ಉಪ್ಪಳ: ಶಬರಿಮಲೆ ಕ್ಷೇತ್ರ ಆಚಾರದ ರಕ್ಷಣೆ ಯಾವುದೋ ನಿರ್ದಿಷ್ಟ ಸಂಘಟನೆಯ ಕೆಲಸ ಎಂದು ತಿಳಿಯಬಾರದು. ಶಬರಿಮಲೆಗೆ ವ್ರತಧಾರಿಗಳಾಗಿ ತೆರಳುವ ಪ್ರತಿಯೊಬ್ಬ ಅಯ್ಯಪ್ಪ ಭಕ್ತನೂ ಕ್ಷೇತ್ರದ ಆಚಾರ ಉಲ್ಲಂಘನೆಯಿಂದ ಕ್ಷೇತ್ರವನ್ನು ರಕ್ಷಣೆ ಮಾಡುವ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆಯ ತಾಲೂಕು ಕಾರ್ಯದರ್ಶಿ ದಿನೇಶ್ ಚೆರುಗೋಳಿ ಹೇಳಿದರು.
ಪೈವಳಿಕೆ ಸಮೀಪದ ಕಾಯರ್‍ಕಟ್ಟೆ ಅಯ್ಯಪ್ಪ ಭಜನಾ ಮಂದಿರದಲ್ಲಿ ಶುಕ್ರವಾರ ನಡೆದ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆಯಲ್ಲಿ ಪ್ರಧಾನ ದಿಕ್ಸೂಚಿ ಭಾಷಣಗೈದು ಅವರು ಮಾತನಾಡಿದರು.
ಕೇರಳ ಸರ್ಕಾರ ಶಬರಿಮಲೆ ಕ್ಷೇತ್ರವನ್ನು ಒಂದು ಪ್ರವಾಸಿ ಕೇಂದ್ರವನ್ನಾಗಿ ಮಾಡುವ ಹುನ್ನಾರ ನಡೆಸುತ್ತಿದೆ. ಇದಕ್ಕೆ ಇತ್ತೀಚಿಗಿನ ದಿನಗಳಲ್ಲಿ ಕೆಲವು ಅಯ್ಯಪ್ಪ ಭಕ್ತರು ಅಯ್ಯಪ್ಪ ವ್ರತವನ್ನು ಆಚಾರದಂತೆ ಮಾಡದೆ ಕೇವಲ ಒಂದು ದಿನ ಮೊದಲು ಮಾಲೆ ಧರಿಸಿ ಶಬರಿಮಲೆ ತೆರಳುವುದು ಕೂಡ ಕಾರಣವಾಗಿರಬಹುದು. ಅಯ್ಯಪ್ಪ ಭಕ್ತನೂ 48 ದಿನಗಳ ಕಠಿಣ ವ್ರತವನ್ನು ಆಚರಿಸಿ ನಿಷ್ಠೆಯಿಂದ ತೆರಳಿದಲ್ಲಿ ಅಯ್ಯಪ್ಪನ ಅನುಗ್ರಹ ದೊರೆತು ಶಬರಿಮಲೆ ಕ್ಷೇತ್ರದ ಆಚಾರ, ಕಾರಣಿಕ ವೃದ್ದಿಗೊಳ್ಳುವುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಯ್ಯಪ್ಪ ಭಕ್ತನೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಕಾಯರ್ ಕಟ್ಟೆ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಅಯ್ಯಪ್ಪ ಧರ್ಮ ಪ್ರಚಾರ ರಥಯಾತ್ರೆಯ ಅಧ್ಯಕ್ಷ ರಾಮ ಪಾಟಾಳಿ, ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಯು. ಶಂಕರ ಭಟ್, ರಮಾನಾಥ ಭಂಡಾರಿ, ಶ್ರೀನಿವಾಸ ಭಟ್ ಮೊದಲಾದವರು ಉಪಸ್ಥಿತರಿದ್ದರು.


