ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯತಿ ಜಲ ಶಕ್ತಿ ಅಭಿಯಾನದ ಅಂಗವಾಗಿ `ಬಿದಿರು ಕೃಷಿ' ಯೋಜನೆಗೆ ಕಾಡಮನೆ ಮಾಡತ್ತಡ್ಕದಲ್ಲಿ ಪಂಚಾಯತಿ ಮಟ್ಟದಲ್ಲಿ ಶನಿವಾರ ಚಾಲನೆಯನ್ನು ನೀಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇದುವರೆಗೆ ಬತ್ತದೇ ಇರುವ ಸಾಂಪ್ರದಾಯಿಕ ನೀರಿನ ಸೆಲೆಗಳು ಇಂದು ಬತ್ತಿಹೋಗಿವೆ. ಸುರಂಗ, ಕೆರೆ, ಬಾವಿಗಳು ಬತ್ತಿ ಹೋಗಿ ಜನರು ಕೊಳವೆ ಬಾವಿಯನ್ನು ಆಶ್ರಯಿಸಬೇಕಾಗಿ ಬಂದಿದ್ದು, ಭೂಮಿಯ ಅಂತರ್ಜಲ ಮಟ್ಟದ ವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಬಿದಿರು ಕೃಷಿಯ ಮೂಲಕ ಭೂಮಿಗೆ ನೀರಿಂಗಿಸುವ ಮಹತ್ತರವಾದ ಯೋಜನೆಯು ಇಂದು ಜಿಲ್ಲೆಯಾದ್ಯಂತ ಆರಂಭವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ಮುತುವರ್ಜಿವಹಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿ ಮುಂದಿನ ತಲೆಮಾರಿಗೆ ಜೀವಜಲವನ್ನು ನೀಡಬೇಕಾಗಿದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯ ವಿಶ್ವನಾಥ ಪ್ರಭು ಕರಿಂಬಿಲ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಿರಿಯರ ಕಾಲದಲ್ಲಿ ಎಲ್ಲೆಡೆ ಬಿದಿರು ಕಂಡುಬರುತ್ತಿತ್ತು. ಕಾಡುಗಳು ಹೋಗಿ ನಾಡಾಗುವುದರೊಂದಿಗೆ ಅವೆಲ್ಲವೂ ಮಾಯವಾಗಿದ್ದು, ಇಂದು ಪುನಃ ಕೃಷಿ ಮಾಡಬೇಕಾಗಿ ಬಂದಿದೆ. ಇನ್ನಾದರೂ ನಾವೆಲ್ಲ ಎಚ್ಚೆತ್ತುಕೊಂಡು ಭವಿಷ್ಯವನ್ನು ಭದ್ರಪಡಿಸಬೇಕಾಗಿದೆ ಎಂದರು.
ಗ್ರಾಮಪಂಚಾಯತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಕಡಾರು ಮಾತನಾಡಿ ಬಿದಿರು ಕೃಷಿಯ ಮೂಲಕ ಭೂಮಿಯ ಜಲಸಂಪನ್ಮೂಲ ವೃದ್ಧಿಯಾಗುವುದಲ್ಲದೆ ಜನರ ಆರ್ಥಿಕ ಪ್ರಗತಿಗೂ ಕಾರಣವಾಗಲಿದೆ. ಗ್ರಾಮೀಣ ಭಾಗದಲ್ಲಿ ಗುಡಿಕೈಗಾರಿಕೆಗೆ ಉತ್ತೇಜನ ಲಭಿಸಿದಂತಾಗುತ್ತದೆ. ಬಿದಿರನ್ನು ಉಪಯೋಗಿಸಿ ಮಾಡುವ ಅನೇಕ ಉತ್ಪನ್ನಗಳಿಗೂ ಇದು ಬಳಕೆಯಾಗಲಿದೆ ಎಂದು ತಿಳಿಸಿದರು.
ಬದಿಯಡ್ಕ ಕೃಷಿ ಭವನದ ಕೃಷಿ ಅಧಿಕಾರಿ ಮೀರಾ ಶುಭಾಶಂಸನೆಗೈದರು. ಕೃಷಿ ಸಹಾಯಕ ಜಯರಾಮ, ರಾಧಾಕೃಷ್ಣ, ಉದ್ಯೋಗ ಖಾತರಿಯ ಸಾಜಿದಾ, ಹೈದರಾಲಿ, ರಜಿತ, ಬಿದಿರು ಕೃಷಿಗೆ ಸ್ಥಳದಾನವನ್ನು ಮಾಡಿದ ನಾರಾಯಣ ನಾಯ್ಕ ಮಾಡತ್ತಡ್ಕ ಜೊತೆಗಿದ್ದರು. ಗ್ರಾಮಾಧಿಕಾರಿ ಜೋನ್ಸನ್ ಸ್ವಾಗತಿಸಿ, ಉದ್ಯೋಗ ಖಾತರಿ ಯೋಜನೆಯ ಅಭಿಯಂತರೆ ಅಶ್ವತಿ ವಂದಿಸಿದರು.


