ಪೆರ್ಲ: ಕಜಂಪಾಡಿ ವಾರ್ಡ್ ಮಟ್ಟದ ಕುಟುಂಬಶ್ರೀ ವಾರ್ಷಿಕೋತ್ಸವ ಹಾಗೂ ಹಲಸಿನ ಮೇಳ ಕಾರ್ಯಕ್ರಮವು ಇತ್ತೀಚೆಗೆ ಸರ್ಪಮಲೆ ಅಂಗನವಾಡಿಯಲ್ಲಿ ಜರುಗಿತು.
ಗ್ರಾಮ ಪಂಚಾಯತಿ ಸದಸ್ಯೆ ರೂಪವಾಣಿ ಆರ್. ಭಟ್ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕು ರೂಪಿಸಲು ಕುಟುಂಬಶ್ರೀ ಮೂಲಕ ದೊರಕುವ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಹೆಚ್ಚು ಆಸಕ್ತರಾಗಬೇಕು. ಸ್ವದ್ಯೋಗ ಹಾಗೂ ಸಾಮಾಜಿಕ ರಂಗಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು.
ಆಯುರ್ವೇದ ತಜ್ಞೆ ಡಾ. ಸಪ್ನಾ ಜೆ ಉಕ್ಕಿನಡ್ಕ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಹಲಸಿನ ಮೇಳವನ್ನು ಉದ್ಘಾಟಿಸಿದರು. ಬಳಿಕ ಹಲಸಿನ ವಿವಿಧ ಉತ್ಪನ್ನಗಳನ್ನು ತಯಾರಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಹಲಸಿನ ವಿವಿಧ ಆಹಾರ ಉತ್ಪನ್ನಗಳಿಂದ ದೊರಕುವ ಶಾರೀರಿಕ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಕುಟುಂಬಶ್ರೀ ಎಡಿಎಸ್ ಅಧ್ಯಕ್ಷೆ ಸುಶೀಲಾ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಸಿಡಿಎಸ್ ಸದಸ್ಯೆ ಉದಯ ಕುಮಾರಿ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ರಾಧಿಕಾ ವಂದಿಸಿದರು. ಬಳಿಕ ಕುಟುಂಬಶ್ರೀ ಮಹಿಳೆಯರಿಗೆ ಹಾಗೂ ಬಾಲಸಭಾ ಪುಟಾಣಿಗಳಿಗೆ ವಿವಿಧ ಸ್ಪರ್ಧೆಗಳು ಜರುಗಿದವು. ಸಮಾರೋಪ ಸಮಾರಂಭದಲ್ಲಿ ಬ್ಲಾಕ್ ಪಂಚಾಯತಿ ಸದಸ್ಯೆ ಸವಿತಾ ಬಾಳಿಕೆ ಬಹುಮಾನ ವಿತರಿಸಿದರು.



