ಮುಳ್ಳೇರಿಯ: ಬೆಳ್ಳಿಪ್ಪಾಡಿ ಮಧುವಾಹಿನಿ ಗ್ರಂಥಾಲಯದಲ್ಲಿ ವಾಚನ ಸಪ್ತಾಹ ಕಾರ್ಯಕ್ರಮ ಸಮಾರೋಪಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಸಿದ್ಧ ಮಲೆಯಾಳ ಕವಿ ಸಿ.ಎಂ. ವಿನಯಚಂದ್ರನ್ ಇಂದಿನ ತಲೆಮಾರು ದೃಶ್ಯ ಮಾಧ್ಯಮಕ್ಕೆ ಹೆಚ್ಚು ಹೆಚ್ಚು ಮಾರುಹೋಗುತ್ತಿರುವುದು ಕಾಣುತ್ತಿದೆ. ಇದರಿಂದ ನಮ್ಮ ಸಂಸ್ಕøತಿ ಮತ್ತು ಇತಿಹಾಸಕ್ಕೆ ಬಲವಾದ ಪೆಟ್ಟು ಬೀಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಾಮಾನ್ಯ ಮನುಷ್ಯನ ನೈಜ ಜೀವನವನ್ನು ಕವಿತೆಗಳು ವಿವರಿಸುತ್ತದೆ. ಕೇರಳದಲ್ಲಿದ್ದ ಜಾತಿ ವ್ಯವಸ್ಥೆ,ಅಸ್ಪೃಶ್ಯತೆಯ ಬಗ್ಗೆ ಅಂದಿನ ಜನರು ಧ್ವ್ವನಿಯೆತ್ತಲು ಸಾಹಿತ್ಯ ಕೃತಿಗಳು ಪ್ರಮುಖ ಪಾತ್ರವಹಿಸಿದ್ದವು ಎಂದು ಅವರು ತಿಳಿಸಿದರು. ಅವರು ಪಿ.ಕೇಶವ ದೇವ್ ಬರೆದ ಕವಿತೆಯನ್ನು ವಾಚಿಸಿ ವಿವರಿಸಿದರು.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಇತಿಹಾಸ ಅಧ್ಯಾಪಕ ಮಹೇಶ ಏತಡ್ಕ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟ ಹಾಗು ಪ್ರಪಂಚದ ಹಲವು ಕ್ರಾಂತಿಗಳು ನಡೆಯಲು ಪುಸ್ತಕದ ಪ್ರಭಾವ ಬಹಳಷ್ಟಿತ್ತು. ಅಮೇರಿಕದಲ್ಲಿ ಇದ್ದ ವರ್ಣಭೇದ ನೀತಿಗೆ ಎದುರಾಗಿ ಕಾದಂಬರಿಗಳು ಪ್ರಕಟಗೊಂಡದ್ದು ಜನರನ್ನು ಬಡಿದೇಳಿಸುವಂತೆ ಮಾಡಿತು ಎಂದರು. ಓದುವ ಹವ್ಯಾಸವು ನಮಗೆ ಮಾಹಿತಿಯನ್ನೂ, ಜ್ಞಾನವನ್ನೂ ನೀಡುವುದರ ಜೊತೆಗೆ ನಮ್ಮ ಮಿದುಳನ್ನು ಕ್ರಿಯಾಶೀಲವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಕ್ಷರದೀಪವನ್ನು ಬೆಳಗಿಸಲಾಯಿತು. ಚೆರಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯದ ಕಾರ್ಯದರ್ಶಿ ರಾಘವನ್ ಬೆಳ್ಳಿಪ್ಪಾಡಿ ಸ್ವಾಗತಿಸಿ, ಕೆ.ಜಯಚಂದ್ರನ್ ವಂದಿಸಿದರು.


