ಬದಿಯಡ್ಕ: ಭಾರತೀಯ ಸೇನಾ ಪಡೆಗೆ ಸೈನಿಕನಾಗಿ ತರಬೇತಿ ಪೂರ್ತಿಗೊಳಿಸಿ ಸೋಮವಾರ ಉದ್ಯೋಗಕ್ಕೆ ಒರಿಸ್ಸಾಕ್ಕೆ ತೆರಳಿದ ನೀರ್ಚಾಲು ಸಮಿಪದ ಪುದುಕೋಳಿಯ ತರುಣ ಎನ್.ಎಸ್. ಪ್ರವೀಣ್ ಅವರಿಗೆ ಅಭಿನಂದನಾ ಸಮಾರಂಭ ಭಾನುವಾರ ಸಂಜೆ ಪುದುಕೋಳಿ ಅಂಗನವಾಡಿ ಪರಿಸರದಲ್ಲಿ ಊರವರ ನೇತೃತ್ವದಲ್ಲಿ ನಡೆಯಿತು.
ಖ್ಯಾತ ಜ್ಯೋತಿಷಿಗಳಾದ ಕೃಷ್ಣಮೂರ್ತಿ ಪುದುಕೋಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಎಂ.ಎಚ್.ಜನಾರ್ದನ ಅವರು ಎನ್.ಎಸ್.ಪ್ರವೀಣ್ ಅವರಿಗೆ ಶಾಲುಹೊದೆಸಿ, ಸ್ಮರಣಿಕೆಯನ್ನು ನೀಡಿ ಅಬಿನಂದಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಾಷ್ಟ್ರ ಸೇವೆಯ ಅತ್ಯುನ್ನತ ಅವಕಾಶವಾದ ಸೇನಾ ವಲಯಕ್ಕೆ ಪಾದಾರ್ಪಣೆಗೈಯ್ಯುವ ಪ್ರವೀಣ್ ಅವರಂತಹ ಯುವಕರು ದೇಶದ ಪ್ರಧಾನ ಶಕ್ತಿಗಳಾಗಿದ್ದಾರೆ. ಧೈರ್ಯ ಮತ್ತು ಸಾಹಸಗಳಿಂದ ದೇಶ ಮೆಚ್ಚುವ ಕರ್ತವ್ಯ ನಿಷ್ಠತೆಯ ಮೂಲಕ ಹುಟ್ಟೂರಿನ ಕೀತೀಯನ್ನು ಬೆಳಗುವಂತಹ ಸಾಮಥ್ರ್ಯ ಹೆಮ್ಮೆ ತರುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷ್ಣಮೂರ್ತಿ ಪುದುಕೋಳಿ ಅವರು ಗಡಿನಾಡಿನ ಯುವ ಸಮೂಹ ಸೈನ್ಯದಂತಹ ಮಹಾನ್ ವಿಭಾಗದಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಪ್ರವೀಣ್ ನಂತಹ ಕ್ರಿಯಾಶೀಲ ಮಕ್ಕಳನ್ನು ತಯಾರುಗೊಳಿಸಿದ ಮಾತಾ ಪಿತೃಗಳು ಮಾದರಿ ವ್ಯಕ್ತಿತ್ವದವರಾಗಿದ್ದು, ಅವರ ತ್ಯಾಗ, ಸಂಕಷ್ಟದ ಮಧ್ಯೆ ಮಗನನ್ನು ಅಚ್ಚುಕಟ್ಟಾಗಿ ರೂಪಿಸಿದ ಸನ್ನಿವೇಶಗಳು ಸ್ತುತ್ಯರ್ಹವಾದುದು ಎಂದು ತಿಳಿಸಿದರು.
ಹಿರಿಯರಾದ ಸುಬ್ರಹ್ಮಣ್ಯ ಭಟ್ ಪುದುಕೋಳಿ, ಪರುಷೋತ್ತಮ ಭಟ್ ಕೆ, ಸಂದೀಪ್ ಪುದುಕೋಳಿ, ಸುಧಾಕರ, ಬಾಲಕೃಷ್ಣ ನಾಯ್ಕ್ ಪುದುಕೋಳಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಎನ್.ಎಸ್.ಪ್ರವೀಣ್ ಅವರ ಹೆತ್ತವರಾದ ನಾಗೇಶ್ ಪುದುಕೋಳಿ-ಸತಿ ದಂಪತಿಗಳು ಉಪಸ್ಥಿತರಿದ್ದರು. ರಜನೀ ಸಂದೀಪ್ ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು. ತಿಲಕ್ ರಾಜ್ ಪುದುಕೋಳಿ ವಂದಿಸಿದರು. ಸ್ಥಳೀಯ ಕುಟುಂಬಶ್ರೀ ಕಾರ್ಯಕರ್ತೆಯರು, ತತ್ವಮಸಿ ಫ್ರೆಂಡ್ಸ್ ಸರ್ಕಲ್ ಪುದುಕೋಳಿಯ ಸದಸ್ಯರು, ತತ್ವಮಸಿ ಬಾಲಗೋಕುಲದ ಪುಟಾಣಿಗಳು ಉಪಸ್ಥಿತರಿದ್ದರು.



