ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ವಿದ್ಯಾ ಸಂಸ್ಥೆಯ ಸ್ಥಾಪಕರ ಜನ್ಮದಿನಾಚರಣೆ ನಡೆಯಿತು.
ಶಾಲಾ ಸಂಸ್ಥಾಪಕರಾದ ದಿವಂಗತ ಪರ್ತಜೆ ವೆಂಕಟ್ರಮಣ ಭಟ್ ಅವರ ಶಿಲಾ ಪ್ರತಿಮೆಗೆ ಮಾಲಾರ್ಪಣೆಯನ್ನು ಅಥಿತಿಗಳಾದ ನಿವೃತ್ತ ಕುಂಬಳೆ ಉಪಜಿಲ್ಲೆ ಸಹಾಯಕ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಜಿ.ರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಅವರು ಸ್ಥಾಪಕರ ಹಿಂದಿನ ಜೀವನ ವಿದ್ಯಾಭ್ಯಾಸದ ಮಟ್ಟ ಹಾಗೂ ಇಂದಿನ ವಿದ್ಯಾಭ್ಯಾಸದ ಬಗೆಗಿನ ವಿಚಾರ ಮೆಲುಕು ಹಾಕಿದರು.
ಅಥಿತಿ ಕೈಲಾಸಮೂರ್ತಿ ಅವರು ವಿದ್ಯಾರ್ಥಿಗಳು ಸಮಾಜಕ್ಕೆ ಆದರ್ಶಪ್ರಾಯರಾಗಿರಬೇಕು. ಪುಸ್ತಕದ ಮಿತ್ರರಾಗಿರಬೇಕು. ಮೌಲ್ಯಯುತವಾದ ಜೀವನ ನಡೆಸಬೇಕು. ವಿದ್ಯಾಭ್ಯಾಸ ಅಂಕಗಳಿಗಾಗಿ ಮಾತ್ರ ಆಗಬಾರದು ಬದಲಾಗಿ ಸಾಮಾಜಿಕ ಪ್ರಜ್ಞೆ ಮೈಗೂಡಿಸಬೇಕು. ಇಂತಹ ಆದರ್ಶವನ್ನು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಬೇಕಾಗಿ ಸಂಸ್ಥಾಪಕರು ಈ ವಿದ್ಯಾಮಂದಿರವನ್ನು ಇಲ್ಲಿ ಸ್ಥಾಪಿಸಿ ಬೆಳೆಸಿದರು. ಇದನ್ನು ಸದುಪಯೋಗ ಪಡೆಯುವುದು, ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ವ್ಯವಸ್ಥಾಪಕರಾದ ಪಿ.ಎಸ್.ವಿಶ್ವಾಮಿತ್ರ ಅವರು ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರುಗಳು, ಅಧ್ಯಾಪಕ ಸಿಬ್ಬಂದಿಯವರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಹಿತೈಷಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಕ ಎಸ್.ವೇಣುಗೋಪಾಲ ಸ್ವಾಗತಿಸಿ, ಪ್ರವೀಣ ಕಾರ್ಯಕ್ರಮ ನಿರೂಪಿಸಿದರು. ಜಿ.ಅನ್ನಪೂರ್ಣೇಶ್ವರೀ ವಂದಿಸಿದರು.

