ಬದಿಯಡ್ಕ: ಕೇಂದ್ರ ಚುನಾವಣಾ ಆಯೋಗದ ಪ್ರಕ್ರಿಯೆಯಂತೆಯೇ ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ಶಾಲಾ ವಿದ್ಯಾರ್ಥಿ ಮಂಡಳಿಯ ವಿವಿಧ ಹುದ್ದೆಗಳಿಗೆ ಬುಧವಾರ ಚುನಾವಣೆ ನಡೆಸಲಾಯಿತು. ಹೆಡ್ ಬೋಯ್, ಹೆಡ್ ಗರ್ಲ್, ಕ್ರೀಡಾ ನಾಯಕ, ಆಟ್ರ್ಸ್ ಕಾರ್ಯದರ್ಶಿ ಹಾಗೂ ಮ್ಯಾಗಜಿನ್ ಸಂಪಾದಕ ಹುದ್ದೆಗಳಿಗೆ ಒಟ್ಟು 15 ಮಂದಿ ಸ್ಫರ್ಧಿಸಿದ್ದರು.
ಜು.18ರಂದು ನಾಮನಿರ್ದೇಶ ಪತ್ರಿಕೆಯನ್ನು ಸಮರ್ಪಿಸಿ, ಶಾಲಾ ಚುನಾವಣಾ ಆಯೋಗದಿಂದ ಪರಿಶೀಲನೆ ನಡೆಸಲಾಯಿತು. ಮತದಾರರ ಪಟ್ಟಿಯನ್ನೂ ತಯಾರಿಸಲಾಗಿತ್ತು. ಬೆರಳಿಗೆ ಶಾಯಿಯನ್ನು ಹಾಕಿಸಿಕೊಂಡು ಬ್ಯಾಲೆಟ್ ಪೇಪರ್‍ನೊಂದಿಗೆ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. 5ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಮತದಾನದ ಶಾಲಾ ಗುರುತುಚೀಟಿಯನ್ನು ತೋರಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಸ್ಕೌಟ್ ವಿದ್ಯಾರ್ಥಿಗಳು ಪೊಲೀಸ್ ಇಲಾಖೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಒಂದು ದಿನ ಕಳೆದು ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಶಾಲಾ ಚುನಾವಣಾ ಆಯೋಗದ ಸಮಿತಿ ತಿಳಿಸಿದೆ. ಅಧ್ಯಾಪಕ ವೃಂದದವರು ಸಂಪೂರ್ಣ ಸಹಕಾರ ನೀಡಿದರು.



