HEALTH TIPS

ಸಮರಸ ಈ ಹೊತ್ತಿಗೆ ಹೊಸ ಹೊತ್ತಗೆ-ಸಂಚಿಕೆ:30-ಪುಸ್ತಕ-ಮೋಡದ ಮರೆಯಲಿ ನನ್ನೆದೆಯ ಬಾನುಲಿ-ಸಮೀಕ್ಷೆ:ಚೇತನಾ ಕುಂಬಳೆ

     
             ಪುಸ್ತಕ: ಮೋಡದ ಮರೆಯಲಿ ನನ್ನೆದೆಯ ಬಾನುಲಿ (ಕವನ ಸಂಕಲನ)
             ಲೇಖಕರು : ಸೋಮು ಎಚ್ ಹಿಪ್ಪರಗಿ
             ಸಮೀಕ್ಷಾ ಬರಹ:ಚೇತನಾ ಕುಂಬಳೆ 
        ಅದು ಹುಣ್ಣಿಮೆಯ ರಾತ್ರಿ. ಸುತ್ತೆಲ್ಲ ಬೆಳದಿಂಗಳು ಸುರಿಯುತ್ತಿತ್ತು. ರಾತ್ರಿಯಿಡೀ ನಿದ್ರೆ ಬಿಟ್ಟು ಕವಿಗೋಷ್ಠಿಯಲ್ಲಿ ಸಂಭ್ರಮಿಸಿದ್ದೆವು. ಹೌದು ಅದು ಶೇಖರ್ ಅಜೆಕಾರು ಅವರ ನೇತೃತ್ವದಲ್ಲಿ ಮೂಡಬಿದ್ರೆ ಹತ್ರ ನಡೆದ 9ನೇ ಬೆಳದಿಂಗಳ ಸಾಹಿತ್ಯ ಸಮ್ಮೇಳನ. ರಾತ್ರಿಯಿಂದ ಬೆಳಗ್ಗೆ ತನಕ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ನಾನೂ ಭಾಗವಹಿಸಿದ್ದೆ. ಒಂದು ಮಲಯಾಳ ಕವನವನ್ನು ವಾಚಿಸಿದ್ದೆ.  ಆ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಜಯ ಮಣಿಯಂಪಾರೆ, ಡಾ. ಅಶೋಕ್ ಕುಮಾರ್ ಕಾಸರಗೋಡು, ಕಾತ್ಯಾಯನಿ ಕುಂಜಿಬೆಟ್ಟು, ಗಣೇಶ್ ಆದ್ಯಪಾಡಿಯವರ ಜೊತೆಗೆ ಮೊಗದಲ್ಲಿ ಮುಗ್ಧ ನಗು, ಬಾಯಿ ತುಂಬ ಮಾತು, ಕನಸು ಕಂಗಳ ಹುಡುಗನ ಪರಿಚಯವೂ ಆಯ್ತು. ನಾನು ಮಲಯಾಳ ಕವಿತೆ ಓದಿದ್ದನ್ನು ಗಮನಿಸಿ ಪಕ್ಕದಲ್ಲಿ ಬಂದು ಮಾತಿಗೆ ಮುನ್ನುಡಿ ಇಟ್ರು. ಅವರು ಸೋಮು ಎಚ್ ಹಿಪ್ಪರಗಿ ಬಿಜಾಪುರ ಜಿಲ್ಲೆಯ ಕನ್ನೂರ ಗ್ರಾಮದವರು. ಮಾತು ಪರಿಚಯವಾಯ್ತು. ಪರಿಚಯ ಗೆಳೆತನದ ಸ್ನೇಹಕ್ಕೆ ನಾಂದಿ ಹಾಡಿತು. ಆ ಕಾರ್ಯಕ್ರಮ ಕಳೆದು ಒಂದು ತಿಂಗಳ.ನಂತರ ಕರೆ ಮಾಡಿ ತಮ್ಮ ದೊಡ್ಡದೊಂದು ಕನಸನ್ನು ನನ್ನ ಜೊತೆ ಹಂಚಿಕೊಳ್ಳುತ್ತಾರೆ. ಎಲ್ಲರ ಸಹಕಾರದೊಂದಿಗೆ ಜುಲೈ ತಿಂಗಳಲ್ಲಿ ಮಂಗಳೂರಿನಲ್ಲಿ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಿರಿಯರ ಮಾರ್ಗದರ್ಶನದಲ್ಲಿ 'ರಾಜ್ಯ ಯುವ ಬರಹಗಾರರ ಒಕ್ಕೂಟ' ಎಂಬ ಅವರ ಕನಸು ನನಸಾಗುತ್ತದೆ.ಇವರು ಅದರ ಪ್ರಧಾನ ಕಾರ್ಯದರ್ಶಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದರ ಘಟಕಗಳು ಅನ್ಯ ರಾಜ್ಯಗಳಿಗೂ ವಿಸ್ತರಿಸಿದ್ದರಿಂದ ಕಾಸರಗೋಡಿನಲ್ಲೂ ಇದರ ಘಟಕವಿದೆ. ಹೀಗೆ ನನ್ನ  ಏಕತಾನತೆಯ ನಡಿಗೆಯಲ್ಲಿ ಒಂದು ಮಹತ್ತರ ತಿರುವಿಗೆ ಇವರು ಕಾರಣರಾಗುತ್ತಾರೆ.  ಅಂದು ಕೊಂಡದ್ದನ್ನು ಸಾಧಿಸಿ ತೋರಿಸುವ ವ್ಯಕ್ತಿ ಇವರು. ಇದರಿಂದಾಗಿ ಈಗ ಇವರು ಕಾಸರಗೋಡಿಗೂ ಚಿರಪರಿಚಿತರು.
       ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರ ಮೊದಲ ಕವನ ಸಂಕಲನ 'ಮೋಡದ ಮರೆಯಲಿ ನನ್ನೆದೆಯ ಬಾನುಲಿ' 2014ರಲ್ಲಿ ಪ್ರಕಟಗೊಂಡಿತು. ಇದಕ್ಕೆ ಸಿಂದಗಿಯ ಡಾ|ಚನ್ನಪ್ಪ ಕಟ್ಟಿ ಅವರು ಮನ್ನುಡಿಯನ್ನೂ, ವಿಜಾಪುರದ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ.ವಿಜ್ಞಾ ನ ಮಹಾ ವಿದ್ಯಾನಿಲಯದ ಇತಿಹಾಸ ವಿಭಾಗದ  ಮುಖ್ಯಸ್ಥರಾದ ಡಾ. ಸುರೇಶ್ ಬಿ. ಬಿರಾದಾರ ಬೆನ್ನುಡಿ ಬರೆದಿದ್ದಾರೆ. ಈ ಸಂಕಲನದಲ್ಲಿ ಒಟ್ಟು 30 ಕವಿತೆಗಳಿದ್ದು ವಿಭಿನ್ನ ವಸ್ತು ವಿಷಯವನ್ನೊಳಗೊಂಡಿದೆ. ಅವರು ತಮ್ಮ ಮೊದಲ ಕವಿತೆ 'ಭಾರತಾಂಬೆ'ಯಲ್ಲಿ, ಭಾರತ ಮಾತೆಯನ್ನೂ, ದೇಶ ಪ್ರೇಮ, ಅಭಿಮಾನದೊಂದಿಗೆ, ದೇಶಕ್ಕಾಗಿ ಬಲಿದಾನಗೈದವರನ್ನೂ ನೆನಯುತ್ತಾರೆ. 'ಕನ್ನಡ ತಾಯಿ' ಕವಿತೆಯಲ್ಲಿ ಕನ್ನಡ ಭಾಷೆ ಕನ್ನಡ ನಾಡನ್ನಾಳಿದ ರಾಜವಂಶಗಳನ್ನು ಕವಿಗಳನ್ನು ಸ್ಮರಿಸುವುದರೊಡನೆ ಕವಿಗಳ ಕಾವ್ಯದ ಸವಿಯನ್ನು ಓದಿ  ತಿಳಿದುಕೊಳ್ಳಬೇಕೆಂದು ಹೇಳುತ್ತಾರೆ. 'ನಮ್ಮೂರ ಸಿರಿ, ನಮ್ಮೂರ ನೋಡ ಬಾರ' ಕವಿತೆಗಳಲ್ಲಿ ತಮ್ಮ ವಿಜಾಪುರ ಜಿಲ್ಲೆಯನ್ನೂ, ತಮ್ಮ ಗ್ರಾಮವನ್ನೂ ಹೊಗಳುವುದನ್ನೂ ಆ ಊರಿನ ಮೇಲೆ ಅವರಿಟ್ಟ ಅಭಿಮಾನವನ್ನು ಪ್ರೀತಿಯನ್ನು ಕಾಣಬಹುದು. ಅಲ್ಲಿನ ಹಬ್ಬಗಳ ಬಗ್ಗೆಯು ಹೇಳುತ್ತಾರೆ. ಕೆಲವೊಂದು ಕವಿತೆಗಳಲ್ಲಿ, ತನ್ನ ಕನಸಿನ ಹುಡುಗಿ, ಅಧಾರ್ಂಗಿ, ಆಕೆಯೊಂದಿಗೆ ಕಟ್ಟಿಕೊಳ್ಳಬೇಕಿರುವ ಹೊಸ ಬದುಕಿನ ಬಗ್ಗೆ ತಮ್ಮ ಕನಸುಗಳನ್ನು ಹಂಚಿಕೊಳ್ಳುತ್ತಾರೆ. ಬಡವರ ಸ್ಥಿತಿಗತಿಗಳನ್ನು, ಶ್ರೀಮಂತ-ಬಡವರ ನಡುವಿನ ಅಂತರವನ್ನು ಹೇಳುತ್ತಾ ಬಡತನದ ವಾಸ್ತವ ಚಿತ್ರಣವನ್ನು ನೀಡುತ್ತಾರೆ. ಅಸಹಾಯಕರಿಗಾಗಿ,  ಬಡವರಿಗಾಗಿ ಮಿಡಿವ ಹೃದಯವನ್ನು ಗಮನಿಸಬಹುದು. ತನಗೆ ವಿದ್ಯೆ ಕಲಿಸಿದ ಗುರುಗಳಿಗೆ ಅಕ್ಷರರೂಪದಲ್ಲಿ ಕೃತ ಜ್ಞ ನಾಗಿರುವುದನ್ನು ನೋಡಬಹುದು.
     ಬಡವ ಬಲ್ಲಿದರೆದೆಯ ಭತ್ತವಾಗಬೇಕೆಂದೂ, ಸತ್ಯ ಶಾಂತಿ ನ್ಯಾಯವನ್ನು ಎತ್ತಿ ಹಿಡಿಯಬೇಕೆಂದೂ ಹಕ್ಕಿಯಾಗಿ ರೆಕ್ಕೆ ಬಿಚ್ಚಿ ಹಾರಾಡಬೇಕೆಂದು, ತನ್ನ ಜೀವದ ಉಸಿರನ್ನು ಭಾರತಾಂಬೆಗರ್ಪಿಸಬೇಕೆಂಬ ತನ್ನೊಳಗಿನ ಹಲವು ಆಸೆಗಳನ್ನು ಹೇಳಿಕೊಳ್ಳುತ್ತಾರೆ. ನವಿಲು, ನವಿಲುಗರಿ, ಕುಣಿತ ಎಲ್ಲವೂ ಕವಿಗಳ ಬರವಣಿಗೆಗೆ ಸ್ಫೂರ್ತಿಯ ಸೆಲೆ. ಹಾಗೆಯೇ ಇವರೂ ಅಂತಹ ನಾಟ್ಯರಾಣಿ ನವಿಲು ತನ್ನ'ಕಾವ್ಯದ ಸ್ಫೂರ್ತಿ' ಎನ್ನುತ್ತಾ ನವಿಲನ್ನು ಬಣ್ಣಿಸುತ್ತಾರೆ. ಬೆಳ್ಳಕ್ಕಿಯ ಸಾಲು, ಬೆರಗು ಮೂಡಿಸೋ ಕಡಲು, ಬೆಳಕು ನೀಡುವ ಸೂರ್ಯ, ಹರಿವ ನದಿ, ತಲೆಯೆತ್ತಿ ನಿಂತಿರುವ ಸಹ್ಯಾದ್ರಿ, ಬೆಟ್ಟ ಗುಡ್ಡಗಳು, ಧುಮ್ಮುಕ್ಕಿ ಹರಿವ ಜಲಪಾತಗಳು ಹೀಗೆ ನಿಸರ್ಗದ ಎಲ್ಲವನ್ನು ಕವಿತೆಯೊಳಗೆ ವರ್ಣಿಸುತ್ತಾರೆ. ಮುತ್ತಿನಂಥ ಗೆಳತಿಯ ಬಗ್ಗೆ, ಅವಳಪ್ಪ ಕೊಡಿಸಿದ, ಮನೆಯಂಗಳದಲ್ಲಿ ಹಾರಿಸಿದ ಆಕಾಶಬುಟ್ಟಿ, ಆಕೆಯೊಡನೆ ರಾತ್ರಿ ಜಾತ್ರೆಗೆ ಹೋದ ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಅಮ್ಮನ ವಾತ್ಸಲ್ಯ, ಅಗಲಿದ ಅಪ್ಪನ ಬಗೆಗಿನ ದುಃಖ, ಚುಕ್ಕಿಯಾದ ಅಜ್ಜಿಯ ಮಮತೆ ಹೀಗೆ ಎಲ್ಲವನ್ನು ಕವನಿಸುತ್ತಾರೆ. ಕೆಲವು ಕವಿತೆಗಳು ಗ್ರಾಮ್ಯ ಭಾಷೆಯ ಸೊಗಡನ್ನೂ ಒಳಗೊಂಡು ಆಪ್ತವೆನಿಸುತ್ತವೆ. ಕೆಲವೊಂದು ಚಿಕ್ಕ ಚೊಕ್ಕದಾಗಿದ್ದರೆ ಮತ್ತೊಂದಿಷ್ಟು ದೀರ್ಘ ಕವನಗಳೂ ಈ ಸಂಕಲನದಲ್ಲಿವೆ.
ಒಟ್ಟಿನಲ್ಲಿ ಇವರ ಬರವಣಿಗೆ ನಿರಂತರವಾಗಿರಲಿ, ಸಾಹಿತ್ಯದ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರಲಿ. ತಾನು ಬೆಳೆಯುವುದರೊಂದಿಗೆ ತನ್ನವರನ್ನೂ ಬೆಳೆಸುವ ಇವರ ಪ್ರವೃತ್ತಿ ಮೆಚ್ಚುವಂಥದ್ದೇ..
                                                    ಸಮೀಕ್ಷಾ ಬರಹ: ಚೇತನಾ ಕುಂಬ್ಳೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries