ಮಂಜೇಶ್ವರ: ಇಂದಿನ ಆಧು ನಿಕ ಯುಗದಲ್ಲಿ ಕಲಿಕೆಯು ನಿರಂತರವಾಗಿರಬೇಕು, ಪರಿಸರದೊಂದಿಗೆ ಪ್ರಯೋಗಾತ್ಮಕವಾಗಿ ಸ್ವಯಂ ಕಲಿಕೆ ನಡೆಯಬೇಕು. ಅದಕ್ಕೆ ತಕ್ಕುದಾದ ವಾತಾವರಣವನ್ನು ಶಾಲೆಗಳಲ್ಲಿ ಸೃಷ್ಟಿಸಬೇಕು. ನಮ್ಮ ಹಿಂದಿನ ತಲೆಮಾರಿನವರ ಅನುಭವ ಪಾಠಗಳು ಎಲ್ಲಕ್ಕಿಂತ ಶ್ರೇಷ್ಠ. ಇದು ಈಗಿನ ವಿದ್ಯಾರ್ಥಿಗಳಿಗೆ ಸಿಗುವ ಉದ್ದೇಶದಿಂದ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬಯಲು ಪ್ರವಾಸ ಕೈಗೊಂಡು ಬೇಸಾಯದ ನೈಜ ಅನುಭವವನ್ನು ಪಡೆದುಕೊಂಡರು.
ಕುಳೂರು ಪೊಯ್ಯೆಲ್ ಪಿ. ಆರ್ ಶೆಟ್ಟಿಯವರ ಕೃಷಿ ಭೂಮಿಗೆ ಭೇಟಿ ನೀಡಿದ ಶಾಲಾ ವಿದ್ಯಾರ್ಥಿಗಳಿಗೆ ನೇಜಿ ನೆಡುತ್ತಿದ್ದ ಪೊಯ್ಯೆಲ್ ರಾಜೀವಕ್ಕನ ಓ ಬೇಲೆ ಹಾಡು ಸ್ವಾಗತವನ್ನು ಕೋರುವಂತಿತ್ತು. ನೇಜಿ ನೆಡುತ್ತಿದ್ದ ಹೆಂಗಸರು ಮಕ್ಕಳಿಗೆ ನೇಜಿ ನೆಡುವ ಅವಕಾಶವನ್ನು ಕೊಟ್ಟು ಬೇಸಾಯದ ಅನುಭವವನ್ನು ಮಾಡಿಸಿದರು. ಮಕ್ಕಳು ಓ ಬೇಲೆ ಹಾಡನ್ನು ಹಾಡುತ್ತಾ, ನಲಿಯುತ್ತಾ ಖುಷಿಯಿಂದ ನೇಜಿ ನೆಟ್ಟರು. ಜೊತೆಗೆ ಕೃಷಿಕರಾದ ಪ್ರಮೋದ್ ಶೆಟ್ಟಿ ಯವರೊಂದಿಗೆ ಸಂದರ್ಶನ ನಡೆಸಿ ಕೃಷಿಗೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ಜೊತೆಗಿದ್ದು ಸಹಕರಿಸಿದರು.


