HEALTH TIPS

ಚುಟುಕು ಸಾಹಿತ್ಯ ಸಂಭ್ರಮದಲ್ಲಿ ಕುತೂಹಲ ಮೂಡಿಸಿದ ಹೊಸ ಓದು-ಪುಸ್ತಕ ವಿಮರ್ಶೆ


       ಉಪ್ಪಳ: ನಾಡು-ನುಡಿ, ಜನಪದ ಪರಂಪರೆಯ ದಾಖಲೀಕರಣ, ಅವಲೋಕನಗಳು ವರ್ತಮಾನದ ತಲ್ಲಣಗಳಿಗೆ ಭರವಸೆಯ ಪರಿಹಾರಗಳನ್ನು ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗದ ನಿವೃತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಹಾಗೂ ಸಂಶೋಧಕ ಶ್ರೀಕೃಷ್ಣ ಭಟ್ ಅರ್ತಿಕಜೆ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ "ತುಪ್ಪಶನ ಉಂಬಲೆ" ಕೃತಿಯು ಕೈದೀವಿಗೆಯಾಗಿದೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಸಂಶೋಧನಾ ವಿದ್ಯಾರ್ಥಿ ರವಿಶಂಕರ ಜಿ.ಕೆ.ಕೆದಂಬಾಡಿ ಅವರು ತಿಳಿಸಿದರು.
     ದಕ್ಷಿಣ ಕನ್ನಡ ಜಿಲ್ಲಾಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ಮತ್ತು ಸವಿ ಹೃದಯದಕವಿ ಮಿತ್ರರು ಪೆರ್ಲ ಕಾಸರಗೋಡು ಸಂಘಟನೆಗಳ ಜಂಟಿ ಆಶ್ರಯದಲ್ಲಿ ಶನಿವಾರ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುಟುಕು ಸಂಭ್ರಮ-2119 ಕಾರ್ಯಕ್ರಮದಲ್ಲಿ ಆಯೋಜಿಸಲಾದ ಹೊಸ ಓದು ಪುಸ್ತಕ ವಿಮರ್ಶೆಯಲ್ಲಿ ಅವರು ಮಾತನಾಡಿದರು.
    ದಕ್ಷಿಣ ಕನ್ನಡ, ಕಾಸರಗೋಡು ಸಹಿತ ಕರಾವಳಿಯಾದ್ಯಂತ ನೆಲಸಿರುವ ಹವ್ಯಕ ಬ್ರಾಹ್ಮಣರ ಆಚಾರ-ವಿಚಾರಗಳು ತುಳುನಾಡಿನ ಸಂಸ್ಕøತಿಯೊಂದಿಗೆ ಮಿಳಿತಗೊಂಡು ಹೊಸ ಸೃಷ್ಟಿಗೆ ಕಾರಣವಾಗಿದೆ ಎಂದ ಅವರು, ತುಳುನಾಡಿನ ಸಮಗ್ರ ಪರಂಪರೆಗೆ ಹಿಡಿದ ಕೈಗನ್ನಡಿಯಾಗಿ ಕೃತಿ ರೂಪುಗೊಂಡಿದೆ ಎಂದು ತಿಳಿಸಿದರು. ತುಳುನಾಡಿನ ಕೃಷಿಯನ್ನು ಪ್ರವೃತ್ತಿಯನ್ನಾಗಿ ಬಳಸಿದ ಹವ್ಯಕರು ತುಳು ಆಚರಣೆ,ನಂಬಿಕೆ, ಜೀವನ ಕ್ರಮಗಳನ್ನು ಅನುಸಂಧಾನಗೊಳಿಸಿ ವಿಶಿಷ್ಟ ಪರಂಪರೆಯನ್ನು ಮುನ್ನಡೆಸಿದ ಬಗ್ಗೆ ಈ ಕೃತಿ ಬೆಳಕು ಚೆಲ್ಲುವಲ್ಲಿ ಪರಿಪೂರ್ಣವಾಗಿ ಮೂಡಿಬಂದಿದೆ ಎಂದರು.
    ಬದಿಯಡ್ಕದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಯುವ ಸಾಹಿತಿ ಬಿ.ಎಸ್.ಏತಡ್ಕ ಅವರ ಚೊಚ್ಚಲ ಕಥಾ ಸಂಕಲನ "ತಿರುವು" ಕೃತಿಯ ಬಗ್ಗೆ ವಿಮರ್ಶೆ ಮಂಡಿಸಿದ ಯುವ ವಿಮರ್ಶಕಿ, ಕವಯಿತ್ರಿ ಚೇತನಾ ಕುಂಬಳೆ ಅವರು ಮಾತನಾಡಿ, ಭಾವನೆಗಳು, ಸಂಬಂಧಗಳು ಮೌಲ್ಯ ಕಳೆದುಕೊಳ್ಳುವ, ಜನಪರ ಕಾಳಜಿ, ಸಮಾಜಮುಖಿ ಚಿಂತನೆಗಳು ವಿರಳಗೊಳ್ಳುವ ಇಂದು ಸಂವೇದನಾಶೀಲ ಮಾಧ್ಯಮ ವರದಿಗಾರನಾಗಿ, ಸೃಜನಶೀಲ ಬರಹಗಾರನಾಗಿ ಬಿ.ಎಸ್.ಏತಡ್ಕ ಅವರ ಕಥೆಗಳು ವರ್ತಮಾನಕ್ಕೆ ಹತ್ತಿರವಾಗಿ ಓದಿಸುತ್ತದೆ ಎಂದು ತಿಳಿಸಿದರು. ತಿರುವು ಕಥಾ ಸಂಕಲನದಲ್ಲಿ ಪುರುಷನ ಅಹಂಕಾರಕ್ಕೆ ದಹಿಸುವ ಹೆಣ್ಣಿನ ರೋಧನ, ರೈತರ ಸಮಸ್ಯೆಗಳೊಂದಿಗೆ ಕನಸುಗಳು ಸುಂದರವಾಗಿದ್ದರೂ ವಾಸ್ತವ ಕಹಿಯಾಗಿದೆ ಎಂಬ ಸತ್ಯದ ಅರಿವು, ನಾವೇ ಸೃಷ್ಟಿಸಿರುವ ಜಲಪ್ರಳಯ, ಪ್ರಕೃತಿ ವಿಕೋಪಗಳ ಹೃದಯ ಕಲಕುವ ನೋಟಗಳು, ಪಾಶ್ಚಿಮಾತ್ಯದ ಸಲಿಂಗ ಕಾಮದ ಕರಾಳತೆ, ಭಗ್ನಪ್ರೇಮಿಯ ಅಂತರಂಗ, ಪ್ರಗತಿಶೀಲ ಹೆಣ್ಣೊಬ್ಬಳ ಬಗ್ಗೆ ಸಮಾಜದ ದೃಷ್ಟಿ ಮೊದಲಾದ ವಿಷಯಗಳ ಭಿನ್ನ ಚಿಂತನೆಗಳ ಕಥೆಗಳು ಗಡಿನಾಡಿನ ಕನ್ನಡ ಸಾಹಿತ್ಯ ಲೋಕದ ಉತ್ತಮ ಕಥೆಗಳಾಗಿ ಮೂಡಿಬರುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
     ಚುಟುಕು ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷ ವೆಂಕಟ್ ಭಟ್ ಎಡನೀರು, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ತಾರಾನಾಥ ಬೋಳಾರ್, ಸವಿ ಹೃದಯದ ಕವಿ ಮಿತ್ರರು ವೇದಿಕೆಯ ಸಂಚಾಲಕ ಸುಭಾಷ್ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ವಿಮರ್ಶಕರೀರ್ವರ ತಲಸ್ಪರ್ಶಿ ಪುಸ್ತಕ ವಿಮರ್ಶೆಯು ಸಮಾರಂಭದಲ್ಲಿ ನೆರೆದಿದ್ದ ಉತ್ಸಾಹಿ ಸಾಹಿತ್ಯ ಓದುಗರಿಗೆ ತೃಪ್ತಿ ನೀಡುವಲ್ಲಿ ಯಶಸ್ವಿಯಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries