ಉಪ್ಪಳ: ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ಹಾಗೂ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಇವುಗಳ ಜಂಟಿ ಆಶ್ರಯದಲ್ಲಿ ಗಡಿನಾಡಿನ ಕನ್ನಡ ಭಾಷೆ, ಸಂಸ್ಕøತಿಗಳ ಬೆಳವಣಿಗೆಗೆ ಪೂರಕವಾಗಿ ಯುವ ಉದಯೋನ್ಮುಖ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಚುಟುಕು ಸಾಹಿತ್ಯ ಸಂಭ್ರಮ-2019 ಎಂಬ ವಿನೂತನ ಕಾರ್ಯಕ್ರಮ ಜುಲೈ.13 ರಂದು ಶನಿವಾರ ಉಪ್ಪಳ ಕೊಂಡೆವೂರಿನ ಶ್ರೀನಿತ್ಯಾನಂದ ಯೋಗಾಶ್ರಮದ ಸಭಾಣಂಗಣದಲ್ಲಿ ಬೆಳಿಗ್ಗೆ 9.30 ರಿಂದ ಆಯೋಜಿಸಲಾಗಿದೆ.
ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಆರಂಭಗೊಳ್ಳಲಿದ್ದು, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸುವರು. ಹಿರಿಯ ಕವಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ್ ಭಟ್ ಎಡನೀರು ಅಧ್ಯಕ್ಷತೆ ವಹಿಸುವರು. ದ.ಕ. ಜಿಲ್ಲಾಚುಟುಕು ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಇರಾ ನೇಮು ಪೂಜಾರಿ, ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ತಾರಾನಾಥ ಬೋಳಾರ್, ಮಧುರೈ ಕಾಮರಾಜ ವಿ.ವಿ.ಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ, ಸವಿ ಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ ಮತ್ತಿತರರು ಉಪಸ್ಥಿತರಿದ್ದು ಶುಭಹಾರೈಸುವರು. ಈ ಸಂದರ್ಭ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿತ್ತಡ್ಕ, ಸಾಹಿತಿ ಹರೀಶ್ ಪೆರ್ಲ, ಡಾಕ್ಟರೇಟ್ ಪದವಿ ಪಡೆದ ಪ್ರತಿಭಾವಂತೆ ಅಪರ್ಣಾ ಶೆಟ್ಟಿ ಒಡ್ಡಂಬೆಟ್ಟು, ಎಂ.ಫಿಲ್ ಪದವಿ ಪಡೆದ ಪ್ರತಿಭಾವಂತೆ ಮೀನಾಕ್ಷಿ ಬೊಡ್ಡೋಡಿ ಅವರನ್ನು ಅಭಿನಂದಿಸಿ ಗೌರವಿಸಲಾಗುವುದು. ಬಳಿಕ ಡಾ.ಹರಿಕೃಷ್ಣ ಭರಣ್ಯ ಹಾಗೂ ಡಾ.ಕೃಷ್ಣ ಭಟ್ ಅರ್ತಿಕಜೆ ಅವರು ಬರೆದಿರುವ ತುಪ್ಪಶನ ಉಂಬಲೆ ಕೃತಿಯ ಬಗ್ಗೆ ಸಂಶೋಧನಾ ವಿದ್ಯಾರ್ಥಿ ರವಿಶಂಕರ ಜಿ.ಕೆ.ಕೆದಂಬಾಡಿ ಹಾಗೂ ಬಿ.ಎಸ್ ಏತಡ್ಕ ಅವರ ಕೃತಿ ತಿರುವು ಸಂಕಲನದ ಬಗ್ಗೆ ಕವಯಿತ್ರಿ ಚೇತನಾ ಕುಂಬಳೆ ಕೃತಿವಿಮರ್ಶೆ ನಡೆಸುವರು. ಬಳಿಕ ಚುಟುಕು ಕವಿಗೋಷ್ಠಿ ನಡೆಯಲಿದ್ದು, ಕವಿ ಡಾ.ಸುರೇಶ್ ನೆಗಲಗುಳಿ ಚಾಲನೆ ನೀಡುವರು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


