ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ.
೧. ಭೋ ಜನರು ಸೇರಿದ್ದಲ್ಲಿ ಹೀಗಿತ್ತು ಭೋಜನ ಪಟ್ಟಿ!
ಎರಡು ವಾರಗಳ ಹಿಂದೆ ಅಮೆರಿಕದ ಸಿನ್ಸಿನ್ನಾಟಿ ನಗರದಲ್ಲಿ ಮೂರು ದಿನಗಳ ಕಾಲ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಘಟನೆಯು ಐದನೆಯ ಸಮ್ಮೇಳನವನ್ನು ನಡೆಸಿತು. ಸುಮಾರು ಎರಡು ಸಾವಿರದಷ್ಟು ಕನ್ನಡಿಗರು ಅಮೆರಿಕದ ವಿವಿಧೆಡೆಗಳಿಂದ, ಭಾರತದಿಂದ, ಮತ್ತು ಬೇರೆ ಕೆಲವು ದೇಶಗಳಿಂದ ಬಂದವರು ಸೇರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಹಿತ್ಯಗೋಷ್ಠಿಗಳು, ವ್ಯಾಪಾರ ಮಳಿಗೆಗಳು ಇತ್ಯಾದಿ ಎಲ್ಲ ಇದ್ದವು. ಸಮ್ಮೇಳನ ಚೆನ್ನಾಗಿತ್ತು, ಯುವಸಂಸದ ತೇಜಸ್ವಿ ಸೂರ್ಯ ಭಾಷಣದಲ್ಲಿ ಕನ್ನಡ ಸಂಸ್ಕೃತಿಯ ಹೊಳಪು ವಿಶೇಷವಾಗಿ ಇತ್ತು ಎಂದು ಭಾಗವಹಿಸಿದವರ ಒಟ್ಟಾರೆ ಅಭಿಪ್ರಾಯ.
ಈ ಸಮ್ಮೇಳನದಲ್ಲಿ ಭೋಜನಾಲಯದ ಹೊರಗೆ ದೊಡ್ಡದೊಂದು ಫಲಕ ಪ್ರದರ್ಶಿಸಿದ್ದರು. ಅದರಲ್ಲಿ, ಮೂರೂ ದಿನಗಳ ಮೂರೂ ವೇಳೆಗಳ ಊಟ-ತಿಂಡಿ ವಿವರಗಳನ್ನು ಬರೆದದ್ದಿತ್ತು. ಒಳ್ಳೆಯ ಉದ್ದೇಶದಿಂದ ಮಾಡಿದ ಒಳ್ಳೆಯ ವ್ಯವಸ್ಥೆಯೇ. ಆದರೆ ಮುಜುಗರವೆನಿಸಿದ್ದೇನೆಂದರೆ, ಕನ್ನಡ ಸಮ್ಮೇಳನದಲ್ಲಿ ಸೇರಿದ್ದ ಕನ್ನಡಿಗರು ಇಂಗ್ಲಿಷ್‌ನಲ್ಲಿ ಊಟ-ತಿಂಡಿ ವಿವರ ಓದಬೇಕಾಗಿ ಬಂದದ್ದು, ಮತ್ತು, ಫಲಕದಲ್ಲಿ ಬಳಸಲಾದ ಒಟ್ಟು ನಾಲ್ಕೇ ನಾಲ್ಕು ಕನ್ನಡ ಪದಪುಂಜಗಳಲ್ಲಿ ಮೂರು ತಪ್ಪಾಗಿದ್ದದ್ದು!
ಅ) ಭೊಜನ ತಪ್ಪು. ಇದು ‘ಭೋಜನ’ ಅಂತ ಇರಬೇಕಿತ್ತು. (ಬೇಗಬೇಗ ಊಟ ಮಾಡಿಬನ್ನಿ, ದೀರ್ಘ ಸಮಯ ತಗೋಬೇಡಿ ಎಂದು ಇರಬಹುದು?)
ಆ) ಉಪಹಾರ ತಪ್ಪು. ಇದು ‘ಉಪಾಹಾರ’ ಅಂತ ಇರಬೇಕಿತ್ತು. (ಉಪ + ಆಹಾರ = ಉಪಾಹಾರ. ಸವರ್ಣದೀರ್ಘಸಂಧಿ)
ಇ) ಮಧಾಹ್ನಾದ ತಪ್ಪು. ಇದು ‘ಮಧ್ಯಾಹ್ನದ’ ಅಂತ ಇರಬೇಕಿತ್ತು.
ಆ) ಉಪಹಾರ ತಪ್ಪು. ಇದು ‘ಉಪಾಹಾರ’ ಅಂತ ಇರಬೇಕಿತ್ತು. (ಉಪ + ಆಹಾರ = ಉಪಾಹಾರ. ಸವರ್ಣದೀರ್ಘಸಂಧಿ)
ಇ) ಮಧಾಹ್ನಾದ ತಪ್ಪು. ಇದು ‘ಮಧ್ಯಾಹ್ನದ’ ಅಂತ ಇರಬೇಕಿತ್ತು.
ಹಾಗೆ ನೋಡಿದರೆ ಪಟ್ಟಿಯ ಬಹುಭಾಗ ಇಂಗ್ಲಿಷ್‌ನಲ್ಲಿದ್ದದ್ದು ಒಳ್ಳೆಯದೇ ಆಯ್ತು. ಇಲ್ಲವಾದರೆ ‘peas palav’ ಬದಲಿಗೆ ‘ಪಿಸ್ ಪಲಾವು’, bisibelebath ಬದಲಿಗೆ ‘ಬಿಸಿಬಾಲೆಬಾತ್’ ಅಂತೆಲ್ಲ ಇನ್ನೂ ಮುಜುಗರದ ತಪ್ಪುಗಳು ಕಣ್ಣಿಗೆ ರಾಚುತ್ತಿದ್ದವು, ಅಷ್ಟೇಅಲ್ಲ, ‘ಮಿಕ್ಸ್‌ಡ್ ರೈತ’, ‘ಪಂಜಾಬಿ ರೈತ’, ‘ಬೂಂದಿ ರೈತ’, ‘ಪೈನಾಪಲ್ ರೈತ...’ ಮುಂತಾಗಿ ಅನ್ನದಾತ ರೈತ ಸಮಾವೇಶವೂ ಕಂಗೊಳಿಸುತ್ತಿತ್ತು!
ಇಲ್ಲೊಂದು ನೆನಪು. ‘ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ’ ಎಂದಿದ್ದ ರಾಜರತ್ನಂ ಏನಾದ್ರೂ ಈ ಫಲಕ ನೋಡಿರುತ್ತಿದ್ದರೆ? ‘ನಾವಿಕಕ್ಕಳ್ಸಿ ನಾಲ್ಗೆಗ್ ರುಚ್‌ರುಚಿ ತಿಂಡಿ ಬಡ್ಸಿ ಆದ್ರೆ ಕನ್ನಡ ತಿರುಚಿ ಕೊಲ್ಬೇಡಿ’ ಎಂದು ಅಂಗಲಾಚುತ್ತಿದ್ದರೋ ಏನೋ. ‘ನಾವಿಕ’ವನ್ನು ತಪ್ಪಾಗಿ ‘ನಾವಿಕಾ’ ಎಂದು ಹೇಳುವವರ/ಬರೆಯುವವರ ಬಗ್ಗೆಯೂ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುತ್ತಿದ್ದರು.
[‘ನಾವಿಕ ಭೊಜನ’ ಪಟ್ಟಿಯನ್ನು ಗಮನಿಸಿ ತಿಳಿಸಿದವರು: ಜಪಾನ್‌ನಲ್ಲಿ ನೆಲೆಸಿರುವ ಕನ್ನಡಿತಿ ಅಮೃತಾ ಶಿವಕುಮಾರ್. ]
===೨. ಕೊಡು ಬಲಿ, ಸ್ಟ್ರಾಂಗಾ ಕೊಡು!
ಸಿದ್ಧ ತಿಂಡಿಗಳನ್ನು ಮಾರುವ ಕಂಪನಿಗಳು ತಿಂಡಿಯ ಹೆಸರನ್ನು, ಅಥವಾ, ಜಾಹಿರಾತಿನ ಜಿಂಗಲ್ ಸಾಲನ್ನು, ಪೊಟ್ಟಣದ ಮೇಲೆ ಬರೆದದ್ದು ಕೆಲವೊಮ್ಮೆ ಭಲೇ ಸ್ವಾರಸ್ಯಕರವಾಗಿ ಇರುತ್ತದೆ. ಒಮ್ಮೆ ಇಲ್ಲಿಯ ಇಂಡಿಯನ್ ಗ್ರೋಸರಿ ಸ್ಟೋರ್‌ನಲ್ಲಿ ಭಾರತದಿಂದ ರಫ್ತಾದ ಕೋಡುಬಳೆಗಳ ಪ್ಯಾಕೆಟ್ ಮೇಲೆ ಇಂಗ್ಲಿಷ್‌ನಲ್ಲಿ KODU BALI ಅಂತಲೂ, ಅದರ ಕೆಳಗೆ ಕನ್ನಡದಲ್ಲಿ ‘ಕೊಡು ಬಲಿ’ ಅಂತಲೂ ಅಚ್ಚಾದದ್ದಿತ್ತು! ಹೌದು, ಜಿಹ್ವಾಚಾಪಲ್ಯಕ್ಕೆ ಬಲಿ ಕೊಡುವುದಕ್ಕಲ್ಲದೆ ಶೋಕೇಸ್‌ನಲ್ಲಿಡುವುದಕ್ಕೆ ಕೊಂಡುಕೊಳ್ಳುತ್ತೇವೆಯೇ ಅದನ್ನು?
ಇದೀಗ Continental Xtra ಎಂಬ ಬ್ರ್ಯಾಂಡ್‌ನ ಇನ್ಸ್ಟಂಟ್ ಕಾಫಿಹುಡಿಯ ಜಾಹಿರಾತನ್ನು ಗಮನಕ್ಕೆ ತಂದಿದ್ದಾರೆ ಬೆಂಗಳೂರಿನಿಂದ ಅಭಿನಂದನ್ ಎಸ್.ಡಿ. ಅವರು ಈ ಜಾಹಿರಾತಿನ ತಮಿಳು ಅವತರಣಿಕೆಯನ್ನೂ ನೋಡಿದ್ದಾರೆ, ರೇಡಿಯೊ/ಟಿವಿಯಲ್ಲಿ ಕೇಳಿದ್ದಾರೆ. "ಸ್ಟ್ರಾಂಗಾ ಕುಡುಕ್ರೇನ್" ಅಂತ ತಮಿಳಿನಲ್ಲಿ ಆ ಜಿಂಗಲ್ ಲೈನ್ ಇರುವುದು. “ಸ್ಟ್ರಾಂಗ್ ಆಗಿರುವುದನ್ನು (ಕಾಫಿಯನ್ನು) ಕುಡಿಯುತ್ತೇನೆ" ಎಂದು ಅರ್ಥ. ಕನ್ನಡದಲ್ಲಿ ಅದನ್ನು "ಸ್ಟ್ರಾಂಗಾ ಕೊಡು" ಅಂತ ತರ್ಜುಮೆ ಮಾಡಲಾಗಿದೆ! ಅಣ್ಣಾವ್ರೇನಾದ್ರೂ ನೋಡಿದ್ದಿದ್ದ್ರೆ ಬಿಸಿಬಿಸಿ ಕಜ್ಜಾಯ ರುಚಿರುಚಿ ಕಜ್ಜಾಯ ಮಾಡಿ "ಕೊಡಲೇ" ನಾನು? ಎಂದು ಇನ್ನೂ ಸ್ಟ್ರಾಂಗ್ ಆಗಿ ಕೊಡುತ್ತಿದ್ದರು!
===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು
ಅ) ಮಹಾಲಯ ಸರಿ. ಚಾಂದ್ರಮಾನ ಪದ್ಧತಿಯಲ್ಲಿ ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷ ಎನ್ನುತ್ತೇವೆ. ಅದರಲ್ಲಿ ಪಿತೃಗಳ ಪ್ರೀತ್ಯರ್ಥ ಮಾಡುವ ಶ್ರಾದ್ಧಕಾರ್ಯಕ್ಕೆ ಮಹಾಲಯ ಎನ್ನುತ್ತೇವೆ. ಪಿತೃಪಕ್ಷ ಮುಗಿಯುವ ಅಮಾವಾಸ್ಯೆ(ಅಮವಾಸ್ಯೆ ಅಲ್ಲ) ಮಹಾಲಯ ಅಮಾವಾಸ್ಯೆ. ‘ಹತ್ತು ಕೈಬೆರಳುಗಳಿಗೆ ಹತ್ತು ಉಂಗುರ ಧರಿಸುವ ಟಿವಿ ಜ್ಯೋತಿಷಿ’ಯೊಬ್ಬರು ಸೇರಿದಂತೆ ಹಲವು ಪ್ರೌಢ-ಪಂಡಿತರು ಕೂಡ ಮಹಾಲಯವನ್ನು ‘ಮಹಲಾಯ’ ಎಂದು ತಪ್ಪಾಗಿ ಉಚ್ಚರಿಸುತ್ತಾರೆ/ಬರೆಯುತ್ತಾರೆ.
ಆ) ಪಾಡ್ಯ ಸರಿ. ಚಾಂದ್ರಮಾನ ತಿಂಗಳ/ಪಕ್ಷದ ಮೊದಲ ತಿಥಿ. ಪಾಡ್ಯಮಿ ಎಂದು ಕೊನೆಯಲ್ಲೊಂದು ಮಿ ಸೇರಿಸುವುದು ತಪ್ಪಲ್ಲವಾದರೂ ಅಗತ್ಯವಿಲ್ಲ. ಬಹುಶಃ ಪಂಚಮಿ, ಸಪ್ತಮಿ, ನವಮಿ ಇದ್ದಂತೆ ಪಾಡ್ಯಮಿ ಎಂದು ಹೇಳುವ/ಬರೆಯುವ ಕ್ರಮ ಬಂದಿರಬಹುದು. ಪಾಡ್ಯ ಅಚ್ಚಕನ್ನಡ ಪದ. ಪ್ರತಿಪದ್ (ತತ್ಸಮ) <-> ಪಾಡ್ಯ (ತದ್ಭವ).
ಇ) ಅರಿಸಿನ ಸರಿ. ಹರಿದ್ರಾ (ತತ್ಸಮ) <-> ಅರಿಸಿನ (ತದ್ಭವ). ಅರಿಸಿಣ, ಅರಸಿನ, ಅರಸಿಣ ಮುಂತಾದ ರೂಪಗಳೂ ರೂಢಿಯಲ್ಲಿವೆ. ಅರಶಿಣ, ಅರಿಶಿಣ, ಹರಿಷಿಣ, ಹರಷಿಣ ಮುಂತಾದ ರೂಪಗಳನ್ನು ಬಳಸದಿರುವುದು ಒಳ್ಳೆಯದು.
ಈ) ಜಗದಭಿರಾಮ ಸರಿ. ಜಗತ್ + ಅಭಿರಾಮ = ಜಗದಭಿರಾಮ (ಜಶ್ತ್ವ ಸಂಧಿ). ಜಗದಾಭಿರಾಮ ಎಂದು ದೀರ್ಘಸ್ವರ ಬಳಸಿದರೆ ತಪ್ಪು.
ಉ) ‘ತ್ರಿಕಾಲಾಬಾಧಿತ ಸತ್ಯ’ ಸರಿ. ತ್ರಿಕಾಲ + ಅಬಾಧಿತ = ತ್ರಿಕಾಲಾಬಾಧಿತ (ಸವರ್ಣದೀರ್ಘ ಸಂಧಿ). ಭೂತ-ವರ್ತಮಾನ-ಭವಿಷ್ಯ ಎಂಬ ಮೂರು ಕಾಲಗಳಿಂದ ಬಾಧಿತವಾಗದ ( = ಅಬಾಧಿತ) ಸತ್ಯ. ಅದನ್ನು "ತ್ರಿಕಾಲಬಾಧಿತ" ಎಂದು ಬರೆದರೆ ಮೂರೂ ಕಾಲಗಳಿಂದ ಬಾಧೆಗೊಳಗಾದ ಎಂಬ ವಿರೋಧಾರ್ಥ ಬರುತ್ತದೆ! ಇದನ್ನು ಅರ್ಥಮಾಡಿಕೊಳ್ಳದೆ ಹಲವರು ‘ತ್ರಿಕಾಲಬಾಧಿತಸತ್ಯ’ ಎಂದು ಬರೆಯುತ್ತಾರೆ.

ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.
===========