ಇಂದಿನ ಟಿಪ್ಪಣಿ:
1. ಹೆಣ್ಣಿಗೆ ಆಕಾರ ಮುಖ್ಯ, ಅಕಾರ ಅಲ್ಲ!
*ರಾಧಳಿಗೆ, ಗಂಗಳಿಗೆ, ಉಮಳಿಗೆ, ಸೀತಳಿಗೆ* ಎಂಬ ಪದಪ್ರಯೋಗ ತಪ್ಪು. ಕಿರಿಕಿರಿ ಅನಿಸುವಷ್ಟು ಕೆಟ್ಟದು. ಕಥೆ-ಕಾದಂಬರಿ ಬರೆಯುವ ಪ್ರಖ್ಯಾತ ಲೇಖಕರೂ ಈ ತಪ್ಪನ್ನು ಮಾಡುತ್ತಾರೆ. ಸಂಸ್ಕೃತ ಮೂಲದ ರಾಧಾ, ಗಂಗಾ, ಉಮಾ, ಸೀತಾ... ಇವರನ್ನೆಲ್ಲ ಒಂದೋ ಮೂಲ ಸಂಸ್ಕೃತದಲ್ಲಿರುವಂತೆ ರಾಧಾ, ಗಂಗಾ, ಉಮಾ, ಸೀತಾ... ಎಂದೇ ಉಳಿಸಿಕೊಳ್ಳಬೇಕು, ಅಥವಾ ಕನ್ನಡರೂಪ ಕೊಡುತ್ತೇವಂತಾದರೆ ರಾಧೆ, ಗಂಗೆ, ಉಮೆ, ಸೀತೆ ಎಂದು ಬದಲಿಸಬೇಕು. ಕಾವ್ಯಾ, ನವ್ಯಾ, ಭವ್ಯಾ, ದಿವ್ಯಾ, ಶಿಲ್ಪಾ, ಸಾಧನಾ... ಮುಂತಾದವರೆಲ್ಲ *ಆ*ಕಾರ ಹೊಂದಿದ್ದರೇನೇ ಚಂದ. ಅವರನ್ನು ಕಾವ್ಯ, ನವ್ಯ, ಭವ್ಯ, ದಿವ್ಯ, ಶಿಲ್ಪ, ಸಾಧನ... ಅಂತ ಮಾಡಿದರೆ ಅವರ ಸುಂದರ ಆಕಾರವನ್ನು ಕೆಡಿಸಿ ಸ್ತ್ರೀರೂಪ ತೆಗೆದು ನಪುಂಸಕಗೊಳಿಸಿದಂತಾಗುತ್ತದೆ.
ಅಷ್ಟೇ ಅಲ್ಲ. ವಿದ್ಯಾ, ಕ್ಷಮಾ, ಪ್ರತಿಭಾ, ಸಹನಾ... ಮುಂತಾದ ಹೆಸರುಗಳನ್ನು ಗಮನಿಸಿ. ಕನ್ನಡದಲ್ಲಿ ಅವು ಅನುಕ್ರಮವಾಗಿ- ವಿದ್ಯೆ, ಕ್ಷಮೆ, ಪ್ರತಿಭೆ, ಸಹನೆ... ಅಲ್ಲವೇ? ಅವುಗಳನ್ನು ವಿದ್ಯ, ಕ್ಷಮ, ಪ್ರತಿಭ, ಸಹನ ಎಂದು ಕಡಿತಗೊಳಿಸಿದರೆ ಅರ್ಥವೇ ಇಲ್ಲದಂತಾಗುತ್ತದೆ. ಒಳ್ಳೆಯ ಅರ್ಥ ಇರಬೇಕು ಎಂದು ಮಗುವಿಗೆ ಹೆಸರನ್ನಿಡುವುದು, ಆಮೇಲೆ ಹೆಸರಿಗೆ ಅರ್ಥವಿಲ್ಲದಂತೆ ಮಾಡುವುದು! ಹೆಸರಿನ ಹತ್ಯಾದೋಷ ತಟ್ಟುವುದಿಲ್ಲವೇ? ಹೆಣ್ಣುಮಕ್ಕಳ ಹೆಸರನ್ನು ಹೀಗೆ ವಿರೂಪಗೊಳಿಸುವವರ ಮೇಲೆ ಶಿವರಾಮ ಕಾರಂತರಿಗೆ ಭಯಂಕರ ಸಿಟ್ಟಿತ್ತಂತೆ.
====
2. ತೆತ್ತುವುದು ಅಲ್ಲ, ತೆರುವುದು ಎಂದಾಗಬೇಕು
"ಸಂಚಾರ ನಿಯಮ ಉಲ್ಲಂಘಿಸುವ ಚಾಳಿ ಉಳ್ಳವರು ಮುಂದೆ ಭಾರಿ ಬೆಲೆ ತೆತ್ತಬೇಕಾಗುತ್ತದೆ." - ಪ್ರಜಾವಾಣಿ
"ಬಡ ವಿದ್ಯಾರ್ಥಿಗಳು ಹೆಚ್ಚಿನ ಶುಲ್ಕ ತೆತ್ತಬೇಕಾದ ಪರಿಸ್ಥಿತಿ ಉಂಟಾಗಿದೆ." - ಕನ್ನಡಪ್ರಭ
"ಮಂತ್ರಿಗಿಷ್ಟು ಮಂತ್ರಿಯ ಮಗನಿಗಿಷ್ಟು ಎಂದು ತೆತ್ತುವುದು ಯಾವ ನ್ಯಾಯ?" - ವಿಶ್ವವಾಣಿ
"ಡಾಕ್ಟರ್ ಆಗಲು ವ್ಯಯಿಸಿದ ವೆಚ್ಚವೆಲ್ಲ ರೋಗಿಗಳು ತೆತ್ತುವ ಹಣದಿಂದಲೇ ಬರಬೇಕು ಎಂಬ ಮನಃಸ್ಥಿತಿ ಇದೆ." - ವಿಜಯಕರ್ನಾಟಕ
- ಇಲ್ಲಿರುವ *ತೆತ್ತಬೇಕಾಗುತ್ತದೆ*, *ತೆತ್ತಬೇಕಾದ*, *ತೆತ್ತುವುದು*, *ತೆತ್ತುವ* ಇವೆಲ್ಲ ತಪ್ಪು ಪದಗಳು. ಇವು ಕ್ರಮವಾಗಿ *ತೆರಬೇಕಾಗುತ್ತದೆ*, *ತೆರಬೇಕಾದ*, *ತೆರುವುದು*,*ತೆರುವ* ಎಂದಾಗಬೇಕು. *ತೆರು* ಎಂದು ಕ್ರಿಯಾಪದದ ಮೂಲರೂಪ. ಕೊಡು, ಸಲ್ಲಿಸು, ಸುಂಕ ಶುಲ್ಕ ಇತ್ಯಾದಿಯನ್ನು ಪಾವತಿಮಾಡು ಎಂದು ಅರ್ಥ. *ತೆರಿಗೆ* ಎಂಬ ಪದ ಅದರಿಂದಲೇ ಬಂದದ್ದು. *ತೆರು* ಕ್ರಿಯಾಧಾತುವು ಭೂತಕಾಲ ಕೃದಂತ ಅವ್ಯಯರೂಪದಲ್ಲಿ ಮಾತ್ರ *ತೆತ್ತು* ಆಗುತ್ತದೆ (ಇಡು-* ಇಟ್ಟು, ಕೊಡು-* ಕೊಟ್ಟು ಆದಂತೆ). *ನಾನು ದುಬಾರಿ ಬೆಲೆ ತೆತ್ತು ಆ ಸಿನೆಮಾ ನೋಡಿದೆ* ಎಂಬ ವಾಕ್ಯ ಸರಿ. *ದೇಶಕ್ಕಾಗಿ ಪ್ರಾಣ ತೆತ್ತ ವೀರರೇ ನಿಮಗಿದೋ ಸಲಾಂ.* ವಾಕ್ಯವೂ ಸರಿ. ಆದರೆ ತೆತ್ತುವುದು, ತೆತ್ತುವ ಎಂದು ವರ್ತಮಾನಕಾಲ/ಭವಿಷ್ಯತ್ ಕಾಲದಲ್ಲಿ ಬಳಸುವಂತಿಲ್ಲ. ನಾವು *ಕೊಡುವುದು*/*ಕೊಡುವ*/*ಕೊಡಬೇಕಾಗುತ್ತದೆ* ಎನ್ನುತ್ತೇವೆಯೇ ವಿನಾ *ಕೊಟ್ಟುವುದು*/*ಕೊಟ್ಟುವ*/*ಕೊಟ್ಟಬೇಕಾಗುತ್ತದೆ* ಅಂತೆಲ್ಲ ಬರೆಯುವುದಿಲ್ಲವಲ್ಲ? ಹಾಗಾಗಿ ತೆತ್ತುವುದು/ತೆತ್ತುವ... ಇವು ತಪ್ಪು.
ಬೇಂದ್ರೆಯವರ ಒಂದು ಪ್ರಖ್ಯಾತ ಕವಿತೆಯಲ್ಲಿ *ಒಲವೆಂಬ ಹೊತ್ತಗೆಯ ಓದಬಯಸುವ ನೀನು ಬೆಲೆಯೆಷ್ಟು ಎಂದು ಕೇಳುವಿಯೋ ಹುಚ್ಚ? ಹಗಲಿರುಳು ದುಡಿದರೂ ಹಲಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ| * ಎಂದು ಬರುತ್ತದೆ. ವ್ಯಾಕರಣರೀತ್ಯಾ *ತೆತ್ತಲಾರೆ* ಎನ್ನುವುದು ತಪ್ಪು. *ತೆರಲಾರೆ* ಆಗಬೇಕು (ಕೆಲವು ಪಾಠಾಂತರಗಳಲ್ಲಿ ಆರೀತಿ ಮುದ್ರಿತವಾಗಿದೆ). ಆದರೆ ಕವಿಗಳಿಗೆ ವ್ಯಾಕರಣದಿಂದ ಅಲ್ಪಸ್ವಲ್ಪ ವಿನಾಯಿತಿ ಇರುತ್ತದೆ. ಅಲ್ಲದೆ, ಪದಗಾರುಡಿಗ ಬೇಂದ್ರೆಯವರು ಆ ಕವಿತೆಯಲ್ಲಿ *ಹೊತ್ತಗೆಯ*, *ನೆತ್ತರಲಿ*, *ಚಿತ್ರಚಿತ್ರಾಕ್ಷರ*, *ನಕ್ಷತ್ರ* ಮುಂತಾದ ಪದಗಳಲ್ಲಿ ತ ವ್ಯಂಜನಕ್ಕೆ ಒತ್ತು ಇರುವ ಪದಗಳನ್ನು ಬಳಸಿದ್ದರಿಂದ ಬೇಕಂತಲೇ *ತೆತ್ತಲಾರೆ* ಎಂದಿರಬಹುದು. ಮಾತ್ರೆ ಲೆಕ್ಕಕ್ಕಾಗಿಯೂ ಹಾಗೆ ಮಾಡಿರಬಹುದು.
====
3. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಕೆಲವು ಪದಗಳ ಸರಿ ರೂಪ :
ಅ) ಭೋದನೆ ಮತ್ತು ಸಂಭೋದನೆ ತಪ್ಪು. ಬೋಧನೆ ಮತ್ತು ಸಂಬೋಧನೆ ಸರಿ.
ಆ) ಜಿಗುಪ್ಸೆ ತಪ್ಪು. ಜುಗುಪ್ಸೆ ಸರಿ.
ಇ) ದುರಾದೃಷ್ಟ ಮತ್ತು ಅನಾನುಕೂಲ ತಪ್ಪು. ದುರದೃಷ್ಟ ಮತ್ತು ಅನನುಕೂಲ ಸರಿ.
ಈ) ಸ್ಥಿಮಿತ ತಪ್ಪು. ಸ್ತಿಮಿತ ಸರಿ.
ಉ) ವೇಷ ಸರಿ, ವೇಶ ತಪ್ಪು. ಆದರೆ ಸನ್ನಿವೇಶ ಸರಿ, ಸನ್ನಿವೇಷ ತಪ್ಪು.
ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
ಮುಂದುವರಿಯುವುದು.............
FEEDBACK: samarasasudhi@gmail.com



