗೆಗಳಲ್ಲಿ ಇದೂ ಒಂದು:
ಕುಗ್ರಾಮವಾಗಿದ್ದ ನೀರ್ಚಾಲು ಪ್ರದೇಶದ ಸಮಗ್ರ ಅಭಿವೃದ್ದಿಯ ನಕಾಶೆಯಲ್ಲಿ ಖಂಡಿಗೆ ಮನೆತನದ ಕೊಡುಗೆ ಮಹತ್ತರವಾದುದು. ಸಂಸ್ಕøತ ವಿದ್ಯಾಲಯ, ಸಹಕಾರಿ ಸಂಘ ಸಹಿತ ವಿವಿಧ ವಲಯಗಳಲ್ಲಿ ಶತಮಾನಗಳಿಂದ ಈ ಮನೆತನದ ಕೊಡುಗೆಗಳಿಂದ ಇಂದು ಜಿಲ್ಲೆಯ ಪ್ರಭಾವಿ ಪ್ರದೇಶವೆನಿಸಿದೆ. ಖಂಡಿಗೆ ಮನೆತನದವರ ಕೊಡುಗೆಗಳಲ್ಲಿ ನೀರ್ಚಾಲು ಮದಕವೂ ಒಂದೆಂಬುದು ವಿಶೇಷ. ಹೆಕ್ಟೇರ್ ಗಟ್ಟಲೆ ಗದ್ದೆಗಳಲ್ಲಿ ಭತ್ತ ಸಹಿತ ಉಪ ಬೆಳೆಗಳ ಕೃಷಿಗಾಗಿ ಈ ಮದಕ ನಿರ್ಮಿಸಲಾಗಿತ್ತು. ಇದೀಗ ನೆನೆಗುದಿಗೆ ಬಿದ್ದು, ಅವನತಿಯಲ್ಲಿದ್ದ ಮದಕದ ಅಭಿವೃದ್ದಿಗೆ ಮತ್ತೆ ಚಾಲನೆ ದೊರಕುವುದರೊಂದಿಗೆ ಹಿರಿಯ ತಲೆಮಾರೊಂದರ ಸಾಧನೆ, ಕನಸುಗಳನ್ನು ಸಾಕಾರಗೊಳಿಸಿದ ಕೃತಾರ್ಥತೆ ನೀರ್ಚಾಲಿಗೆ ಲಭ್ಯವಾಗಲಿದೆ.
ಅಭಿಮತ:
1) ನೀರ್ಚಾಲು ಮದಕದ ಪುನರುಜ್ಜೀವನಕ್ಕೆ ಕೇಂದ್ರ ಜಲಶಕ್ತಿ ಅಭಿಯಾನ್ ಯೋಜನೆಯ ಮೂಲಕ ರೂಪುರೇಖೆ ಸಿದ್ದಪಡಿಸುತ್ತಿರುವುದು ಶ್ಲಾಘನೀಯವಾಗಿದೆ. ಮದಕ ನಿರ್ಮಾಣದ ನಿಟ್ಟಿನಲ್ಲಿ ಯೋಜನೆಯ ಜೊತೆಗೆ ಗ್ರಾ.ಪಂ. ಅಗತ್ಯದ ನೆರವನ್ನು ನೀಡಲು ಸಿದ್ದವಿದೆ. ಗ್ರಾ.ಪಂ. ವ್ಯಾಪ್ತಿಗೆ ಮಾದರಿಯಾಗುವಂತೆ ನೀರ್ಚಾಲು ಮದಕವನ್ನು ಅಭಿವೃದ್ದಿಪಡಿಸಿದಲ್ಲಿ ಇತರೆಡೆಗಳಿಗೆ ಪೂರಕವಾಗುವುದು.
ಕೆ.ಎನ್.ಕೃಷ್ಣ ಭಟ್.
ಅಧ್ಯಕ್ಷರು. ಬದಿಯಡ್ಕ ಗ್ರಾ.ಪಂ.
................................................................................................................................................
ಕೋಟ್ಸ್: ಶತಮಾನಗಳ ಇತಿಹಾಸವಿರುವ ನೀರ್ಚಾಲು ಮದಕವನ್ನು ಅಭಿವೃದ್ದಿಗೊಳಿಸಿ ಪುನರುಜ್ಜೀವನ ಗೊಳಿಸುತ್ತಿರುವುದು ಉತ್ತಮ ಯೋಜನೆಯಾಗಿದೆ. 2011ರಲ್ಲೇ ಈ ಯೋಜನೆಯ ಬಗ್ಗೆ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಮಗ್ರ ವಿವರಗಳ ಮನವಿಯನ್ನು ತಾನು ನೀಡಿದ್ದೆನು. ಯೋಜನೆಯ ಜಾರಿಗೆ ಕ್ರಮಗಳು ಉಂಟಾಗಿದ್ದರೂ, ಅಂದು ಸ್ಥಳೀಯ ಕೆಲವು ಸಮಸ್ಯೆಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಇದೀಗ ಕೇಂದ್ರ ಸರ್ಕಾರದ ವಿಶೇಷ ಯೋಜನೆಯ ಮೂಲಕ ಮರು ಚಾಲನೆಗೊಂಡಿರುವುದು ಭರವಸೆ ಮೂಡಿಸಿದೆ. ಸವಾಲು, ಸಮಸ್ಯೆಗಳಿದ್ದರೂ ಅವುಗಳಿಗೆ ಅಗತ್ಯದ ಪರಿಹಾರ ಕಾಣುವ ಮೂಲಕ ಮದಕ ಪುನರ್ ನಿರ್ಮಾಣ ಸಾಧ್ಯವಾಗಬೇಕು. ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ಪ್ರಯೋಜನವಾಗುವ ಈ ಯೋಜನೆಗೆ ಸಾರ್ವಜನಿಕರು ಕೈಜೋಡಿಸಬೇಕು.
ಎಂ.ಎಚ್.ಜನಾರ್ಧನ.
ಕೃಷಿ ಅಭಿವೃದ್ದಿ ಮತ್ತು ಗ್ರಾ.ಪಂ. ಅಭಿವೃದ್ದಿ ಸಮಿತಿ ಸದಸ್ಯ. ಮಲ್ಲಡ್ಕ.ನೀರ್ಚಾಲು



