ಬದಿಯಡ್ಕ/ಕುಂಬಳೆ/ಉಪ್ಪಳ: ಕಳೆದ ಆರು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಕ್ಷೀಣಿಸಿದ್ದು, ಗುರುವಾರ ಬೆಳಿಗ್ಗಿನಿಂದ ಮಳೆ ಸುರಿದಿಲ್ಲ. ಬಿಸಿಲು ಗೋಚರಿಸಿದೆ. ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಮನೆ, ಬಾವಿ ಕುಸಿದಿದ್ದು, ಮನೆಯೊಂದಕ್ಕೆ ಮಲಿನ ನೀರು ನುಗ್ಗಿದೆ.
ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬದಿಯಡ್ಕ ನೆಲ್ಲಿಕಳಯದ ಕೃಷ್ಣ ಅವರ ಹೆಂಚು ಹಾಸಿದ ಮನೆಯ ಒಂದು ಭಾಗ ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿರುವ ಶಬ್ದ ಕೇಳಿ ಮನೆ ಮಂದಿ ಹೊರಗೆ ಓಡಿದ್ದರಿಂದ ಅಪಾಯದಿಂದ ಪಾರಾದರು. ಈ ಕುಟುಂಬ ಸದಸ್ಯರು ನೆರೆ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಬೆದ್ರಡ್ಕದ ಪೆರಿಯಡ್ಕ-ಕೆಲ್ ರಸ್ತೆ ಬದಿಯ ನಿವಾಸಿ ಸುನಿಲ್ ಕುಮಾರ್ ಅವರ ಮನೆಗೆ ಮಲಿನ ನೀರು ನುಗ್ಗಿದೆ. ಬಾವಿಗೂ ಸೇರಿದ್ದು ನೀರು ಬಳಸದಂತಾಗಿದೆ.
ಪೆರ್ಮುದೆ-ಧರ್ಮತ್ತಡ್ಕ ರಸ್ತೆ ಬಾಳಿಕೆಯಲ್ಲಿ ತೋಡಿನ ಬದಿ ಕುಸಿದು ಬಿದ್ದಿದ್ದು, ರಸ್ತೆ ಅಪಾಯದಲ್ಲಿದೆ. ರಸ್ತೆಯ ಬದಿಯಲ್ಲಿ ರಕ್ಷಣೆಗಾಗಿ ನಿರ್ಮಿಸಿದ ಕಬ್ಬಿಣದ ಬೇಲಿ ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಯಲ್ಲಿದೆ.
ನೀರಲ್ಲಿ ಮುಳುಗಿದ ರಸ್ತೆ : ಮಂಗಲ್ಪಾಡಿ ಪಂಚಾಯತಿಯ ಶಿರಿಯದಿಂದ ವಾನಂದೆ, ವೀರನಗರ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯ ಅಂಬಟೆಕುದಿಯಲ್ಲಿ ನೀರು ತುಂಬಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಸ್ತೆಯಲ್ಲಿ ವ್ಯಾಪಕ ನೀರು ತುಂಬಿರುವುದರಿಂದ ವಿದ್ಯಾರ್ಥಿಗಳು ಸಹಿತ ಪರಿಸರ ನಿವಾಸಿಗಳಿಗೆ, ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಸಮಸ್ಯೆ ಪರಿಹರಿಸಲು ಆಗ್ರಹ : ಕರಿಂಬಿಲದಲ್ಲಿ ಗುಡ್ಡೆ ಕುಸಿದು ಉಂಟಾದ ಸಾರಿಗೆ ಸಮಸ್ಯೆ ಪರಿಹರಿಸಬೇಕೆಂದು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ. ಅವೈಜ್ಞಾನಿಕ ರೀತಿಯಲ್ಲಿ ರಸ್ತೆ ಅಭಿವೃದ್ಧಿಗೊಳಿಸಿದ್ದು ಈ ಸ್ಥಿತಿಗೆ ಕಾರಣವಾಗಿದ್ದು, ಗುತ್ತಿಗೆದಾರರು ಹಾಗು ಅ„ಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಗುಡ್ಡೆ ಕುಸಿತದಿಂದಾಗಿ ಈ ದಾರಿಯಲ್ಲಿ 2 ದಿನಗಳಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಕಾರಣ ಶಾಲಾ ವಿದ್ಯಾರ್ಥಿಗಳ ಸಹಿತ ಪ್ರಯಾಣಕ್ಕೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಖಂಡನೀಯ ಎಂದು ಶ್ರೀಕಾಂತ್ ಹೇಳಿದ್ದಾರೆ.


