ಬದಿಯಡ್ಕ: ರಸ್ತೆಯ ಒಂದು ಬದಿಯಲ್ಲಿ ಮಣ್ಣು ಕುಸಿದು ಬಿದ್ದು ವರ್ಷಗಳಾದರೂ ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಅಸಮಾಧಾನವುಂಟಾಗಿದೆ. ಬದಿಯಡ್ಕ ಕುಂಬಳೆ ರಸ್ತೆಯಲ್ಲಿ ಬದಿಯಡ್ಕ ಪೊಲೀಸ್ ಠಾಣೆಗಿಂತ ಸ್ವಲ್ಪ ಮುಂದೆ ತಿರುವಿನಲ್ಲಿ ರಸ್ತೆಯ ಒಂದು ಬದಿಯಲ್ಲಿ ಸುಮಾರು 4-5 ಫೀಟ್‍ಗಳಷ್ಟು ಸ್ಥಳದಲ್ಲಿ ಮಣ್ಣು ಕುಸಿದಿದ್ದು ವಾಹನ ಚಾಲಕರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಮಳೆಗಾಲ ಪ್ರಾರಂಭವಾಗಿದ್ದು, ರಸ್ತೆಯ ಬದಿಯಲ್ಲಿ ಕಾಡು, ಪೊದೆಗಳು ಬೆಳೆದಿವೆ. ರಸ್ತೆಯ ಬಿಳಿಗೆರೆಯ ಸಮೀಪದಲ್ಲಿಯೇ ಈ ಕುಸಿತವುಂಟಾಗಿದ್ದು, ಘನ ವಾಹನಗಳು ಇತರ ವಾಹನಗಳಿಗೆ ಸಂಚಾರ ಅವಕಾಶ ನೀಡುವ ಭರದಲ್ಲಿ ಅಪಾಯವುಂಟಾಗಲಿದೆ. ಇದೀಗ ಆ ಸ್ಥಳದಲ್ಲಿ ಕಲ್ಲನ್ನು ಇರಿಸಲಾಗಿದೆ. ಇತ್ತೀಚೆಗೆ ಕಾರೊಂದು ನಿಯಂತ್ರಣ ತಪ್ಪಿ ಅಲ್ಲೇ ಸಮೀಪದ ಹೊಂಡಕ್ಕೆ ಬಿದ್ದು ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರು.
ದಿನನಿತ್ಯ ಸಹಸ್ರಾರು ವಾಹನಗಳು ಓಡಾಡುವ ಈ ರಸ್ತೆಯ ಎರಡೂ ಬದಿಗಳಲ್ಲಿ ಅಲ್ಲಲ್ಲಿ ತ್ಯಾಜ್ಯಗಳ ರಾಶಿಯಿದೆ. ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟ ಅದೆಷ್ಟೋ ತ್ಯಾಜ್ಯಗಳಿಂದ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಮಳೆಗಾಲದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ನೀರುತುಂಬಿ ಅದರಲ್ಲಿದ್ದ ಮಾಂಸಗಳು, ಕೋಳಿ ತ್ಯಾಜ್ಯ ಹಾಗೂ ಇನ್ನಿತರು ವಸ್ತುಗಳು ಕೊಳೆಯುತ್ತಿದೆ. ಸೊಳ್ಳೆಗಳು, ವಿವಿಧ ಪಕ್ಷಿಗಳು, ಬೀಡಾಡಿ ನಾಯಿಗಳು ಈ ತ್ಯಾಜ್ಯವನ್ನು ಬೇರೆಡೆಗೆ ಕಚ್ಚಿ ಕೊಂಡೊಯ್ಯುತ್ತಿರುವುದೂ ಬಹುದೊಡ್ಡ ಸಮಸ್ಯೆಯಾಗಿದೆ.


