ಮಂಜೇಶ್ವರ: ಉತ್ತರಕಾಂಡ ಕಾದಂಬರಿಯು ಸೀತಾ ಕೇಂದ್ರಿತವಾದದ್ದು. ಇಲ್ಲಿ ಪೂರ್ವ ಭಾಗದ ರಾಮ ಆದರ್ಶ ರಾಮನಾದರೆ ಉತ್ತರ ಭಾಗದ ರಾಮ ಅಧಿಕಾರ ಕೇಂದ್ರಿತ ರಾಮನಾಗಿದ್ದಾನೆ. ಸೀತೆ ಆಧುನಿಕ ಸ್ತ್ರೀ ಪ್ರತಿನಿಧಿಯಾಗಿದ್ದಾಳೆ ಎಂದು ಚಿಂತಕ, ಪ್ರಾಧ್ಯಾಪಕ ಡಾ.ಡಿ.ವಿ.ಪ್ರಕಾಶ್ ಅವರು ವಿಮರ್ಶಾ ಚಿಂತನೆ ವ್ಯಕ್ತಪಡಿಸಿದರು.
ಪ್ರಾಧ್ಯಾಪಕ, ಸಾಹಿತಿ ಡಾ.ಟಿ.ಎ.ಎನ್.ಖಂಡಿಗೆ ಅವರ ಕಣ್ವತೀರ್ಥದಲ್ಲಿರುವ ನಿವಾಸದಲ್ಲಿ ಭಾನುವಾರ ಆಯೋಜಿಸಲಾಗಿದ್ದ "ಈ ಹೊತ್ತಿಗೆ ಈ ಹೊತ್ತಗೆ" ಸರಣಿ ಪುಸ್ತಕ ವಿಮರ್ಶೆ, ಸಂವಾದದ 10ನೇ ಕಾರ್ಯಕ್ರಮದಲ್ಲಿ ಡಾ.ಎಸ್.ಎಲ್.ಬೈರಪ್ಪ ಅವರ ಉತ್ತರ ಕಾಂಡ ಕಾದಂಬರಿಯ ಬಗ್ಗೆ ಮುಖ್ಯ ಅತಿಥಿಗಳಾಗಿ ಕೃತಿ ವಿಶ್ಲೇಷಣೆ ನಡೆಸಿ ಮಾತನಾಡಿದರು.
ದೈವತ್ವ, ಅತಿಮಾನುಷತೆಯನ್ನು ರಾಮನ ಬಗೆಗೆ ಹೊರಗಿಟ್ಟು ಉತ್ತರ ಕಾಂಡವನ್ನು ಅರ್ಥೈಸಿದರಷ್ಟೆ ಉದ್ಗ್ರಂಥ ಒಳ ದನಿಗೆ ತಟ್ಟಬಲ್ಲದು. ಉತ್ತರಾರ್ಧದ ರಾಮನು ಪ್ರಭುತ್ವವಾದಿ ವ್ಯಕ್ತಿತ್ವದಿಂದ ವಿಭಿನ್ನನಾಗಿ ಕಂಡುಬರುತ್ತಾನೆ. ಪ್ರಭುತ್ವ ಸ್ತ್ರೀಯೊಬ್ಬಳ ಮೇಲೆ ಎಷ್ಟೊಂದು ಪ್ರಭಾವ ಬೀರಿ ಅತ್ಯಂತ ನಿಕೃಷ್ಟವಾಗಿ ಬದುಕಿದಳೆಂಬ ಚಿತ್ರಣ ಅಹಲ್ಯೆಯ ಚಿತ್ರಣದಲ್ಲಿ ಬೈರಪ್ಪನವರು ಮಾರ್ಮಿಕವಾಗಿ ಪ್ರತಿಬಿಂಬಿಸಿದ್ದು, ಇಂತಹ ದೃಷ್ಟಿ ಬೈರಪ್ಪನವರಿಂದ ಮಾತ್ರ ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವೇದ, ಶಾಸ್ತ್ರಗಳಿಂದ ಪ್ರಣೀತನಾಗಿ ಅದರಂತೆ ನಡೆದ ರಾಮ ಒಂದೆಡೆ ಧರ್ಮ ಸಂಘರ್ಷದ ಪ್ರಶ್ನೆಗಳಲ್ಲಿ ನಿರುತ್ತರನಾಗಿರುವುದು ಕಂಡುಬರುತ್ತದೆ. ಸೀತೆಯ ಮನೋಭೂಮಿಕೆಯಲ್ಲಿ ರಾಮನನ್ನು ಪ್ರಶ್ನಿಸಿದ್ದು, ತಾನು ಆ ಮೂಲಕ ಅನುಭವಿಸುತ್ತಿರುವ ವೇದನೆಗೆ ವರ್ತಮಾನದ ಸ್ತ್ರೀ ಮನೋಭೂಮಿಕೆಯ ಮೂಲಕ ಬೈರಪ್ಪ ಅಪೂರ್ವವಾಗಿ ಚಿತ್ರಿಸಿರುವುದು ಗ್ರಂಥವನ್ನು ವಿಶಿಷ್ಟ ದೃಷ್ಟಿಕೋನದಲ್ಲಿ ನೋಡುವಂತೆ ಮಾಡಿದೆ ಎಂದು ಅವರು ವಿಶ್ಲೇಶಿಸಿದರು. ಸೀತೆ ಭಾರತದ ಪ್ರತಿಮೆಯಾಗಿ ಇಂದಿಗೂ ಪ್ರಸ್ತುತ ಎಂದ ಅವರು, ಈ ಕೃತಿಯಲ್ಲಿ ಒಳಪಾತ್ರಗಳ ಕಾವ್ಯ ವಿನ್ಯಾಸವೇ ಕಾವ್ಯ ಸತ್ಯವನ್ನು ಕಟ್ಟಿಕೊಡುವ ಮುಖ್ಯ ಪಾತ್ರಗಳು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಈಶ್ವರ ಮಾಸ್ತರ್ ಉಪಸ್ಥಿತರಿದ್ದರು. ಸಂಯೋಜಕ ಡಾ.ಟಿ.ಎ.ಎನ್.ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಪುರಾಣ ಪಾತ್ರಗಳನ್ನು ವಿಶ್ಲೇಷಣಾತ್ಮಕವಾಗಿ ವರ್ತಮಾನದಲ್ಲಿ ನಿಂತು ನೋಡುವ ಮನೋಭೂಮಿಕೆಯಿಂದ ಹೆಚ್ಚು ನಿಖರತೆಯೊಂದಿಗೆ ತುಮುಲಗಳಿಗೆ ಅರ್ಥ ನೀಡುವಲ್ಲಿ ಸಾಫಲ್ಯಗೊಳ್ಳುತ್ತದೆ. ಹೊಸ ತಲೆಮಾರಿಗೆ ಓದುವ ಹುಚ್ಚು ಹತ್ತಿಸಿದ ಬೈರಪ್ಪನವರ ಅಕ್ಷರ ಕ್ರಾಂತಿ ಕನ್ನಡ ಸಾರಸ್ವತ ಲೋಕದ ಮಹತ್ವದ ದಾಖಲೆ ಎಂದು ತಿಳಿಸಿ, ಸ್ವಾಗತಿಸಿದರು. ಶಿಕ್ಷಕಿ, ಸಹಸಂಯೋಜಕಿ ಕವಿತಾ ಟಿ.ಎ.ಎನ್.ಖಂಡಿಗೆ ಅವರು ಆಧುನಿಕ ಸ್ತ್ರೀವಾದ, ಮುಗಿಯದ ಸ್ತ್ರೀಶೋಷಣೆಗೆ ಪ್ರತಿಮೆಯಾಗಿ ಸೀತೆಯನ್ನು ಬೈರಪ್ಪ ಅವರು ತಮ್ಮ ಕಾದಂಬರಿಯಲ್ಲಿ ಚಿತ್ರಿಸಿರುವುದು ಪರಿಣಾಮಕಾರಿಯಾಗಿದ್ದು, ಗಂಭೀರ ಚಿಂತನೆಗೆ ಹಚ್ಚುತ್ತದೆ ಎಂದು ತಿಳಿಸಿ ವಂದಿಸಿದರು.


