ಬದಿಯಡ್ಕ: ಕೃಷಿ ಮತ್ತು ಬದುಕಿನ ಮಹತ್ವವನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಶಾಲೆಗಳ ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಅನ್ನ ನೀಡುವ ಭತ್ತದ ಬೆಳೆಯ ಬಗ್ಗೆ ಪರಿಚಯಾತ್ಮಕ ಕಾರ್ಯಕ್ರಮಗಳು ನಡೆಯುತ್ತಿವೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಕೃಷಿಗೆ ಪರ್ಯಾಯ ವ್ಯವಸ್ಥೆ ಅಸಾಧ್ಯ. ರಾಷ್ಟ್ರದ ಬೆನ್ನೆಲುಬಾಗಿರುವ ಇಂತಹ ಕೃಷಿಯ ಬಗ್ಗೆ ತಿಳಿಯಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿಗಳು ಶುಕ್ರವಾರ ಬೇಳ ಸಮೀಪದ ಸುಬ್ರಹ್ಮಣ್ಯ ಅಡಿಗಳ ಭತ್ತದ ಗದ್ದೆಗೆ ಭೇಟಿ ನೀಡಿ ನೇಜಿನೆಟ್ಟು ಸಂಭ್ರಮಿಸಿದರು.
ಬೇಸಾಯದ ಬಗೆಗಿನ ಮಕ್ಕಳ ಕುತೂಹಲ ಭರಿತ ಪ್ರಶ್ನೆಗಳಿಗೆ ಅಡಿಗರು ಉತ್ತರಿಸುತ್ತಾ ಅಕ್ಕಿ, ತರಕಾರಿ ಮುಂತಾದವುಗಳನ್ನು ಸ್ವತಃ ನಾವೇ ಬೆಳೆಯಬೇಕು.ಇದರಿಂದ ವಿಷಮುಕ್ತ ಆಹಾರ, ದೈಹಿಕ ವ್ಯಾಯಾಮ ಮತ್ತು ಮನಸ್ಸಿಗೆ ಆನಂದ ಲಭಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ವಾಣಿ ಪಿ.ಯಸ್, ಮಾಲತಿ.ಪಿ, ಗೋವಿಂದ ಶರ್ಮ. ಕೆ, ಅವಿನಾಶ ಕಾರಂತ. ಎಮ್, ಶೋಭಾ ಕೆ ಹೀರೇಮಠ್ ಉಪಸ್ಥಿತರಿದ್ದರು.


