ಪೆರ್ಲ: ಕೇರಳ ರಾಜ್ಯ ಜಿಲ್ಲಾ ಸಾಕ್ಷರತಾ ಮಿಷನ್ ಆಯಾಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಪರಿಶಿಷ್ಟ ಜಾತಿ ಕಾಲನಿ ಅಕ್ಷರಯಾತ್ರೆ ಎಣ್ಮಕಜೆ ಗ್ರಾ.ಪಂ.ನ ಕಾಟುಕುಕ್ಕೆ ಸಮೀಪದ ಕೆಂಗಣಾಜೆ ಪ.ಜಾತಿ ಕಾಲನಿಯಲ್ಲಿ ಜರಗಿತು.
ನವ ಸಾಕ್ಷರರ ಹಾಗೂ ಸ್ಥಳೀಯ ಜನತೆಯ ಸಹಭಾಗಿತ್ವದಲ್ಲಿ ಕಾಲನಿ ಪರಿಸರಕ್ಕೆ ಅಕ್ಷರ ಸಂದೇಶ ಜಾಥವು ಜರಗಿ ಜಾಗೃತಿ ಮೂಡಿಸಿತು. ಈ ಸಂದರ್ಭದಲ್ಲಿ ಜರಗಿದ ಸಭಾ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಸದಸ್ಯೆ ಮಲ್ಲಿಕಾ.ಜೆ ರೈ ಉದ್ಘಾಟಿಸಿ ಸರ್ವರನ್ನು ಸಾಕ್ಷರರನ್ನಾಗಿಸಲು ಸರ್ಕಾರ ಹಮ್ಮಿಕೊಂಡ ಯೋಜನೆಯಲ್ಲಿ ಕೆಂಗಣಾಜೆ ಕಾಲನಿ ನಿವಾಸಿಗಳನ್ನು ಆಯ್ದು ಅಕ್ಷರ ಕ್ರಾಂತಿ ಮೂಡಿಸುವ ಸಾಕ್ಷರತಾ ಸಮಿತಿಯ ಕಾರ್ಯ ಶ್ಲಾಘನೀಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಕಾಟುಕುಕ್ಕೆ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಬಿ.ಎಸ್.ಗಾಂಭೀರ್ ವಹಿಸಿ ಮಾತನಾಡಿ, ಸಾಕ್ಷರತೆಯಿಂದ ವ್ಯಕ್ತಿಗೆ ಅಕ್ಷರದ ಜ್ಞಾನ ಮಾತ್ರವಲ್ಲದೆ ಸಂಸ್ಕಾರದ ಸುಜ್ಞಾನವು ಮೂಡಲು ಸಾಧ್ಯ ಎಂದರು. ಜಿಲ್ಲಾ ಪ್ರೇರಕ್ ಪರಮೇಶ್ವರ ನಾಯ್ಕ ಅಕ್ಷರ ಯಾತ್ರೆಯ ಬಗ್ಗೆ ಉಪನ್ಯಾಸ ನೀಡಿದರು. ಕೆಂಗಣಾಜೆ ಅಂಗನವಾಡಿ ಅಧ್ಯಾಪಕಿ ಲೀಲಾ, ಸ್ಥಳೀಯ ಪ.ಜಾತಿ ಪ್ರಮೋಟರ್ ಶಶಿಧರ ಪೆರ್ಲತ್ತಡ್ಕ ಉಪಸ್ಥಿತರಿದ್ದರು. ಎಣ್ಮಕಜೆ ಗ್ರಾ.ಪಂ.ಸಾಕ್ಷರತಾ ಪ್ರೇರಕ್ ಆನಂದ ಕುಕ್ಕಿಲ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.


