ಕುಂಬಳೆ: ಸಾಮಾನ್ಯವಾಗಿ ಕರ್ಕಟಕ ಅಥವಾ ಆಟಿ ಮಾಸದಲ್ಲಿ ತುಳುನಾಡಿನ ಸಾವಿರದೊಂದು ದೈವಗಳು ಗಟ್ಟ ಹತ್ತುತ್ತವೆ ಎಂಬ ನಂಬಿಕೆ. ಈ ಕಾರಣದಿಂದಲೇ ಹತ್ತಾವದಿ(ಪತ್ತನಾಜೆ)ಯಂದು ಕೊನೆಗೊಳ್ಳುವ ಹಬ್ಬಹರಿದಿನಗಳು ಬಳಿಕ ನಾಗರಪಂಚಮಿ, ಅಷ್ಟಮಿ, ಗಣೇಶ ಚತುರ್ಥಿ ಹೀಗೆ ಮಳೆಯ ಅಬ್ಬರದ ಬಳಿಕ ಪುನರಾರಂಭಗೊಳ್ಳುತ್ತದೆ. ಈ ಪೈಕಿ ಆಟಿ ಮಾಸದಲ್ಲಿ ದೈವ-ಭೂತಗಳ ಆರಾಧನೆ, ನೇಮಗಳು ಸಂಪೂರ್ಣ ನಿಶಿದ್ದವಾಗಿರುತ್ತದೆ.
ಆಟಿ ತಿಂಗಳಲ್ಲಿ ಪಣೋಳಿಬೈಲು ಕಲ್ಲುರ್ಟಿ ಹಾಗು ಆದೂರು ಕಲ್ಲುರ್ಟಿ-ಕಲ್ಕುಡ ಹರಕೆಯ ನೇಮಕೋಲ ಆಚರಣೆಗಳನ್ನು ಬಿಟ್ಟರೆ ಬೇರೆಲ್ಲೂ ಆಚರಣೆಗಳು ನಡೆಯುವುದಿಲ್ಲ. ಆದರೆ ವಿಶೇಷವೆಂಬಂತೆ ಸತ್ಯದ ತುಳುನಾಡ ಸೀಮೆಯೆಂಬ ಖ್ಯಾತಿಯ ಕುಂಬಳೆ ಸೀಮೆಯ ಕುಂಬಳೆ ಕಂಚಿಕಟ್ಟೆಯಲ್ಲಿ ಕಾರಣಿಕದ ಆಟಿ ಗುಳಿಗನ ವಾರ್ಷಿಕ ಕೋಲ ನಡೆಯುತ್ತಿದ್ದು, ಪ್ರಸ್ತುತ ವರ್ಷದ ಕೋಲಸೇವೆ ಭಾನುವಾರ ಸಾಂಪ್ರದಾಯಿಕ ಶ್ರದೆಎ ಭಕ್ತಿಯೊಂದಿಗೆ ಸಂಪನ್ನಗೊಂಡಿತು.
ಹಿನ್ನೆಲೆ-ಕಾರಣಿಕ:
ಇತ್ತೀಚಿನ ದಿನಗಳಲ್ಲಿ ತನ್ನ ಕಾರಣಿಕದಿಂದ ಕಾರ್ಣಿಕದ ಗುಳಿಗಜ್ಜನೆಂದು ಹೆಸರು ಪಡೆದ ಕಂಚಿಕಟ್ಟೆಯ ಗುಳಿಗ ದೈವ ಅತಿ ಶಕ್ತಿ ಸತ್ಯದ ದೈವ. ಹಿಂದೆ ಕುಟ್ಟಿಹಿತ್ತಿಲು ಕೃಷಿ ಪ್ರಧಾನ ಬಂಟ ಕುಟುಂಬಕ್ಕೆ ಪಿತೃಮೂಲವಾಗಿದ್ದ ಕಂಚಿಕಟ್ಟೆಯಲ್ಲಿ ಇಂದು ಹಲವಾರು ಕುಟುಂಬಗಳು ವಾಸಿಸುತ್ತಿವೆ. ಗುಳಿಗಜ್ಜನ ಕೃಪಾಕಟಾಕ್ಷವನ್ನು ಕಣ್ಣಾರೆ ಕಂಡಿದ್ದಾರೆ ಹಾಗೆ ಇತ್ತೀಚಿಗಿನ ಹಲವಾರು ವರ್ಷಗಳಲ್ಲಿ ತನ್ನ ಕಾರಣಿಕವನ್ನು ಮೆರೆಯುತ್ತಿರುವ ಗುಳಿಗನ ಬಗ್ಗೆ ಭಯ-ಭಕ್ತಿಯ ನಂಬಿಕೆ ವ್ಯಾಪಕಗೊಂಡಿದೆ.
ಸುಮಾರು 8-9 ವರ್ಷಗಳ ಹಿಂದೆ ಮಕ್ಕಳಾಟಿಕೆ ಮಾಡಿದ ಮಕ್ಕಳಿಗೆ ಶಕ್ತಿಯನ್ನು ಪ್ರದರ್ಶಿಸಿ ಸುದ್ದಿಯಾಗಿದ್ದ ಇಲ್ಲಿಯ ಗುಳಿಗಜ್ಜ. ಕೆಲವು ವರ್ಷಗಳ ಹಿಂದೆ ಕಂಚಿಕಟ್ಟೆ ಭಾಗದ ಊರಿನ ವ್ಯಕ್ತಿಯೊಬ್ಬರು ಮುಂಬಯಿಯಿಂದ ಬರತ್ತಿರುವಾಗ ಮಂಗಳೂರಿನಲ್ಲಿ ಅಪರಿಚಿತನೋರ್ವನಿಂದ ಮೋಸಕ್ಕೊಳಗಾಗಿದ್ದರು. ಮತ್ತು ಬರುವ ಔಷಧಿಯನ್ನು ನೀಡಿ ಅವರ ಧನ ಮತ್ತು ಚಿನ್ನದ ಆಭರಣಗಳನ್ನು ಕಸಿದುಕೊಳ್ಳಲಾಗಿತ್ತು. ಈ ಬಗ್ಗೆ ಗುಳಿಗನ ಮುಂದೆ ಕೋಲದ ಸಮಯದಲ್ಲಿ ಆ ವ್ಯಕ್ತಿಯು ಆರಿಕೆ ಮಾಡಲು ಕೇವಲ ಮೂರು ತಿಂಗಳಲ್ಲಿ ನಿನ್ನ ಕಳೆದುಕೊಂಡ ಎಲ್ಲಾ ವಸ್ತುಗಳನ್ನು ಹಿಂತಿರುಗಿಸುವುದು ಹಾಗೂ ಆ ಕಳ್ಳನನ್ನು ನಿನ್ನ ಮುಂದೆ ಕಂಡುಬರುವ ಹಾಗೆ ಮಾಡುವೆನು ಎಂದು ವಾಗ್ದಾನ ನೀಡಿ, ಹೇಳಿದಂತೆ ಮೂರು ತಿಂಗಳಲ್ಲಿ ಆ ವ್ಯಕ್ತಿಯ ಪುನಃ ಮುಂಬೈಗೆ ಹೋಗುವ ಹೊತ್ತಲ್ಲಿ ಅದೇ ಕಳ್ಳನನ್ನು ಕಣ್ಣಮುಂದೆ ಕಾಣುವಂತೆ ಮಾಡಿ ಅವನನ್ನು ಪೊಲೀಸರ ಮೂಲಕ ಹಿಡಿಸುವಂತೆ ಮಾಡಿ ಅದರಿಂದ ಅವನಿಂದ ಕಸಿದುಕೊಂಡಿದ್ದ ಚಿನ್ನಾಭರಣಗಳು ಮತ್ತು ಮೊಬೈಲ್ ಫೋನನ್ನು ವಾಪಾಸು ಪಡೆದುಕೊಂಡಿದ್ದರು.
ಇಂದಿಗೂ ಇಂತಹ ಹಲವಾರು ಕಾರಣಿಕಗಳು ಇಲ್ಲಿ ನಡೆಯುತ್ತಿದೆ. ಮುಂದೆ ಇತ್ತೀಚೆಗೆ ಕೊಟ್ಟಿಹಿತ್ತಿಲು ಕುಟುಂಬದ ಆಟಿಗುಳಿಗನ ಮಹಾ ಭಕ್ತ ರಾಗಿದ್ದ ದಿವಂಗತ ಸುಂದರ ಶೆಟ್ಟಿ ಯಾನೆ ದೇರಣ್ಣ ರೈ ರವರ ಮಗನಾದ ರವೀಂದ್ರ ರೈ ಇವರು ಪ್ರಶ್ನೆ ಮುಖೇನ ಚಿಂತನೆ ನಡೆಸಿ, ಪುನಃ ಪ್ರತಿಷ್ಠಾ ಬ್ರಹ್ಮಕಲಶ ಜು.13 ರಂದು ಶೇಡಿಕಾವು ಅಡಿಗ ಪುರೋಹಿತರು ಮತ್ತು ಐತಪ್ಪ ನಲಿಕೆ ಇವರ ಮುಂದಾಳತ್ವದಲ್ಲಿ ತಾಂತ್ರಿಕ ವಿಧಿವಿಧಾನಗಳ ಮೂಲಕ ನೆರವೇರಿಸಲಾಗಿತ್ತು.
ಪ್ರಸ್ತುತ ರವೀಂದ್ರ ರೈ ಪಿಲಿಂಗುರಿ ಅವರು ಅನುವಂಶೀಯ ಮೊಕ್ತೇಸರರಾಗಿ ಸನ್ನಿಧಾನವನ್ನು ಮುನ್ನಡೆಸುತ್ತಿದ್ದು, ಜೊತೆಗೆ "ಕಾರಣಿಕದ ಗುಳಿಗ ದೈವ ಭಕ್ತ ಜನಸಂಘ" ಕಂಚಿಕಟ್ಟೆ ಎಂಬ ಯುವ ಭಕ್ತರ ತಂಡ ಕೈಜೋಡಿಸಿ ಧರ್ಮದ ನೆಲೆಗಟ್ಟನ್ನು ಭದ್ರಗೊಳಿಸಲು ಸೇವೆ ಸಲ್ಲಿಸುತ್ತಿದೆ.
ಈ ಕ್ಷೇತ್ರದಲ್ಲಿ ವಾರ್ಷಿಕ ಕೋಲ ಆಟಿ ಮಾಸದಲ್ಲಿ ಮಾತ್ರ ನಡೆದುಬರುತ್ತಿದ್ದು, ಪ್ರಸ್ತುತ ವರ್ಷದ ಕೋಲ ಭಾನುವಾರ ಸಾಂಪ್ರದಾಯಿಕ ಶ್ರದ್ದೆಯಿಂದ ನೆರವೇರಿತು. ಆನುವಂಶಿಕ ಮೊಕ್ತೇಸರ ರವೀಂದ್ರ ರೈ ಪಿಲಿಂಗುರಿ ಮುಂದಾಳತ್ವದಲ್ಲಿ ನಡೆದ ಕೋಲ ಸೇವೆಯಲ್ಲಿ ಗುಳಿಗ ದೈವ ಭಕ್ತ ಜನಸಂಘದ ಪದಾಧಿಕಾರಿಗಳಾದ ಬಾಬು ರೈ ಕೊಟ್ಯಹಿತ್ತಿಲು, ಶಂಕರ ರೈ ಕೊಟ್ಯಹಿತ್ತಿಲು, ಎಸ್.ಜಗನ್ನಾಥ ಶೆಟ್ಟಿ ಕೆಳಗಿನ ಉಜಾರು, ಸುಜಿತ್ ರೈ, ಜಯಾನಂದ ಕುಂಬಳೆ, ಪೃಥ್ವಿರಾಜ್ ಶೆಟ್ಟಿ ಉಜಾರು.ಪುತ್ತಿಗೆ ಹೊಸಮನೆ, ಕಮಲಾಕ್ಷ ಆರಿಕ್ಕಾಡಿ, ಶಂಕರ ಮೂಲ್ಯ ಕಂಚಿಕಟ್ಟೆ, ಪ್ರವೀಣ್ ಪೂಜಾರಿ ಪೊಸ್ತಡ್ಕ, ಬಾಬಣ್ಣ ರೈ ಕೊಟ್ಯದ ಹಿತ್ತಿಲು, ಕರುಣಾಕರ ರೈ ಕೊಟ್ಯದ ಹಿತ್ತಿಲು, ನಿತ್ಯಾನಂದ ರೈ ಕೊಟ್ಟಿಹಿತ್ತಿಲು, ಕಿರಣ್ ರಾವ್ ಕುಂಬಳೆ, ಶಂಕರ ರೈ, ಸುಂದರ, ಮನೋಜ್ ಕೆ, ಉಮೇಶ್ ಚೌಟ ಹಳೆಮನೆ ಮೊದಲಾದವರು ಸಹಕರಿಸಿದರು.



