HEALTH TIPS

ಆದೂರು ಕಲ್ಲುರ್ಟಿ-ಕಲ್ಕುಡ ದೈವದ ನೇಮೋತ್ಸವ ಆರಂಭ: ನೋಂದಾವಣೆಗೆ ಕಾಯಬೇಕು ವರ್ಷ-ಆಷಾಢದಲ್ಲಿ ಮಾತ್ರ ಇಲ್ಲಿ ನೇಮ


        ಮುಳ್ಳೇರಿಯ:  ಆಷಾಢ ಮಾಸ ಪೂರ್ಣ ಆದೂರು ಶ್ರೀ ಕಲ್ಲುರ್ಟಿ-ಕಲ್ಕುಡ ದೈವಸ್ಥಾನದಲ್ಲಿ  ಕಲ್ಲುರ್ಟಿ ದೈವದ ಕೋಲದ ಸಂಭ್ರಮ. ಆಷಾಢ ಮಾಸ ಹುಟ್ಟಿಕೊಳ್ಳುತ್ತಿದ್ದಂತೆ ಮಂಗಳ ಕಾರ್ಯಗಳಿಗೆ ನಿಷೇಧ ಹೇರುತ್ತಿದ್ದರೆ, ಕಾಸರಗೋಡು ತಾಲೂಕು ಕಾರಡ್ಕ ಗ್ರಾಮ ಪಂಚಾಯಿತಿಯ ಆದೂರಿನ ಮಾರ್ಗತ್ತಾನದಲ್ಲಿ ಈ ಕ್ಷೇತ್ರದಲ್ಲಿ ಮಾತ್ರ ದೈವ ಕೋಲದ ಸಂಭ್ರಮ ಕಾಣಿಸಿಕೊಳ್ಳುತ್ತದೆ. ಒಂದು ತಿಂಗಳ ಕಾಲ ಇಲ್ಲಿ ದೈವಕೋಲ ನಡೆದು ಬರುತ್ತಿರುವುದು ವಿಶೇಷ. ಪ್ರಸ್ತುತ ವರ್ಷದ ನೇಮೋತ್ಸವಗಳು ಭಾನುವಾರದಿಂದ ವಿದ್ಯುಕ್ತವಾಗಿ ಆರಂಭಗೊಂಡಿತು. 

        ಹಿನ್ನೆಲೆ: 
 ಆದೂರು ದೈವಸ್ಥಾನಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ಕಲ್ಲುರ್ಟಿ-ಕಲ್ಕುಡ ದೈವಗಳು ಇಲ್ಲಿ ನೆಲೆಯಾಗಿದ್ದುಕೊಂಡು ಭಕ್ತರನ್ನು ಹರಸುತ್ತಿದೆ. ಆದೂರು ಗುತ್ತು ಅರವಿಂದ ರೈ ಅವರನೇತೃತ್ವದಲ್ಲಿ ನಡೆದುಬರುತ್ತಿದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ತಿಂಗಳು ಪೂರ್ತಿ ಹರಿಕೆ ಸೇವೆಯಾಗಿ ಇಲ್ಲಿ ಕೋಲಗಳು ನಡೆದುಬರುತ್ತಿದೆ. ಸೋಮವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಇಲ್ಲಿ ಕಲ್ಲುರ್ಟಿ ಕೋಲ ನಡೆಸುವುದು ವಾಡಿಕೆ. ಸೋಮವಾರ ದಿನ ದೈವಗಳಿಗೆ ಭಾರಣೆ(ದೈವಗಳ ಔತಣ)ನಿಷಿದ್ಧವಾಗಿರುವ ಹಿನ್ನೆಲೆಯಲ್ಲಿ ಈ ದಿನಗಳನ್ನು ಕೋಲ ನಡೆಸುವುದರಿಂದ ಹೊರತುಪಡಿಸಲಾಗಿದೆ. ವರ್ಷದಲ್ಲಿ 20ಕ್ಕೂ ಹೆಚ್ಚು ದೈವಕೋಲಗಳು ನಡೆದುಬರುತ್ತದೆ. ಆಷಾಡ ಮಾಸದಲ್ಲಿ ನಡೆಯುವ ದೈವ ಕೋಲಗಳು ವರ್ಷಕ್ಕೆ ಮೊದಲೇ ನೋಂದಾವಣೆಗೊಂಡಿರುತ್ತದೆ. ಆರಂಭದ ದಿನದಂದು ಗುತ್ತು ತರವಾಡು ಮನೆಯಲ್ಲಿ ಹುತ್ತರಿ ಕೋಲ ಆಯೋಜಿಸಿ, ಅನಂತರ ಭಕ್ತಾದಿಗಳ ಹರಕೆ ಕೋಲ ಕ್ರಮವಾಗಿ ನಡೆದು ಬರುತ್ತದೆ. ದಿನಕ್ಕೆ ಒಂದು ಕೋಲ ಮಾತ್ರ ನಡೆಯುವುದು ವಾಡಿಕೆ. ಬೆಳಗ್ಗೆ 9.30ಕ್ಕೆ ಆರಂಭಗೊಳ್ಳುವ ದೈವನರ್ತನ ಸೇವೆ ಮಧ್ಯಾಹ್ನ 12ರ ವೇಳೆಗೆ ಮುಕ್ತಾಯಗೊಳ್ಳುತ್ತದೆ. ಕೊನೆ ದಿವಸದಂದು ಮಾತ್ರ ಸಾಯಂಕಾಲ 4ರ ವರೆಗೂ ನರ್ತನ ಸೇವೆ ಮುಂದುವರಿಯುತ್ತದೆ.
  ಈ ವರ್ಷ ಆಷಾಢ ಕಲ್ಲುರ್ಟಿ ಸೇವೆಯು ದೈವಸ್ಥಾನದ ಪ್ರಮುಖರ ಕೌಟುಂಬಿಕ ಅಶೌಚದ ಕಾರಣ ತಡವಾಗಿ ಜು.30 ರಿಂದ ಆರಂಭಗೊಂಡಿದ್ದು, ಗುರುವಾರ ಸೇರಿ ಶುಕ್ರವಾರ ನಡೆಯಲಿರುವ ವಿಶೇಷ ಕಲ್ಲುರ್ಟಿ ಕಲ್ಕುಡ ದೈವದ ಭೂತಕೋಲದೊಂದಿಗೆ ಸಮಾರೋಪಗೊಳ್ಳಲಿದೆ. ಗುರುವಾರ ಊರ ಗ್ರಾಮಸ್ಥರು ಹರಕೆ ಹೇಳಿಕೊಂಡ ಸಮ್ಮನೊ(ವಿಶೇಷ ಸೇವೆ, ಹರಕೆ ರೂಪದಲ್ಲಿ ಸಲ್ಲಿಸುವುವ ಕ್ರಮ. ಕೋಳಿ, ಅಕ್ಕಿ, ತೆಂಗು ಹಾಗೂ ಕೋಳಿ ಪದಾರ್ಥಕ್ಕೆ ಬೇಕಾದ ಧವಸಗಳನ್ನು ಹರಕೆಯಾಗಿ ಸಲ್ಲಿಸುವುದು ಸಮ್ಮನೊ ಎಂಬ ನಂಬಿಕೆಯ ರೂಪದಲ್ಲಿ) ನಡೆಯಲಿದೆ.
            ಹೊರ ರಾಜ್ಯದಿಂದಲೂ ಭಕ್ತಾದಿಗಳು:
  ಆದೂರು ದೈವಸ್ಥಾನದಲ್ಲಿ ನಡೆಯುವ "ಆಟಿ ಕೋಲ'ಮಹೋತ್ಸವಕ್ಕೆ ಕಾಸರಗೋಡು, ಅವಿಭಜಿತ ದ.ಕ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ದೈವಕ್ಕೆ ಪಟ್ಟೆ ಸೀರೆ, ಚಿನ್ನ-ಬೆಳ್ಳಿಯ ಹೂವು, ಭಕ್ತಾದಿಗಳ ಸಂಕಲ್ಪಕ್ಕೆ ಹೊಂದಿಕೊಂಡು ಆಭರಣ, ಹಣ, ಸಮ್ಮಾನ(ಕೋಳಿ, ಉಪ್ಪು, ಮೆಣಸು, ಹುಳಿ ಸಹಿತ ಸಾಮಗ್ರಿ)ಗಳನ್ನು ಸಮರ್ಪಿಸುತ್ತಾರೆ. ಆಷಾಡ ಮಾಸದ ಕೊನೆಯ ದಿನ ನಡೆಯುವ ಕೋಲ ಸಂಭ್ರಮದಲ್ಲಿ ನೂರಾರು ಮಂದಿ ಭಾಗವಹಿಸುತ್ತಾರೆ. ಆ ದಿನದಂದು ಹರಕೆ ರೂಪದಲ್ಲಿ ಲಭಿಸಿದ ಅಕ್ಕಿಯನ್ನು ಉಪಯೋಗಿಸಿ ಕಡುಬು ಹಾಗೂ ಕೋಳಿ ಪದಾರ್ಥವನ್ನು ಭಕ್ತಾದಿಗಳಿಗೆ ಹಂಚಲಾಗುತ್ತದೆ. ವಿಶೇಷವೆಂದರೆ, ಮುಂದಿನ ವರ್ಷದ ಆಟಿ ಕೋಲಕ್ಕೆ ವರ್ಷಕ್ಕೂ ಮೊದಲು ಹೆಸರು ನೋಂದಾವಣೆಯಾಗುತ್ತಿರುವುದು ವಿಷೇಷ.ಕಳೆದ ವರ್ಷ 1272 ಕೋಲಗಳು ನಡೆದಿದ್ದವು. ಈ ವರ್ಷದ ಕೋಲ ಬುಧವಾರ  ಸಂಜೆಯ ವೇಳೆಗೆ ನಿಖರವಾಗಿ ತಿಳಿದುಬರಲಿದೆ.
         ಅಭಿಮತ: 
  ಆಷಾಡ ಮಾಸದಲ್ಲಿ ಬರುವ ದುರಿತ, ಕಷ್ಟಗಳನ್ನು ನಿವಾರಿಸುವಲ್ಲಿ ಕಲ್ಲುರ್ಟಿದೈವ ಭಕ್ತಾದಿಗಳಿಗೆ ಅಭಯ ನೀಡುತ್ತಾಳೆ. ಆಷಾಡ ಮಾಸ ಕಷ್ಟಕಾರ್ಪಣ್ಯದ ತಿಂಗಳು ಆಗಿರುವುದರಿಂದ ಕಲ್ಲುರ್ಟಿ ದೈವದ ಅಭಯ ಜನತೆಯ ಪಾಲಿಗೆ ವರದಾನವಾಗುತ್ತಿದೆ. ಇದಕ್ಕಾಗಿ ನೂರಾರು ಮಂದಿ ಭಕ್ತಾದಿಗಳು ಇಲ್ಲಿ ಬಂದು ತಮ್ಮ ಸಂಕಷ್ಟ ತೋಡಿಕೊಂಡು, ಪರಿಹಾರ ಕಂಡುಕೊಳ್ಳುತ್ತಿದ್ದಾರೆ.
      ಅರವಿಂದ. ರೈ
  ಆದೂರು ಗುತ್ತು.(ಮೊಕ್ತೇಸರರು.)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries