ಕಾಸರಗೋಡು: ಸರ್ಕಾರ ನಿಗದಿಪಡಿಸಿದ ನ್ಯಾಯಬೆಲೆ ಪ್ರಕಾರ ಜಾಗ ಮಾರಾಟ ನಡೆಸುವ ಮಂದಿಯಿಂದ ಜಾಗ ಪಡೆದು ವಿತರಣೆ ನಡೆಸುವ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಆಶಿಕ್ಕುಂ ಭೂಮಿ ಆದಿವಾಸಿಕ್ (ಆದಿವಾಸಿ ಜನಾಂಗದ ವ್ಯಕ್ತಿಗೆ ಬಯಸುವ ಜಾಗ) ಯೋಜನೆಗೆ ಅರ್ಜಿ ಸಲ್ಲಿಸಿದ 685 ಮಂದಿಯಲ್ಲಿ ಜಾಗ ಲಭಿಸದೇ ಇರುವ 485 ಮಂದಿಯ ಪ್ರತಿನಿಧಿಗಳೊಂದಿಗೆ ಮಂಗಳವಾರ ತಮ್ಮ ಛೇಂಬರ್ ನಲ್ಲಿ ನಡೆದ ಮಾತುಕತೆಯಲ್ಲಿ ಜಿಲ್ಲಾಧಿಕಾರಿ ಈ ತೀರ್ಮಾನ ತಿಳಿಸಿದ್ದಾರೆ.
ಜಾರಿಯಲ್ಲಿರುವ ಮಾನದಂಡ ಪ್ರಕಾರ ಅರ್ಜಿ ಸಲ್ಲಿಸಿ ಜಾಗ ಲಭಿಸದೇ ಉಳಿದಿರುವ ಮಂದಿಗೆ ಲ್ಯಾಂಡ್ ಬ್ಯಾಂಕ್ ಯೋಜನೆಯಲ್ಲಿ ಆದ್ಯತೆ ನೀಡಲಾಗುವುದು.ಜಿಲ್ಲೆಯಲ್ಲಿ ಸ್ವಂತ ಜಾಗವಿಲ್ಲದೇ ಇರುವ ಸುಮಾರು 1580 ಮಂದಿಯನ್ನು ಲ್ಯಾಂಡ್ ಬ್ಯಾಂಕ್ ಯೋಜನೆಯಲ್ಲಿ ಸೇರ್ಪಡೆಗೊಳಿಸಿ, ಜಾಗ ಪಡೆದು ವಿತರಿಸುವ ಕ್ರಮ ಕೈಗೊಳ್ಳಲಾಗುವುದು ಎಂದವರು ಹೇಳಿದರು.
ಸಹಾಯಕ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಡಿ.ವೈ.ಎಸ್.ಪಿ. ಹಸೈನಾರ್, ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಪಿ.ಟಿ.ಅನಂತ ಕೃಷ್ಣನ್, ಸಹಾಯಕ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಎಂ.ಷಮೀನ, ಜ್ಯೂನಿಯರ್ ವರಿಷ್ಠಾಧಿಕಾರಿ ಕೆ.ಎಂ.ಪ್ರಸನ್ನ, ದಲಿತ್ ಮಹಾಸಭಾ ಪ್ರತಿನಿಧಿ ಟಿ.ಕೆ.ರಾಮನ್, ದಲಿತ್ ಸರ್ವೀಸ್ ಸೊಸೈಟಿ ಪ್ರತಿನಿಧಿ ಒ.ಕೆ.ಪ್ರಭಾಕರನ್ ಸಭೆಯಲ್ಲಿ ಉಪಸ್ಥಿತರಿದ್ದರು.

