ಮುಂಬೈ: ಜುಲೈ 2 ರಂದು ಸಂಭವಿಸಿದ ಸೂರ್ಯಗ್ರಹಣದ ನಂತರ ಇಂದು ರಾತ್ರಿ (ಜುಲೈ 17ರ ಮುಂಜಾನೆ ) ಭಾಗಶಃ ಚಂದ್ರಗ್ರಹಣಕ್ಕೆ ನಭ ಸಾಕ್ಷಿಯಾಗಲಿದೆ. ಜುಲೈ 02 ರಂದು ಸಭವಿಸಿದ ಸೂರ್ಯಗ್ರಹಣ ಕೇವಲ ದಕ್ಷಿಣ ಅಮೆರಿಕದಲ್ಲಿ ಮಾತ್ರ ಗೋಚರವಾಗಿತ್ತು. ಆದರೆ ಇಂದು ನಡೆಯಲಿರುವ ಚಂದ್ರಗ್ರಹಣ ಭಾರತದಲ್ಲೂ ಗೋಚರವಾಗಲಿದೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಪ್ರಕಾರ ಭಾರತದಲ್ಲಿ ಬೆಳಗ್ಗಿನ ಜಾವ 03:01 ಕ್ಕೆ ಗ್ರಹಣ ಸ್ಪರ್ಶವಾಗಲಿದೆ. ಈಶಾನ್ಯ ರಾಜ್ಯವಾದ ಅರುಣಾಚಲ ಪ್ರದೇಶವನ್ನು ಹೊರತುಪಡಿಸಿದರೆ ಭಾರತದ ಎಲ್ಲೆಡೆಯೂ ಗ್ರಹಣ ಗೋಚರವಾಗಲಿದೆ. 2019 ರ ಕೊನೆಯ ಚಂದ್ರಗ್ರಹಣ ಇದಾಗಿದ್ದು, 2020 ರ ಜನವರಿ 10 ರಂದು ಮುಂದಿನ ಚಂದ್ರಗರಹಣ ಸಂಭವಿಸಲಿದೆ. ನಂತರ 26 ಮೇ 2021 ಮತ್ತು 19 ನವೆಂಬರ್ 2021 ರಂದು ಚಂದ್ರ ಗ್ರಹಣ ಸಂಭವಿಸಲಿದೆ. 2019 ರ ಜನವರಿ 20-21 ರಂದು ಸಹ ಚಂದ್ರಗ್ರಹಣ ಸಂಭವಿಸಿತ್ತು. ಇದು ಸೂಪರ್ ಬ್ಲಡ್ ಮೂನ್ ಎಂದೇ ಕರೆಸಿಕೊಂಡಿತ್ತು. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರಗ್ರಹಣ ಸಂಭವಿಸುತ್ತದೆ.


