ಮಂಜೇಶ್ವರ: ಕೃಷಿ ವಲಯಕ್ಕೆ ಪುನಶ್ಚೇತನ ಒದಗಿಸುವ ನಿಟ್ಟಿನಲ್ಲಿ ವರ್ಕಾಡಿ ಗ್ರಾಮಪಂಚಾಯತಿಯಲ್ಲಿ ವಾರ್ಡ್ ಮಟ್ಟದಲ್ಲಿ ನಡೆಸಲಾದ ಕೃಷಿಕ ಸಭೆಗಳು ಸಮಾರೋಪಗೊಂಡಿವೆ.
ಬಾಕ್ರಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಂಬಂಧ ಸೋಮವಾರ ನಡೆದ ಸಭಾ ಕಾರ್ಯಕ್ರಮವನ್ನು ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ.ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯೆ ಮೈಮೂನಾ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಎಂ.ಷಫೀಕ್ ಮತ್ತು ಕೃಷಿ ಸಹಾಯಕ ಪಿ.ವಿ.ಮುರಳಿ ಕೃಷ್ಣದಾಸ್ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಅಡಕೆ ಕೃಷಿಯ ಬೆಳೆ ಪೋಷಣೆ ಕುರಿತು ವರ್ಕಾಡಿ ಕೆ.ವಿ.ಕೆ. ವಿಸ್ತರಣಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಅನೂಪ್ ತರಗತಿ ನಡೆಸಿದರು. ಆರೋಗ್ಯ ಇನ್ಸ್ ಪೆಕ್ಟರ್ ಸುರೇಶ್ ಮಳೆಗಾಲದ ರೋಗಗಳ ಬಗ್ಗೆ ಕೃಷಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಮೂಡಿಸಿದರು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಬಿ.ಅಬೂಬಕ್ಕರ್, ಶ್ರೀನಿವಾಸ ರಾವ್, ಅನ್ವರ್, ರಮೇಶ್ ಬಿ., ವಿಠಲನಾಯಕ್, ನೇಮಿರಾಜ್ ಶೆಟ್ಟಿ, ವಸಂತ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

